ಭಿನ್ನಾಭಿಪ್ರಾಯದ ವಿರುದ್ಧ ಮೋದಿ ಸರಕಾರದ ದಾಳಿ: ‘ದಿ ವಾಷಿಂಗ್ಟನ್ ಪೋಸ್ಟ್’ನಿಂದ ತೀವ್ರ ಟೀಕಾಪ್ರಹಾರ

Update: 2021-02-26 13:05 GMT

ಹೊಸದಿಲ್ಲಿ, ಫೆ.26: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧ ತೀವ್ರ ಟೀಕಾಪ್ರಹಾರವನ್ನು ನಡೆಸಿರುವ ಅಮೆರಿಕದ ‘ದಿ ವಾಷಿಂಗ್ಟನ್ ಪೋಸ್ಟ್ ’ಪತ್ರಿಕೆಯು ತನ್ನ ವಿರುದ್ಧ ಭಿನ್ನಾಭಿಪ್ರಾಯಗಳನ್ನು ದಮನಿಸುವ ಮೋದಿ ಸರಕಾರದ ಸರ್ವಾಧಿಕಾರಿ ಧೋರಣೆಯಿಂದಾಗಿ ಭಾರತವು ಈಗಲೂ ಪ್ರಜಾಪ್ರಭುತ್ವ ದೇಶವಾಗಿ ಉಳಿದಿದೆಯೇ ಎಂದು ಪ್ರಶ್ನಿಸಿದೆ.

ಕೇವಲ ಗೂಗಲ್ ಡಾಕ್ಯುಮೆಂಟ್‌ನ ಆಧಾರದಲ್ಲಿ 22ರ ಹರೆಯದ ಹವಾಮಾನ ಕಾರ್ಯಕರ್ತೆಯ ವಿರುದ್ಧ ದೇಶದ್ರೋಹದ ಆರೋಪವನ್ನು ಹೊರಿಸುವ ಯಾವುದೇ ಸರಕಾರವನ್ನು ಪ್ರಜಾಸತ್ತಾತ್ಮಕ ಎಂದು ಕರೆಯಲು ಸಾಧ್ಯವಿಲ್ಲ ಎಂದು ತನ್ನ ಸಂಪಾದಕೀಯ ಲೇಖನದಲ್ಲಿ ಹೇಳಿರುವ ಪತ್ರಿಕೆಯು,ಮೋದಿ ಸರಕಾರದಿಂದ ದಿಶಾ ರವಿ ಬಂಧನವು ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ಎಂದು ಹೇಳಿಕೊಳ್ಳುವ ದೇಶವು ಈಗಲೂ ಆ ಹೆಗ್ಗಳಿಕೆಗೆ ಅರ್ಹವೇ ಎಂಬ ಬಗ್ಗೆ ಎಚ್ಚರಿಕೆಯ ಘಂಟೆಯನ್ನು ಮೊಳಗಿಸಿದೆ ಎಂದಿದೆ.

ದಿಲ್ಲಿಯಲ್ಲಿ ಪೊಲೀಸ್ ಕಸ್ಟಡಿ ಮತ್ತು ನ್ಯಾಯಾಂಗ ಬಂಧನದಲ್ಲಿ 10 ದಿನಗಳನ್ನು ಕಳೆದ ಬೆಂಗಳೂರು ನಿವಾಸಿ ದಿಶಾರನ್ನು ಕೊನೆಗೂ ಮಂಗಳವಾರ ನ್ಯಾಯಾಲಯವು ಜಾಮೀನಿನಲ್ಲಿ ಬಿಡುಗಡೆಗೊಳಿಸಿದೆ. ಸರಕಾರದ ಪ್ರಕಾರ ಸ್ವೀಡನ್ನಿನ ಹವಾಮಾನ ಕಾರ್ಯಕರ್ತೆ ಗ್ರೆಟಾ ಥನ್‌ಬರ್ಗ್ ಜೊತೆಗೆ ಗುರುತಿಸಿಕೊಂಡಿದ್ದು ಮತ್ತು ಮೂರು ನೂತನ ಕೃಷಿ ಕಾನೂನುಗಳನ್ನು ವಿರೋಧಿಸಿ ಭಾರತೀಯ ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು ಬೆಂಬಲಿಸಲು ಮಾರ್ಗಗಳನ್ನು ಸೂಚಿಸಿ ಅವರು ರೂಪಿಸಿದ್ದ ಟೂಲ್‌ಕಿಟ್ ಅನ್ನು ಶೇರ್ ಮಾಡಿಕೊಂಡಿದ್ದೇ ದಿಶಾರ ಮಹಾಪರಾಧವಾಗಿದೆ. ಇದಕ್ಕಾಗಿ ಪೊಲೀಸರು ದಿಶಾ ವಿರುದ್ಧ ದೇಶದ್ರೋಹ ಮತ್ತು ಸರಕಾರದ ವಿರುದ್ಧ ಅತೃಪ್ತಿಯನ್ನು ಹರಡಲು ಷಡ್ಯಂತ್ರ ರೂಪಿಸಿದ್ದ ಆರೋಪವನ್ನು ಹೊರಿಸಿದ್ದಾರೆ. ಈ ಆರೋಪಗಳಿಗಾಗಿ ಹಲವಾರು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಬಹುದಾಗಿದೆ ಎಂದಿರುವ ಪತ್ರಿಕೆಯು,‘ರೈತರ ಪ್ರತಿಭಟನೆಯನ್ನು ಜಾಗತಿಕವಾಗಿ ಬಿಂಬಿಸುವುದು ಅಪರಾಧವಾಗಿದ್ದರೆ ನಾನು ಜೈಲಿನಲ್ಲಿಯೇ ಉಳಿಯುವುದು ಉತ್ತಮ ’ ಎಂದು ದಿಶಾ ನ್ಯಾಯಾಲಯದಲ್ಲಿ ಘೋಷಿಸಿದ್ದನ್ನು ಉಲ್ಲೇಖಿಸಿದೆ.

ದಿಶಾರಿಗೆ ಉಪಟಳ ನೀಡುತ್ತಿರುವುದು ಅಭಿವ್ಯಕ್ತಿ ಸ್ವಾತಂತ್ರವನ್ನು ದಮನಿಸುವ ವ್ಯಾಪಕ ಹುನ್ನಾರದ ಮತ್ತು ಮೋದಿ ಸರಕಾರದಿಂದ ಪ್ರಜಾಪ್ರಭುತ್ವ ತತ್ವಗಳ ಇತರ ಉಲ್ಲಂಘನೆಗಳ ಭಾಗವಾಗಿದೆ ಎನ್ನುವುದು ಆತಂಕಕಾರಿಯಾಗಿದೆ ಎಂದು ಸಂಪಾದಕೀಯ ಲೇಖನವು ಕಳವಳ ವ್ಯಕ್ತಪಡಿಸಿದೆ.

ಗಣತಂತ್ರ ದಿನದಂದು ದಿಲ್ಲಿಯಲ್ಲಿ ರೈತರ ಪ್ರತಿಭಟನೆಯ ಕುರಿತು ವರದಿಗಳನ್ನು ಮಾಡಿದ್ದ ಹಲವಾರು ಪತ್ರಕರ್ತರೂ ಕ್ರಿಮಿನಲ್ ಅರೋಪಗಳನ್ನು ಎದುರಿಸುತ್ತಿದ್ದಾರೆ. ಪ್ರತಿಭಟನೆಗಳೊಂದಿಗೆ ಸಂಬಂಧ ಹೊಂದಿರುವ ನೂರಾರು ಜನರ ಖಾತೆಗಳನ್ನು ಬ್ಲಾಕ್ ಮಾಡುವಂತೆ ಸರಕಾರವು ಟ್ವಿಟರ್‌ನ ಮೇಲೆ ಒತ್ತಡವನ್ನು ಹೇರಿದೆ. ಅದು ಸ್ವಯಂ ಸೆನ್ಸಾರ್‌ಶಿಪ್‌ಗೆ ಒಳಗಾಗುವಂತೆ ಹಲವಾರು ಮುಖ್ಯವಾಹಿನಿ ಮಾಧ್ಯಮಗಳಿಗೆ ಬೆದರಿಕೆಯೊಡ್ಡಿದೆ ಎಂದು ‘ದಿ ವಾಷಿಂಗ್ಟನ್ ಪೋಸ್ಟ್ ’ಬೆಟ್ಟು ಮಾಡಿದೆ.

ರೈತರ ಪ್ರತಿಭಟನೆಗಳಿಗೆ ಕಾರಣವಾಗಿರುವ ಕೃಷಿ ಕಾಯ್ದೆಗಳೇ ಪ್ರಜಾಸತ್ತಾತ್ಮಕ ಮಾನದಂಡಗಳಿಗೆ ಮೋದಿಯವರ ಅಗೌರವಕ್ಕೆ ನಿದರ್ಶನವಾಗಿವೆ. ಕೃಷಿ ಉತ್ಪನ್ನಗಳ ಮಾರಾಟ ಮತ್ತು ದಾಸ್ತಾನನ್ನು ನಿಯಂತ್ರಣ ಮುಕ್ತಗೊಳಿಸಿರುವ ಕೃಷಿ ಸುಧಾರಣೆಗಳು ಅಗತ್ಯವಾಗಿದ್ದವು ಮತ್ತು ಬಹು ಹಿಂದೆಯೇ ಆಗಬೇಕಿತ್ತು ಎಂದು ಹೆಚ್ಚಿನ ಆರ್ಥಿಕ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ಮೋದಿಯವರ ಆಡಳಿತ ಬಿಜೆಪಿಯು ಸಂಸತ್ತಿನಲ್ಲಿ ಯಾವುದೇ ಅರ್ಥಪೂರ್ಣ ಚರ್ಚೆಗಳಿಗೆ ಅವಕಾಶ ನೀಡದೆ ನೂತನ ಕಾಯ್ದೆಗಳನ್ನು ಬಲವಂತದಿಂದ ಹೇರಿದೆ, ಅದು ಮೇಲ್ಮನೆಯಲ್ಲಿ ದಾಖಲೀಕೃತ ಮತದಾನಕ್ಕೂ ಅವಕಾಶ ನೀಡಿರಲಿಲ್ಲ ಎಂದಿರುವ ಪತ್ರಿಕೆಯು, ಪೌರತ್ವ ಕುರಿತ ವಿವಾದಾತ್ಮಕ ಕಾನೂನುಗಳ ಅಂಗೀಕಾರಕ್ಕೆ ಮತ್ತು ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಲೂ ಅದು ಇಂತಹುದೇ ತಂತ್ರಗಳನ್ನು ಬಳಸಿತ್ತು. ಇವುಗಳನ್ನು ವಿರೋಧಿಸಿದವರ ವಿರುದ್ಧ ದೇಶದ್ರೋಹದ ಆರೋಪ, ಸೆನ್ಸಾರ್‌ಶಿಪ್ ಮತ್ತು ಇಂಟರ್ನೆಟ್ ಸ್ಥಗಿತದಂತಹ ಕ್ರಮಗಳನ್ನು ಹೇರಲಾಗಿದ್ದನ್ನು ಉಲ್ಲೇಖಿಸಿದೆ.

ಕೆಲವು ವಿಶ್ಲೇಷಕರು ಮೋದಿ ಸರಕಾರದ ದಬ್ಬಾಳಿಕೆಯನ್ನು 1970ರ ದಶಕದಲ್ಲಿ ಆಗಿನ ಪ್ರಧಾನಿ ಇಂದಿರಾ ಗಾಂಧಿಯವರು ಹೇರಿದ್ದ ತುರ್ತು ಸ್ಥಿತಿಗೆ ಹೋಲಿಸಿರುವುದನ್ನು ಬೆಟ್ಟು ಮಾಡಿರುವ ಪತ್ರಿಕೆಯು, ಮೋದಿಯವರು ವಿದೇಶಿ ಒಳಸಂಚುಗಳು ತನ್ನ ದೇಶವನ್ನು ಗುರಿಯಾಗಿಸಿಕೊಂಡಿವೆ ಎಂದು ಬಿಂಬಿಸುತ್ತಿದ್ದಾರೆ. ಇತ್ತೀಚಿಗೆ ಸಂಸತ್ತಿನಲ್ಲಿ ತನ್ನ ಭಾಷಣದಲ್ಲಿ ವಿದೇಶಿ ವಿನಾಶಕಾರಿ ಸಿದ್ಧಾಂತಗಳಿಂದ ಭಾರತಕ್ಕೆ ರಕ್ಷಣೆ ಅಗತ್ಯವಾಗಿದೆ ಎಂದು ಪ್ರತಿಪಾದಿಸಿದ್ದರು. ಥನ್‌ಬರ್ಗ್ ಜೊತೆಗೆ ಗುರುತಿಸಿಕೊಂಡಿದ್ದಕ್ಕಾಗಿ ದಿಶಾ ವಿರುದ್ಧ ಕಾನೂನು ಕ್ರಮಗಳು ಮೋದಿಯವರ ಈ ಸುಳ್ಳು ಕಥನದ ಮುಂದುವರಿದ ಭಾಗವಾಗಿದೆ ಎಂದಿದೆ.

ಅದೃಷ್ಟವಶಾತ್ ಭಾರತದ ಕೆಲವು ಸಾಂವಿಧಾನಿಕ ಸಂಸ್ಥೆಗಳು ತಮ್ಮ ಕರ್ತವ್ಯ ನಿರ್ವಹಿಸುತ್ತಿವೆ ಎಂದಿರುವ ಪತ್ರಿಕೆಯು, ಕಳೆದ ತಿಂಗಳು ಸರ್ವೋಚ್ಚ ನ್ಯಾಯಾಲಯವು ಕೃಷಿ ಕಾಯ್ದೆಗಳ ಅನುಷ್ಠಾನವನ್ನು ಅಮಾನತುಗೊಳಿಸಿದ್ದು, ದಿಶಾ ವಿರುದ್ಧ ಸಾಕ್ಷಾಧಾರಗಳಿಲ್ಲದ್ದಕ್ಕೆ ನ್ಯಾಯಾಲಯವು ಪೊಲೀಸರನ್ನು ತರಾಟೆಗೆತ್ತಿಕೊಂಡಿದ್ದನ್ನು ಉಲ್ಲೇಖಿಸಿದೆ. ಭಾರತದ ನಾಗರಿಕ ಸಮಾಜವು ನಿಜಕ್ಕೂ ಸದೃಢವಾಗಿದೆ ಎಂದಿರುವ ಪತ್ರಿಕೆಯು, ಆದರೆ ಅದು ಸರ್ವಾಧಿಕಾರದತ್ತ ಸಾಗುತ್ತಿರುವ ಮೋದಿಯವರನ್ನು ನಿಯಂತ್ರಿಸಲು ಶಕ್ತವಿದೆಯೇ ಎನ್ನುವುದು ಪ್ರಶ್ನೆಯಾಗಿದೆ ಎಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News