ತನ್ನದೇ ಹತ್ಯೆಯ ವೀಡಿಯೊ ಚಿತ್ರೀಕರಿಸಿದ ಯುವಕ : ಸಾಮಾಜಿಕ ಜಾಲತಾಣಗಳಲ್ಲಿ ವೈರಲ್

Update: 2021-02-27 04:23 GMT
ಸಾಂದರ್ಭಿಕ ಚಿತ್ರ

ಮುಝಾಫರ್ ‌ನಗರ : ವ್ಯಕ್ತಿಯೊಬ್ಬ ಪಿಸ್ತೂಲ್ ತೆಗೆದುಕೊಂಡು, ಗುಂಡು ಲೋಡ್ ಮಾಡಿ ತನ್ನ ಅಳಿಯನಿಗೆ ಶೂಟ್ ಮಾಡುತ್ತಾನೆ. ಈ ಮೈಜುಮ್ಮೆನಿಸುವ ವೀಡಿಯೊವನ್ನು ಚಿತ್ರೀಕರಿಸಿದ್ದು, ಸ್ವತಃ ಹತ್ಯೆಗೀಡಾದ ವ್ಯಕ್ತಿ !

ಉತ್ತರ ಪ್ರದೇಶದ ಮುಝಾಫರ್‌ ನಗರದಲ್ಲಿ ಈ ಘಟನೆ ನಡೆದಿದ್ದು, ಗುಂಡೇಟು ತಗುಲಿದ ಯುವಕನ ಕೈಯಿಂದ ಮೊಬೈಲ್ ಜಾರಿ ಕೆಳಕ್ಕೆ ಬಿದ್ದು, ದೃಶ್ಯಗಳು ಕಾಣಿಸುತ್ತಿರಲಿಲ್ಲ. ಆದರೆ ನೋವಿನಿಂದ ನರಳುತ್ತಿರುವ ಆರ್ತನಾದ ಕೇಳಿ ಬರುತ್ತಿದ್ದು, 30 ಸೆಕೆಂಡ್‌ಗಳ ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಹತ್ಯೆಗೀಡಾದ ವ್ಯಕ್ತಿ ಮತ್ತು ಆರೋಪಿಯ ಹೊರತಾಗಿ ಇಬ್ಬರು ವೀಡಿಯೊದಲ್ಲಿ ಕಾಣಿಸುತ್ತಿದ್ದಾರೆ. ಅವರು ಮದ್ಯಪಾನ ಮಾಡುತ್ತಾ ಸಂಬಂಧವೇ ಇಲ್ಲದಂತೆ ಪಿಸ್ತೂಲಿನ ಸುತ್ತ ಅಡ್ಡಾಡುತ್ತಿದ್ದಾರೆ. ಆರೋಪಿ ಶೂಟ್ ಮಾಡುವ ಮುನ್ನ ಇಬ್ಬರೂ ಮಾತನಾಡುತ್ತಾ ನಗುತ್ತಿರುವ ದೃಶ್ಯ ಸೆರೆಯಾಗಿದೆ. ಇವೆಲ್ಲವನ್ನೂ ಹತ್ಯೆಗೀಡಾದ ವ್ಯಕ್ತಿ ಚಿತ್ರೀಕರಿಸಿಕೊಂಡಿದ್ದಾನೆ. ಒಬ್ಬ ಆರೋಪಿಯನ್ನು ಘಟನೆ ಸಂಬಂಧ ಬಂಧಿಸಲಾಗಿದೆ.
ಅಳಿಯನತ್ತ ಶೂಟ್ ಮಾಡಿದ ವ್ಯಕ್ತಿ ಪಿಸ್ತೂಲ್ ಸರಿ ಇದೆಯೇ ಎಂದು ಪರಿಶೀಲಿಸುತ್ತಿದ್ದ ಎಂದು ಬಂಧಿತ ವ್ಯಕ್ತಿ ಹೇಳಿದ್ದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಈ ಘಟನೆ ಎರಡು ದಿನಗಳ ಹಿಂದೆ ನಡೆದಿದ್ದು, ಹೊಲದ ಮಧ್ಯದಲ್ಲಿ ಕೊಳವೆಬಾವಿಯ ಸುತ್ತ ಆಲ್ಕೋಹಾಲ್ ಬಾಟಲಿಗಳು ಬಿದ್ದಿರುವ ದೃಶ್ಯ ಕಾಣುತ್ತಿದ್ದು, ಸಂಜೆಯ ವೇಳೆ ಎಲ್ಲರೂ ಪಾನಗೋಷ್ಠಿಗೆ ಸೇರಿದ್ದರು ಎಂದು ಅಂದಾಜಿಸಬಹುದಾಗಿದೆ.

ಈ ಬಗ್ಗೆ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಯ ಪತ್ತೆಗಾಗಿ ಶೋಧ ಮುಂದುವರಿದಿದೆ ಎಂದು ಮುಝಾಫರ್ ‌ನಗರ ಪೊಲೀಸರು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News