ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರುದ್ಧ ಆಮ್ ಆದ್ಮಿ ಪಕ್ಷದಿಂದ ಸರಣಿ ಪ್ರತಿಭಟನೆ

Update: 2021-02-27 13:15 GMT

ಬೆಂಗಳೂರು, ಫೆ.27: ಕೇಂದ್ರ ಹಾಗೂ ರಾಜ್ಯ ಸರಕಾರದ ದುರಾಡಳಿತ ಜನಸಾಮಾನ್ಯರ ಕತ್ತನ್ನು ಹಿಸುಕುತ್ತಿದೆ. ನನಗೂ ದೇಶದ, ರಾಜ್ಯದ ಜನರಿಗೂ ಸಂಬಂಧವಿಲ್ಲದಂತೆ ಬಿಜೆಪಿ ಸರಕಾರ ಆಡಳಿತ ನಡೆಸುತ್ತಿದೆ ಎಂದು ಬೆಂಗಳೂರು ನಗರದಾದ್ಯಂತ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಶನಿವಾರ ಸರಣಿ ಪ್ರತಿಭಟನೆ ನಡೆಸಿದರು.

ಬೆಂಗಳೂರು ನಗರದ ಪ್ರಮುಖ ಸ್ಥಳಗಳು ಹಾಗೂ 198 ವಾರ್ಡ್ ವ್ಯಾಪ್ತಿಯ ಎಲ್ಲ ಪೆಟ್ರೋಲ್ ಬಂಕ್‍ಗಳ ಬಳಿ ಜಮಾಯಿಸಿದ ಕಾರ್ಯಕರ್ತರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಫೇಸ್‍ಬುಕ್ ಲೈವ್ ಮೂಲಕ ಜನರ ಅಭಿಪ್ರಾಯ ಸಂಗ್ರಹ ಮಾಡಿದರು.

ಜಿಎಸ್‍ಟಿ, ನೋಟು ಅಮಾನ್ಯಿಕರಣ, ಕೊರೋನದಿಂದ ಜೀವನ ಮೂರಾಬಟ್ಟೆಯಾಗಿದೆ. ಆದರೆ ಪ್ರಧಾನಿ ಮೋದಿಯವರು ಅಂಬಾನಿ, ಅದಾನಿ ಗೆಳೆಯರ ಜೊತೆ ಸುಖವಾಗಿದ್ದಾರೆ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅಧಿಕಾರ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದರು.

ಮಾಗಡಿ ರಸ್ತೆಯ ಟೋಲ್‍ಗೇಟ್, ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಪ್ರಕಾಶ್ ನಗರ ವಾರ್ಡ್, ಅಯೋಧ್ಯ ಹೊಟೇಲ್, ಬಸವೇಶ್ವರ ನಗರದ ಟೋಟಲ್ ಗ್ಯಾಸ್ ಸ್ಟೇಷನ್, ಗಂಗಮ್ಮ ತಿಮ್ಮಯ್ಯ ಕಮ್ಯನಿಟಿ ಹಾಲ್ ಬಂಕ್, ಡಾ.ರಾಜ್‍ಕುಮಾರ್ ರಸ್ತೆಯ ಶ್ರೀರಾಮ ಮಂದಿರ ವಾರ್ಡ್, ಕೆ.ಜಿ.ಹಳ್ಳಿ, ಶಾಂತಿನಗರ, ಆರ್.ಆರ್.ನಗರ, ಮಲ್ಲೇಶ್ವರಂ, ಬಿಟಿಎಂ ಲೇಔಟ್, ಕೋರಮಂಗಲ, ಸರ್ವಜ್ಞ ನಗರ, ಪುಲಕೇಶಿ ನಗರ, ಎಂ.ಜಿ.ರಸ್ತೆ, ಯಲಹಂಕ, ವಿಧಾನಸೌಧ ಸುತ್ತಮುತ್ತ ಸೇರಿದಂತೆ ಅನೇಕ ಕಡೆ ಪ್ರತಿಭಟನೆ ನಡೆಸಲಾಯಿತು.

ಕೇಂದ್ರ ಹಾಗೂ ರಾಜ್ಯ ಸರಕಾರದ ವಿರುದ್ಧ ಆಕ್ರೋಶ ಹೊರಹಾಕಿದ ಜನ ಅಚ್ಚೇದಿನವನ್ನು ನಂಬಿಕೊಂಡು ಬೀದಿಗೆ ಬಂದೆವು. ಕಾಂಗ್ರೆಸ್ ಹಾಗೂ ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳು ಎಂದು ಕಿಡಿಕಾರಿದರು. ಚಾಮರಾಜಪೇಟೆ, ಪಾದರಾಯನಪುರ, ಚಿಕ್ಕಪೇಟೆ ಭಾಗದಲ್ಲಿ ಆಟೋ ಚಾಲಕರು ಪ್ರತಿಭಟನೆಗೆ ಕೈ ಜೋಡಿಸಿದರು. ಮಲ್ಲೇಶ್ವರಂನ ಕಾಡು ಮಲ್ಲೇಶ್ವರ ವಾರ್ಡ್ ಸೇರಿದಂತೆ ಅನೇಕ ಕಡೆ ನಾಗರಿಕರು ತಮ್ಮ ಮನೆಯ ಮುಂದೆ ಬಿತ್ತಿಫಲಕ ಪ್ರದರ್ಶಿಸಿ ಪ್ರತಿಭಟನೆಗೆ ಬೆಂಬಲ ಸೂಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News