ನೂತನ ಕೃಷಿ ಕಾಯ್ದೆ ಜಾರಿಯಾದರೆ ರೈತರ ಬಗೆಗಿನ ಸರಕಾರದ ಜವಾಬ್ದಾರಿ ಶೂನ್ಯ: ಪ್ರಕಾಶ್ ಕಮ್ಮರಡಿ

Update: 2021-02-27 12:14 GMT

ಬೆಂಗಳೂರು, ಫೆ.27: ದೇಶದ ರೈತರ ವಿಚಾರದಲ್ಲಿ ಸರಕಾರಗಳು ತನ್ನ ಜವಾಬ್ದಾರಿಯಿಂದ ಜಾರಿಕೊಳ್ಳುವುದಕ್ಕೆ ಪೂರಕವಾಗಿ ನೂತನ ಕೃಷಿ ಕಾಯ್ದೆಗಳನ್ನು ರೂಪಿಸಲಾಗಿದೆ ಎಂದು ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಪ್ರಕಾಶ್ ಕಮ್ಮರಡಿ ಬೇಸರ ವ್ಯಕ್ತಪಡಿಸಿದ್ದಾರೆ.

ಶನಿವಾರ ಪೃಥ್ವಿ ಪ್ರತಿಷ್ಠಾನ, ಮಳೆ ಆಶ್ರಿತ ಕೃಷಿ ಪುನರುಜ್ಜೀವನ ಜಾಲ ಹಾಗೂ ಪರ್ಯಾಯ ಕಾನೂನು ವೇದಿಕೆಯ ಸಂಯುಕ್ತಾಶ್ರಯದಲ್ಲಿ ನಗರದ ಕೃಷಿ ತಂತ್ರಜ್ಞಾನ ಸಂಸ್ಥೆಯಲ್ಲಿ ಆಯೋಜಿಸಲಾದ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನೂತನ ಕೃಷಿ ಕಾಯ್ದೆಗಳು ಜಾರಿಯಾದರೆ ರೈತರ ಬಗೆಗಿನ ಸರಕಾರದ ಜವಾಬ್ದಾರಿ ಶೂನ್ಯವಾಗಲಿದೆ ಎಂದು ತಿಳಿಸಿದ್ದಾರೆ.

ಬೆಳೆಗಳಿಗೆ ಬೆಂಬಲ ಬೆಲೆಯನ್ನು ಕಾನೂನಿನ ಮೂಲಕ ಖಾತ್ರಿಗೊಳಿಸುವುದು ಸರಕಾರದ ಜವಾಬ್ದಾರಿಯಾಗಿರುತ್ತದೆ. ಹಿಂದೆ ಮಾರುಕಟ್ಟೆಯ ಜವಾಬ್ದಾರಿಯನ್ನು ಸರಕಾರ ನೋಡಿಕೊಳ್ಳುತ್ತಿತ್ತು. ಆಗ ಕಾಫಿ ಬೋರ್ಡ್, ಟೀ ಬೋರ್ಡ್ ಗಳು ಸಮೃದ್ಧವಾಗಿ, ಸಮರ್ಥವಾಗಿದ್ದವು. ಆದರೆ, ಈಗ ಕೃಷಿಯಲ್ಲಿ ಸರಕಾರದ ಮಧ್ಯೆ ಪ್ರವೇಶವಿಲ್ಲದೆ ಈ ಎಲ್ಲ ನಿಗಮಗಳು ದುರ್ಬಲವಾಗಿವೆ ಎಂದು ಅವರು ವಿಷಾದಿಸಿದ್ದಾರೆ.

ತೋಟಗಾರಿಕಾ ಬೆಳೆಗಳು ಸೇರಿದಂತೆ ಇತರ ಪ್ರಮುಖ ಬೆಳೆಗಳಿಗೂ ಕನಿಷ್ಠ ಬೆಂಬಲ ಬೆಲೆ ಘೋಷಿಸಬೇಕು. ಕನಿಷ್ಠ ಬೆಂಬಲ ಬೆಲೆಗೆ ಕಾನೂನಿನ ರಕ್ಷಣೆ ನೀಡಿ ಲಾಭದಾಯಕ ಧಾರಣೆ ಖಾತರಿಗೊಳಿಸುವುದು ಅಗತ್ಯವಾಗಿರುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಈ ವೇಳೆ ವಕೀಲ ವಿನಯ್ ಶ್ರೀನಿವಾಸ್, ಕೃಷಿ ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕಿ ಡಾ.ಗ್ರೇಸಿ ಹಾಗೂ ರೈತ ಮುಖಂಡ ಕುರುಬೂರು ಶಾಂತಕುಮಾರ್ ಮುಂತಾದವರು ರೈತರೊಂದಿಗೆ ಸಂವಾದ ನಡೆಸಿ, ನೂತನ ಕೃಷಿ ಕಾಯ್ದೆಗಳ ಅಪಾಯಗಳ ಕುರಿತು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News