ರೈತರು, ನಾಡಿನ ಜನತೆ ನೆಮ್ಮದಿಯಿಂದ ಬದುಕುವಂತಹ ಬಜೆಟ್‍ ಮಂಡಿಸುತ್ತೇನೆ: ಸಿಎಂ ಬಿಎಸ್‍ವೈ

Update: 2021-02-27 13:38 GMT

ಬೆಂಗಳೂರು, ಫೆ.27: ಪ್ರಸ್ತುತ ಸಾಲಿನ 2021-20 ಬಜೆಟ್‍ನಲ್ಲಿ ರಾಜ್ಯದ ರೈತ ವರ್ಗ ಸೇರಿದಂತೆ ಎಲ್ಲರಿಗೂ ಉತ್ತಮವಾದದ್ದನ್ನು ನೀಡುತ್ತೇವೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಶನಿವಾರ ನಗರದ ವಿನ್ಸರ್ ಮ್ಯಾನರ್ ವೃತ್ತದಲ್ಲಿ ಬಿಬಿಎಂಪಿ ವತಿಯಿಂದ ಪ್ರತಿಷ್ಠಾಪಿಸಲಾಗಿರುವ ಮೇಕ್ ಇನ್ ಇಂಡಿಯಾ ಸಿಂಹ ಲಾಂಛನ ಅನಾವರಣಗೊಳಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಮಾ.8ರಂದು ಬಜೆಟ್ ಮಂಡನೆ ಮಾಡಲಿದ್ದು, ರೈತ ಸಮುದಾಯ ಮತ್ತು ನಾಡಿನ ಜನತೆ ನೆಮ್ಮದಿಯಿಂದ ಬದುಕುವಂತಹ ಬಜೆಟ್‍ನ್ನು ಕೊಡುತ್ತೇನೆ. ಈಗಾಗಲೇ ಈ ಸಂಬಂಧ ತಯಾರಿಗಳು ನಡೆದಿವೆ ಎಂದು ತಿಳಿಸಿದರು.

ಕರ್ನಾಟಕ ಹೂಡಿಕೆಗೆ ನೆಚ್ಚಿನ ತಾಣವಾಗಿದೆ. ಸಮೀಕ್ಷೆ ಪ್ರಕಾರ, ವಿಶ್ವದಲ್ಲೇ ಬೆಂಗಳೂರು ವೇಗವಾಗಿ ಬೆಳೆಯುತ್ತಿರುವ ತಾಂತ್ರಿಕ ನೆಲೆ ಎಂದು ಖ್ಯಾತಿ ಪಡೆದಿದೆ ಎಂದ ಅವರು, ಪ್ರಧಾನಿ ಮೋದಿಯವರ ‘ಮೇಕ್ ಇನ್ ಇಂಡಿಯಾ’ ಪರಿಕಲ್ಪನೆಯನ್ನು ಅನಾವರಣಗೊಳಿಸುವ ಈ ಲಾಂಛನವನ್ನು ಉದ್ಘಾಟಿಸಿರುವುದು ಸಂತೋಷಕರ ವಿಷಯ. ನಗರ ಹೂಡಿಕೆ ಸ್ನೇಹಿಯಾಗಿದೆ. ಜಿಡಿಪಿ ಶೇ.20ಕ್ಕೆ ಹೆಚ್ಚಿಸಲು ಕ್ರಮ ವಹಿಸಿದ್ದು, ಇದರ ಬಹುಪಾಲು ಕೊಡುಗೆ ಬೆಂಗಳೂರಿನದ್ದೇ ಆಗಿದೆ ಎಂದರು.

ಬೆಂಗಳೂರು ನಗರ ಹಲವು ಕ್ಷೇತ್ರಗಳ ಕಂಪನಿಗಳ ನೆಲೆಯಾಗಿದೆ. ನಗರವನ್ನು ಇನ್ನಷ್ಟು ಅಭಿವೃದ್ಧಿಪಡಿಸಲು, ಸುಗಮ ಸಂಚಾರ ಸೌಲಭ್ಯ, ಸಾರ್ವಜನಿಕ ಸಂಚಾರ ಬಳಕೆಗೆ ಒತ್ತು ಹಾಗೂ ವೈಜ್ಞಾನಿಕ ತ್ಯಾಜ್ಯ ವಿಲೇವಾರಿಗೆ ಆದ್ಯತೆ ನೀಡಲಾಗುವುದು. ಬೆಂಗಳೂರನ್ನು ವಿಶ್ವಮಾನ್ಯ ನಗರ ಮಾಡುವುದಕ್ಕೆ ಒತ್ತು ನೀಡಲಾಗುವುದು. ಅದಕ್ಕಾಗಿ ಮಿಷನ್- 2022 ಕೈಗೊಳ್ಳಲಾಗಿದೆ ಎಂದುಅವರು ನುಡಿದರು.

ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಸಚಿವರಾದ ಆರ್.ಅಶೋಕ್, ಬಸವರಾಜ್ ಬೊಮ್ಮಾಯಿ, ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್, ಶಾಸಕ ಉದಯ್ ಬಿ.ಗರುಡಾಚಾರ್, ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಪಾಲಿಕೆ ಆಡಳಿತಗಾರ ಗೌರವ್ ಗುಪ್ತಾ, ಪಾಲಿಕೆ ಆಯುಕ್ತ ಎನ್.ಮಂಜುನಾಥ್ ಪ್ರಸಾದ್, ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News