ಖಾಸಗಿ ಆಸ್ಪತ್ರೆಗಳಲ್ಲಿ ಒಂದು ಡೋಸ್ ಕೋವಿಡ್ ಲಸಿಕೆಗೆ 250 ರೂ. ನಿಗದಿಪಡಿಸಿದ ಕೇಂದ್ರ

Update: 2021-02-27 18:07 GMT

ಹೊಸದಿಲ್ಲಿ,ಫೆ.27: 60 ವರ್ಷ ಮೇಲ್ಪಟ್ಟವರಿಗೆ ಮತ್ತು ಇತರ ಕಾಯಿಲೆಗಳಿಂದ ಬಳಲುತ್ತಿರುವ 45 ವರ್ಷ ಮೇಲ್ಪಟ್ಟವರಿಗೆ ಮಾ.1ರಿಂದ ಕೋವಿಡ್-19 ಲಸಿಕೆಗಳನ್ನು ನೀಡಲು ದೇಶವು ಸಜ್ಜಾಗಿದೆ. ಇದೇ ವೇಳೆ,ಖಾಸಗಿ ಆಸ್ಪತ್ರೆಗಳು ಪ್ರತಿ ಡೋಸ್ ಕೋವಿಡ್-19 ಲಸಿಕೆಗೆ 250 ರೂ.ಶುಲ್ಕ ವಿಧಿಸಬಹುದಾಗಿದೆ ಎಂದು ಅಧಿಕೃತ ಮೂಲಗಳು ಶನಿವಾರ ತಿಳಿಸಿವೆ.

ಸರಕಾರಿ ಆಸ್ಪತ್ರೆಗಳಲ್ಲಿ ಲಸಿಕೆಗಾಗಿ ಜನರಿಗೆ ಯಾವುದೇ ಶುಲ್ಕವನ್ನು ವಿಧಿಸದಿರಲು ಸರಕಾರವು ನಿರ್ಧರಿಸಿದೆ,ಆದರೆ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಪಡೆಯುವವರು ನಿಗದಿತ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

150 ರೂ.ಲಸಿಕೆಯ ವೆಚ್ಚ ಮತ್ತು 100 ರೂ.ಸೇವಾ ಶುಲ್ಕ, ಹೀಗೆ ಖಾಸಗಿ ಆಸ್ಪತ್ರೆಗಳು ಗರಿಷ್ಠ 250 ರೂ.ಗಳನ್ನು ವಿಧಿಸಬಹುದು. ಮುಂದಿನ ಆದೇಶದವರೆಗೆ ಈ ವ್ಯವಸ್ಥೆಯು ಜಾರಿಯಲ್ಲಿರುತ್ತದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಈ ಬಗ್ಗೆ ಮಾಹಿತಿಯನ್ನು ನೀಡಲಾಗಿದೆ ಎಂದು ಈ ಮೂಲಗಳು ತಿಳಿಸಿದವು.

ಅರ್ಹ ಫಲಾನುಭವಿಗಳು ಲಸಿಕೆಯನ್ನು ಪಡೆಯಲು ಮಾ.1ರಿಂದಲೇ ಕೋ-ವಿನ್ ಪೋರ್ಟಲ್‌ನಲ್ಲಿ ಮತ್ತು ಆರೋಗ್ಯ ಸೇತುವಂತಹ ಇತರ ಆ್ಯಪ್‌ಗಳಲ್ಲಿ ತಮ್ಮನ್ನು ನೋಂದಾಯಿಸಿಕೊಳ್ಳಬಹುದು. ಇವುಗಳಲ್ಲಿ ಕೋವಿಡ್-19 ಲಸಿಕೆ ಕೇಂದ್ರಗಳಾಗಿ ಕಾರ್ಯ ನಿರ್ವಹಿಸುತ್ತಿರುವ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ವಿವರಗಳು,ಲಭ್ಯ ದಿನಾಂಕ ಮತ್ತು ಸಮಯದ ಬಗ್ಗೆ ಮಾಹಿತಿಗಳಿರುತ್ತವೆ. ಅರ್ಹ ಫಲಾನುಭವಿಗಳು ಗುರುತಿಸಲಾದ ಲಸಿಕೆ ಕೇಂದ್ರಗಳಿಗೆ ತೆರಳಿ ತಮ್ಮನ್ನು ನೋಂದಾಯಿಸಿಕೊಂಡು ಲಸಿಕೆ ಪಡೆಯಲು ಸ್ಥಳದಲ್ಲಿಯೇ ನೋಂದಣಿ ಸೌಲಭ್ಯವೂ ಇದೆ ಎಂದು ಕೋವಿಡ್-19 ಲಸಿಕೆ ನೀಡಿಕೆ ಕುರಿತು ಅಧಿಕಾರಯುತ ಸಮಿತಿಯ ಅಧ್ಯಕ್ಷ ಆರ್.ಎಸ್.ಶರ್ಮಾ ಅವರು ಶುಕ್ರವಾರ ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News