ಭಾರತ ಸಹಿತ ಕೆಲವು ರಾಷ್ಟ್ರಗಳಲ್ಲಿ ಕೊರೋನದ ಬಳಿಕ ಶಿಕ್ಷಣ ಬಜೆಟ್ ಕಡಿತ: ವಿಶ್ವಬ್ಯಾಂಕ್ ವರದಿ

Update: 2021-02-28 16:12 GMT

ಹೊಸದಿಲ್ಲಿ, ಫೆ. 28: ಕೊರೋನ ಸೋಂಕಿನ ಬಳಿಕ ಕಡಿಮೆ ಆದಾಯ ಮತ್ತು ಕೆಳ-ಮಧ್ಯಮ ಆದಾಯದ 65% ದೇಶಗಳು ಬಜೆಟ್‌ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಅನುದಾನ ಕಡಿತಗೊಳಿಸಿದ್ದರೆ ಅಧಿಕ ಮತ್ತು ಮಧ್ಯಮ ಆದಾಯದ 33% ದೇಶಗಳು ಮಾತ್ರ ಶಿಕ್ಷಣದ ಅನುದಾನ ಕಡಿತಗೊಳಿಸಿದೆ . ಶಿಕ್ಷಣಕ್ಕೆ ಬಜೆಟ್ ಅನುದಾನ ಕಡಿತಗೊಳಿಸಿದ ದೇಶಗಳಲ್ಲಿ ಭಾರತವೂ ಸೇರಿದೆ ಎಂದು ವಿಶ್ವಬ್ಯಾಂಕ್ ವರದಿ ತಿಳಿಸಿದೆ.

ಕಡಿಮೆ- ಮಧ್ಯಮ ಆದಾಯದ ದೇಶಗಳ ಸರಕಾರಗಳು ಈಗ ಶಿಕ್ಷಣ ಕ್ಷೇತ್ರಕ್ಕೆ ಮಾಡುತ್ತಿರುವ ವೆಚ್ಚ ಸುಸ್ಥಿರ ಅಭಿವೃದ್ಧಿ ಗುರಿ(ಎಸ್‌ಡಿಜಿ)ಸಾಧಿಸುವುದಕ್ಕೆ ಸಾಕಾಗದು ಎಂದು ವರದಿ ಹೇಳಿದೆ. ಯುನೆಸ್ಕೋದ ಗ್ಲೋಬಲ್ ಎಜುಕೇಶನ್ ಮಾನಿಟರಿಂಗ್ ವರದಿಯ ಸಹಯೋಗದಲ್ಲಿ ವಿಶ್ವಬ್ಯಾಂಕ್ ನಡೆಸಿದ ಅಧ್ಯಯನದ ಆಧಾರದಲ್ಲಿ ಈ ವರದಿ ಬಿಡುಗಡೆಯಾಗಿದೆ.

ಶಿಕ್ಷಣ ಬಜೆಟ್‌ನ ಮೇಲೆ ಕೊರೋನ ಸೋಂಕಿನ ಅಲ್ಪಾವಧಿ ಪರಿಣಾಮದ ಬಗ್ಗೆ ತಿಳಿದುಕೊಳ್ಳಲು ವಿಶ್ವದ ವಿವಿಧೆಡೆಯ 29 ದೇಶಗಳಿಂದ ಮಾಹಿತಿ ಸಂಗ್ರಹಿಸಲಾಗಿದೆ. ಶಾಲೆ ಮತ್ತು ವಿವಿ ವಿದ್ಯಾರ್ಥಿಗಳ ಅಭಿಪ್ರಾಯ ಆಧರಿಸಿದ ಮಾಹಿತಿಯನ್ನು ವಿಶ್ವಬ್ಯಾಂಕ್‌ನ ಸ್ಥಳೀಯ ತಂಡದೊಂದಿಗೆ ಪರಿಶೀಲಿಸಲಾಗಿದೆ. ಕಡಿಮೆ ಆದಾಯದ 3 ದೇಶಗಳು(ಅಪಘಾನಿಸ್ತಾನ, ಇಥಿಯೋಪಿಯಾ,ಉಗಾಂಡ), 14 ಕೆಳ-ಮಧ್ಯಮ ಆದಾಯದ ದೇಶಗಳು (ಬಾಂಗ್ಲಾದೇಶ, ಈಜಿಪ್ಟ್, ಭಾರತ, ಕೆನ್ಯಾ, ಕಿರ್ಗಿಜ್ ಗಣರಾಜ್ಯ, ಮೊರೊಕ್ಕೊ, ಮ್ಯಾನ್ಮಾರ್, ನೇಪಾಳ, ನೈಜೀರಿಯಾ, ಪಾಕಿಸ್ತಾನ, ಫಿಲಿಪ್ಪೀನ್ಸ್, ತಾಂಝಾನಿಯಾ, ಉಕ್ರೇನ್, ಉಜ್ಬೇಕಿಸ್ತಾನ), 10 ಅಧಿಕ-ಮಧ್ಯಮ ಆದಾಯದ ದೇಶಗಳು(ಅರ್ಜೆಂಟೀನಾ, ಬ್ರೆಝಿಲ್, ಕೊಲಂಬಿಯಾ, ಜೋರ್ಡಾನ್, ಇಂಡೊನೇಶಿಯಾ, ಕಝಕ್‌ಸ್ತಾನ, ಮೆಕ್ಸಿಕೊ, ಪೆರು, ರಶ್ಯ, ಟರ್ಕಿ) ಮತ್ತು 2 ಅಧಿಕ ಆದಾಯದ ದೇಶಗಳ(ಚಿಲಿ ಮತ್ತು ಪನಾಮ) ಜನರನ್ನು ಸಮೀಕ್ಷೆ ನಡೆಸಲಾಗಿತ್ತು.

ಅರ್ಜೆಂಟೀನಾ, ಬ್ರೆಝಿಲ್, ಈಜಿಪ್ಟ್, ಭಾರತ, ಮ್ಯಾನ್ಮಾರ್, ನೈಜೀರಿಯಾ, ಪಾಕಿಸ್ತಾನ ಮತ್ತು ರಶ್ಯ ದೇಶಗಳು ಬಜೆಟ್‌ನಲ್ಲಿ ಶಿಕ್ಷಣಕ್ಕೆ 10%ಕ್ಕಿಂತಲೂ ಕಡಿಮೆ ಪಾಲು ನೀಡಿದ್ದು, ಕೇಂದ್ರ ಸರಕಾರದ ಬಜೆಟ್‌ಗೆ ಹೊರತಾಗಿ ಇತರ ಆರ್ಥಿಕ ಮೂಲಗಳಿಂದ ಶಿಕ್ಷಣ ಕ್ಷೇತ್ರಕ್ಕೆ ನೆರವು ಒದಗಿಸುವ ನಿರೀಕ್ಷೆಯಿದೆ. ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಶಿಕ್ಷಣ ವಲಯಕ್ಕೆ ಹೆಚ್ಚುವರಿ ವೆಚ್ಚದ ಹೊರೆ ಬಿದ್ದಿದೆ. ಜೊತೆಗೆ ಶಾಲೆಗೆ ಹೋಗುವ ವಯಸ್ಸಿನ ಜನಸಂಖ್ಯೆ ಹೆಚ್ಚಿರುವುದರಿಂದ ಈ ಹೆಚ್ಚುವರಿ ವೆಚ್ಚವನ್ನು ದೇಶಗಳು ಯಾವ ರೀತಿ ಹೊಂದಿಸಿಕೊಳ್ಳುತ್ತವೆ ಎಂಬುದು ಸ್ಪಷ್ಟವಾಗಿಲ್ಲ ಎಂದು ವರದಿ ಹೇಳಿದೆ.

ಶಾಲಾ ವ್ಯವಸ್ಥೆಯನ್ನು ಮತ್ತೆ ಸುರಕ್ಷಿತವಾಗಿ ಪುನರಾರಂಭಿಸುವ ತುರ್ತು ಅಗತ್ಯದ ಹೊರತಾಗಿಯೂ , ಸಮೀಕ್ಷೆಗೆ ಒಳಪಡಿಸಲಾದ ದೇಶಗಳಲ್ಲಿ ಅರ್ಧಾಂಶಕ್ಕೂ ಹೆಚ್ಚು ದೇಶಗಳು ತಮ್ಮ ಶಿಕ್ಷಣ ಬಜೆಟ್ ಅನ್ನು ಕಡಿತಗೊಳಿಸಿದೆ. ಮುಂದಿನ ದಿನಗಳಲ್ಲಿ ಆರ್ಥಿಕ ಪರಿಸ್ಥಿತಿ ಹದಗೆಡುವ ಸಾಧ್ಯತೆಯನ್ನು ಗಮನಿಸಿದಾಗ ಇದು ಉತ್ತಮ ಕ್ರಮವಲ್ಲ. ಇನ್ನೊಂದೆಡೆ, ಅಧಿಕ -ಮಧ್ಯಮ ಆದಾಯದ ದೇಶಗಳ ಕುಟುಂಬದವರು ಶಿಕ್ಷಣ ಉದ್ದೇಶಕ್ಕೆ ವಿನಿಯೋಗಿಸುವ ಮೊತ್ತಕ್ಕಿಂತ ಅಧಿಕ ಮೊತ್ತವನ್ನು ಕಡಿಮೆ ಮತ್ತು ಕೆಳ-ಮಧ್ಯಮ ಆದಾಯದ ದೇಶಗಳ ಕುಟುಂಬಗಳು ವಿನಿಯೋಗಿಸಬೇಕಿದೆ. ಕೊರೋನ ಸೋಂಕು ಹಲವು ಕುಟುಂಬಗಳ ಆದಾಯ ಮತ್ತು ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News