ಬೆಂಗಳೂರು: ಪೊಲೀಸ್ ವಶದಲ್ಲಿದ್ದ ಆರೋಪಿ ಆತ್ಮಹತ್ಯೆ ಪ್ರಕರಣ; ಸಬ್‍ ಇನ್‍ಸ್ಪೆಕ್ಟರ್ ಅಮಾನತು

Update: 2021-02-27 13:04 GMT

ಬೆಂಗಳೂರು, ಫೆ.27: ಪೊಲೀಸ್ ವಶದಲ್ಲಿರುವಾಗಲೇ ಆರೋಪಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದ ತನಿಖೆಯನ್ನು ಸಿಐಡಿಗೆ ವರ್ಗಾವಣೆ ಮಾಡಲು ನಗರ ಪೊಲೀಸರು ಮುಂದಾಗಿದ್ದಾರೆ ಎಂದು ವರದಿಯಾಗಿದೆ.

ಆರೋಪಿ ಲಿಂಗಸ್ವಾಮಿಯನ್ನು ಹನುಮಂತನಗರ ಪೊಲೀಸರು ವಿದ್ಯಾರಣ್ಯಪುರದ ಆತನ ಮನೆಗೆ ಮಹಜರಿಗೆ ಕರೆದುಕೊಂಡು ಬಂದಾಗ ಮನೆಯ ಕಿಚನ್ ಮೂಲಕ ತೆರಳಿ 2ನೆ ಮಹಡಿಯಿಂದ ಕೆಳಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಪೊಲೀಸರ ವಶದಲ್ಲಿದ್ದಾಗ ಆರೋಪಿಯು ಮೃತಪಟ್ಟಿರುವುದರಿಂದ ಆ ಸಂಬಂಧದ ತನಿಖೆಯನ್ನು ಸಿಐಡಿಗೆ ನೀಡುವ ಕುರಿತು ಚಿಂತನೆ ನಡೆಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಸಬ್‍ ಇನ್‍ಸ್ಪೆಕ್ಟರ್ ಅಮಾನತು

ಪೊಲೀಸರ ಎದುರೇ ಬಂಧಿತ ಆರೋಪಿ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಬ್‍ಇನ್‍ಸ್ಪೆಕ್ಟರ್ ಅಮಾನತು ಮಾಡಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶ ಹೊರಡಿಸಿದ್ದಾರೆ ಎಂದು ವರದಿಯಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಅಧಿಕಾರಿಗಳು ಸಬ್‍ ಇನ್‍ಸ್ಪೆಕ್ಟರ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಕರ್ತವ್ಯಲೋಪ ಆರೋಪ ಹಿನ್ನೆಲೆಯಲ್ಲಿ ಸಬ್‍ಇನ್‍ಸ್ಪೆಕ್ಟರ್ ಮಂಜುನಾಥ್ ಅವರನ್ನು ಅಮಾನತುಗೊಳಿಸಲಾಗಿದೆ.

ಯಾರು ಆರೋಪಿ: ಬಿಡಿಎ ವಿಶ್ವೇಶ್ವರಯ್ಯ ಲೇಔಟ್‍ನಲ್ಲಿ ಸೈಟ್‍ಗಳನ್ನು ಮರು ಹಂಚಿಕೆ ಮಾಡಿಕೊಡುವುದಾಗಿ ನಾಗರಾಜ್ ಎಂಬವರನ್ನು ನಂಬಿಸಿ ನಕಲಿ ದಾಖಲೆ ಸೃಷ್ಟಿಸಿಕೊಂಡು 13 ಲಕ್ಷ ರೂಪಾಯಿ ಪಡೆದು ವಂಚಿಸಿದ ಆರೋಪದಡಿ ಹನುಮಂತ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಸಂಬಂಧ ತನಿಖೆ ಕೈಗೊಂಡಿದ್ದ ಪೊಲೀಸರು ಇತ್ತೀಚೆಗಷ್ಟೇ ಸಿದ್ದಲಿಂಗಸ್ವಾಮಿಯನ್ನು ಬಂಧಿಸಿದ್ದರು. ದಾಖಲಾತಿಗೆ ಸಂಬಂಧಿಸಿದ ಕೆಲ ಕಾಗದ ಪತ್ರಗಳು ಹಾಗೂ ವಸ್ತುಗಳು ಮನೆಯಲ್ಲಿ ಇಟ್ಟಿರುವುದಾಗಿ ವಿಚಾರಣೆ ವೇಳೆ ಆರೋಪಿ ಬಾಯ್ಬಿಟ್ಟಿದ್ದ. ಈ ಸಂಬಂಧ ಆರೋಪಿಯನ್ನು ಹನುಮಂತ ನಗರ ಪೊಲೀಸರು ಗುರುವಾರ ಮಧ್ಯಾಹ್ನ ವಿದ್ಯಾರಣ್ಯಪುರದಲ್ಲಿರುವ ಆತನ ಮನೆಗೆ ಮಹಜರಿಗೆ ಕರೆದುಕೊಂಡು ಹೋಗಿದ್ದಾರೆ ಎಂದು ತಿಳಿದುಬಂದಿದೆ.

ಮನೆಯಲ್ಲಿ ಹೆಂಡತಿ-ಮಗಳನ್ನು ನೋಡಿ ಮುಜುಗರಕ್ಕೆ ಒಳಗಾಗಿದ್ದಾನೆ. ನೀರು ಕುಡಿಯುವುದಾಗಿ ಹೇಳಿ ಪೊಲೀಸರಿಂದ ಬಿಡಿಸಿಕೊಂಡು ಅಡುಗೆ ಮನೆಯ ಮುಖಾಂತರ ತೆರಳಿ 2ನೇ ಮಹಡಿಯಿಂದ ಕೆಳಗೆ ಹಾರಿದ್ದಾನೆ. ತೀವ್ರ ಗಾಯಗೊಂಡ ಆರೋಪಿಯನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News