"ಮಾಧ್ಯಮಗಳು ನಿಜವಾದ ಸುದ್ದಿ ತೋರಿಸುತ್ತಿಲ್ಲ": ಮಹಾಪಂಚಾಯತ್‌ ನಡುವೆಯೇ ವೃತ್ತಿಗೆ ರಾಜೀನಾಮೆ ನೀಡಿದ ಹಿರಿಯ ಪತ್ರಕರ್ತ

Update: 2021-02-27 13:01 GMT

ಮೀರತ್: ಮಾಧ್ಯಮಗಳು ಸುಳ್ಳು ಹೇಳುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿ ಕಿಸಾನ್‌ ಮಹಾ ಪಂಚಾಯತ್‌ ನಡುವೆಯೇ ಹಿರಿಯ ಪತ್ರಕರ್ತರೋರ್ವರು ತಮ್ಮ ವೃತ್ತಿಗೆ ರಾಜೀನಾಮೆ ನೀಡಿದ ಘಟನೆ ಮೀರತ್‌ ನಲ್ಲಿ ನಡೆದಿದೆ. ಎಬಿಪಿ ನ್ಯೂಸ್‌ ವಾಹಿನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ರಾಕೇಶ್‌ ಸಿಂಗ್‌ ತಿಂಗಳಿಗೆ ಒಂದು ಲಕ್ಷ ರೂ. ಸಂಬಳವಿರುವ ತನ್ನ ವೃತ್ತಿಯನ್ನು ತ್ಯಜಿಸಿದ್ದಾರೆ. 

"ಮಾಧ್ಯಮಗಳು ಸತ್ಯವನ್ನು ಜನರ ಮುಂದೆ ತೆರೆದಿಡಬೇಕು. ಆದರೆ ಈಗಿನ ಮಾಧ್ಯಮಗಳು ಸತ್ಯವನ್ನು ಮುಚ್ಚಿ ಹಾಕುತ್ತಿದೆ. ಸತ್ಯವನ್ನು ಜನರಿಗೆ ತೋರಿಸದಿರುವುದು ಸುಳ್ಳಿಗೆ ಸಮಾನವಾಗಿದೆ. ನಾನು ಸುಳ್ಳನ್ನು ವಿರೋಧಿಸುತ್ತೇನೆ. ಆದ್ದರಿಂದ ನಾನು ನನ್ನ ವೃತ್ತಿಗೆ ರಾಜೀನಾಮೆ ನೀಡುತ್ತಿದ್ದೇನೆ" ಎಂದು ಅವರು ಮಹಾ ಪಂಚಾಯತ್‌ ನಲ್ಲಿ ನೆರದಿದ್ದ ಜನರನ್ನುದ್ದೇಶೀಸಿ ಹೇಳಿಕೆ ನೀಡಿದ್ದಾರೆ.

"ಮಾಧ್ಯಮಗಳು ರೈತರ ಹೋರಾಟದ ಕುರಿತಾದಂತೆ ಸುದ್ದಿಗಳನ್ನು ಪ್ರಸಾರ ಮಾಡಲು ಬಿಡುತ್ತಿಲ್ಲ. ನನಗೆ ವರ್ಷಕ್ಕೆ 12 ಲಕ್ಷ ರೂ. ಪ್ಯಾಕೇಜ್‌ (ಸಂಬಳ) ಇದೆ. ನನ್ನ ತಂದೆ ಹತ್ತು ವರ್ಷದ ಮುಂಚೆ ನಿಧನರಾಗಿದ್ದಾರೆ. ಮನೆಯಲ್ಲಿ ನಾನು ಮಾತ್ರ ದುಡಿಯುತ್ತಿದ್ದೇನೆ. ನನಗೂ ಪತ್ನಿ ಮಕ್ಕಳಿದ್ದಾರೆ. ನನ್ನ ಮಗುವಿಗೀಗ 4 ವರ್ಷ. ಆತ ಮುಂದೆ ಬೆಳೆದು ದೊಡ್ಡವನಾದ ವೇಳೆ, ಇಂದಿನ ಈ ಅಘೋಷಿತ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ನೀವೇನು ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದರೆ, ನಾನು ರೈತರ ಮತ್ತು ಸತ್ಯದ ಪರ ಇದ್ದೆ ಎಂದು ಹೆಮ್ಮೆಯಿಂದ ಹೇಳಬಹುದು" ಎಂದು ರಕ್ಷಿತ್‌ ಸಿಂಗ್‌ ವೇದಿಕೆಯಲ್ಲಿ ಹೇಳಿಕೆ ನೀಡಿದ್ದಾರೆ.

ಅವರ ಮಾತುಗಳಿಗೆ ಸುತ್ತಲೂ ನೆರೆದಿದ್ದ ರೈತರು ಮತ್ತು ಪ್ರತಿಭಟನಕಾರರು ಹರ್ಷ ವ್ಯಕ್ತಪಡಿಸಿದ್ದಾರೆ. ಇನ್ನು ರಕ್ಷಿತ್‌ ರ ಈ ನಿಲುವಿಗೆ ಸಾಮಾಜಿಕ ತಾಣದಾದ್ಯಂತ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. "ಎಲ್ಲಾ ಪತ್ರಕರ್ತರಿಗೂ ಇಂತಹಾ ಧೈರ್ಯ ಮತ್ತು ಸತ್ಯದ ಪರ ನಿಲ್ಲುವ ಕಾಳಜಿ ಇರುವುದಿಲ್ಲ. ಇವರೆಲ್ಲರ ನಡುವೆ ನೀವು ವಿಭಿನ್ನವಾಗಿ ಧ್ವನಿಯೆತ್ತಿದ್ದೀರಿ" ಎಂದು ಬಳಕೆದಾರರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News