ಕಂಗನಾ ರಣಾವತ್‌ ಗೆ ನಕಲಿ ಇ-ಮೇಲ್ ಕಳುಹಿಸಿದ್ದ ಪ್ರಕರಣ: ಪೊಲೀಸ್ ಕಚೇರಿಯಲ್ಲಿ ಹೇಳಿಕೆ ದಾಖಲಿಸಿದ ಹೃತಿಕ್ ರೋಶನ್

Update: 2021-02-27 08:27 GMT

ಮುಂಬೈ: ನಕಲಿ ಇ-ಮೇಲ್ ಐಡಿ ಪ್ರಕರಣಕ್ಕೆ ಸಂಬಂಧಿಸಿ ಬಾಲಿವುಡ್ ನಟ ಹೃತಿಕ್ ರೋಶನ್ ಶನಿವಾರ ಮುಂಬೈ ಪೊಲೀಸ್ ಆಯುಕ್ತರ ಕಚೇರಿಗೆ ಆಗಮಿಸಿ ತನ್ನ ಹೇಳಿಕೆಯನ್ನು ದಾಖಲಿಸಿದರು.

ರೋಶನ್ ಹೆಸರಿನಲ್ಲಿ ಕಂಗನಾ ರಣಾವತ್‍ಗೆ ನಕಲಿ ಮೇಲ್ ಕಳುಹಿಸಿದ್ದಕ್ಕೆ ಸಂಬಂಧಿಸಿ 2016ರಲ್ಲಿ ದಾಖಲಾಗಿದ್ದ ದೂರಿಗೆ ಸಂಬಂಧಿಸಿ ಮುಂಬೈ ಪೊಲೀಸ್ ನ ಕ್ರೈಮ್ ಬ್ರಾಂಚ್ ರೋಶನ್‍ಗೆ ಸಮನ್ಸ್  ನೀಡಿತ್ತು. ಶನಿವಾರ ಮಧ್ಯಾಹ್ನ ಕಮಿಶನರ್ ಕಚೇರಿಯ ಕ್ರೈಮ್ ಇಂಟೆಲಿಜೆನ್ಸ್ ಯುನಿಟ್ ಗೆ ಹಾಜರಾಗುವಂತೆ ಸಮನ್ಸ್ ನಲ್ಲಿ ತಿಳಿಸಲಾಗಿತ್ತು. 

ಯಾರೋ ಕಿಡಿಗೇಡಿಗಳು ತನ್ನ ಸೋಗಿನಲ್ಲಿ ನನ್ನ ಹೆಸರಿನ ನಕಲಿ ಮೇಲ್ ಐಡಿ ಬಳಸಿ ಕಂಗನಾ ರಣಾವತ್ ಗೆ ಮೇಲ್ ಗಳನ್ನು ಕಳುಹಿಸಿದ್ದಾರೆ ಎಂದು ಆರೋಪಿಸಿ ರೋಶನ್ ದೂರು ದಾಖಲಿಸಿದ್ದರು. ಈ ದೂರು ಇಬ್ಬರ ನಡುವೆ ವಾಗ್ವಾದಕ್ಕೆ ಕಾರಣವಾಗಿತ್ತು

ಸಾಮಾಜಿಕ ಮಾಧ್ಯಮದಲ್ಲಿ ಈ ಇಬ್ಬರು ಪರಸ್ಪರ ನಿಂದಿಸಿಕೊಂಡ ಬಳಿಕ ರಣಾವತ್ ಅವರು ರೋಶನ್ ರನ್ನು “ಸಿಲ್ಲಿ ಎಕ್ಸ್’’ಎಂದು ಉಲ್ಲೇಖಿಸಿದ್ದರು. ಕೈಟ್ಸ್ ಹಾಗೂ ಕ್ರಿಶ್-3ರಲ್ಲಿ ತನ್ನೊಂದಿಗೆ ನಟಿಸಿದ್ದ ಸಹ ನಟಿ ರಣಾವತ್ ಗೆ 2016ರಲ್ಲಿ ರೋಶನ್ ಕಾನೂನು ನೋಟಿಸ್ ಕಳುಹಿಸಿಕೊಟ್ಟಿದ್ದರು.  ರಣಾವತ್ ಅವರೊಂದಿಗೆ ನನಗೆ ಯಾವುದೇ ಸಂಬಂಧವಿಲ್ಲ ಎಂದು ರೋಶನ್ ಸ್ಪಷ್ಟಪಡಿಸಿದ್ದರು. ರಣಾವತ್ ನನಗೆ ನೂರಾರು ಅಸಂಬದ್ಧ ನಿಂದನೆಯ ಇ-ಮೇಲ್ ಗಳನ್ನು ಕಳುಹಿಸಿದ್ದರು ಎಂದು ರೋಶನ್ ಹೇಳಿದ್ದರು.

ತನ್ನ ಸೋಗಿನಲ್ಲಿ ಯಾರೊ ಒಬ್ಬರು 2013 ಹಾಗೂ 2014ರಲ್ಲಿ ರಣಾವತ್ ಗೆ ಇ-ಮೇಲ್ ಗಳನ್ನು ಕಳುಹಿಸಿದ್ದಾರೆ ಎಂದು ಆರೋಪಿಸಿ ಹೃತಿಕ್ ರೋಶನ್  ದೂರು ದಾಖಲಿಸಿದ್ದರು.

‌ಹೃತಿಕ್ ರೋಶನ್ ಸಲ್ಲಿಸಿರುವ ದೂರಿನ ಮೇರೆಗೆ ಐಪಿಸಿ ಸೆಕ್ಷನ್ 149(ಮೋಸ), ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66 ಸಿ (ಗುರುತಿನ ಕಳ್ಳತನ), 66 ಡಿ(ಕಂಪ್ಯೂಟರ್ ಸಂಪನ್ಮೂಲಗಳನ್ನು ಬಳಸಿಕೊಂಡು ಮೋಸ) ಅಡಿ ಅಪರಿಚಿತ ವ್ಯಕ್ತಿಯ ವಿರುದ್ದ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News