ವಕೀಲರ ಅಪಹರಣ, ಹಣ ಸುಲಿಗೆ ಪ್ರಕರಣ: ಐವರ ಬಂಧನ

Update: 2021-02-27 13:27 GMT

ಬೆಂಗಳೂರು, ಫೆ.27: ವಕೀಲನನ್ನು ಅಪಹರಿಸಿ, ಹಣ ಸುಲಿಗೆ ಆರೋಪದಡಿ ಇಲ್ಲಿನ ಬನಶಂಕರಿ ಠಾಣಾಪೊಲೀಸರು ಐವರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

ಟಿಪ್ಪು ಸುಲ್ತಾನ್, ಝಾಫರ್, ವಿಶಾಲ್, ದೀಪಕ್, ನವೀನ್ ಬಂಧಿತ ಆರೋಪಿಗಳಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತರ ವಿರುದ್ಧ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಅಪರಾಧ ಪ್ರಕರಣ ದಾಖಲಾಗಿದ್ದು, ಈ ಬಗ್ಗೆ ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಫೆ.13ರಂದು ರಾತ್ರಿ ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾರಿನಲ್ಲಿ ವಕೀಲರು ಮನೆಗೆ ಹೋಗುತ್ತಿದ್ದರು. ಈ ವೇಳೆ ಮಾರ್ಗ ಮಧ್ಯೆ ಆರೋಪಿಗಳು ಕಾಲಿಗೆ ಗಾಯವಾಗಿರುವ ರೀತಿ ವರ್ತಿಸಿ ಸಹಾಯ ಮಾಡುವಂತೆ ಕೇಳಿಕೊಂಡಿದ್ದಾರೆ. ಮಾನವೀಯತೆ ದೃಷ್ಟಿಯಿಂದ ವಕೀಲರು ಕಾರು ಹತ್ತಿಸಿಕೊಂಡಿದ್ದರು. ಈ ವೇಳೆ ಆರೋಪಿಗಳು ನಕಲಿ ಗನ್ ತೋರಿಸಿ ಅಪಹರಿಸಿ, ಅವರ ಮೇಲೆ ಹಲ್ಲೆ ಮಾಡಿ ಮಂಡ್ಯ ಜಿಲ್ಲೆಯ ಮಳವಳ್ಳಿಗೆ ಕರೆದುಕೊಂಡು ಹೋಗಿದ್ದರು.

ಬಳಿಕ ಅಲ್ಲಿಂದ ವಕೀಲರ ಪತ್ನಿಗೆ ಮೊಬೈಲ್ ಮೂಲಕ ಸಂಪರ್ಕಿಸಿ ನಿಮ್ಮ ಪತಿಗೆ ಅಪಘಾತವಾಗಿದ್ದು, ತುರ್ತಾಗಿ ಆನ್‍ಲೈನ್ ಮೂಲಕ ಹಣ ಕಳುಹಿಸುವಂತೆ ತಿಳಿಸಿದ್ದರು. ಇದನ್ನು ನಂಬಿ ವಕೀಲರ ಪತ್ನಿ 15 ಸಾವಿರ ರೂ. ಕಳುಹಿಸಿದ್ದಾರೆ. ಹಣ ಕೈ ಸೇರುತ್ತಿದ್ದಂತೆ ಮೊಬೈಲ್ ಕಸಿದುಕೊಂಡು ವಕೀಲರನ್ನು ಮಳವಳ್ಳಿಯಲ್ಲಿ ಬಿಟ್ಟು ಆರೋಪಿಗಳು ಪರಾರಿಯಾಗಿದ್ದರು ಎನ್ನಲಾಗಿದೆ.

ನಂತರ ಅಲ್ಲಿಂದ ಬಂದ ವಕೀಲ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News