ಕೇರಳ ಚುನಾವಣೆ: ಯುಡಿಎಫ್ ಸೀಟು ಹಂಚಿಕೆ ಫೈನಲ್

Update: 2021-03-01 04:14 GMT
ಯುಡಿಎಫ್ ಮುಖಂಡರು. (ಫೈಲ್ ಫೋಟೊ)

ಕೊಚ್ಚಿನ್, ಮಾ.1: ಕೇರಳ ವಿಧಾನಸಭಾ ಚುನಾವಣೆಗೆ ಸೀಟು ಹಂಚಿಕೆ ಬಗ್ಗೆ ಯುಡಿಎಫ್ ಅಂಗಪಕ್ಷಗಳು ಅಂತಿಮ ನಿರ್ಧಾರಕ್ಕೆ ಬಂದಿವೆ. ಯಾವ ಪಕ್ಷ ಎಷ್ಟು ಸ್ಥಾನಗಳಲ್ಲಿ ಸ್ಪರ್ಧಿಸಬೇಕು ಎಂಬ ವಿಚಾರದಲ್ಲಿ ಒಮ್ಮತಕ್ಕೆ ಬರಲಾಗಿದೆ ಎಂದು ಉನ್ನತ ಮೂಲಗಳು ಹೇಳಿವೆ.

ಒಪ್ಪಂದದ ಪ್ರಕಾರ ಕಾಂಗ್ರೆಸ್ ಪಕ್ಷ 95 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ಎರಡನೇ ಅತಿದೊಡ್ಡ ಪಕ್ಷವಾದ ಮುಸ್ಲಿಂ ಲೀಗ್‌ಗೆ 26 ಸ್ಥಾನಗಳನ್ನು ಬಿಟ್ಟುಕೊಡಲಾಗಿದೆ. ಪಿ.ಜೆ.ಜೋಸೆಫ್ ಬಣ 9, ಆರ್‌ಎಸ್‌ಪಿ 5, ಕೇರಳ ಕಾಂಗ್ರೆಸ್ (ಜಾಕೋಬ್), ಸಿಎಂಪಿ, ಫಾರ್ವರ್ಡ್ ಬ್ಲಾಕ್, ಮಾಜಿ ಎನ್‌ಸಿಪಿ ಶಾಸಕ ಮಣಿ ಸಿ. ಕಪ್ಪನ್ ನೇತೃತ್ವದ ನ್ಯಾಶನಲಿಸ್ಟ್ ಕಾಂಗ್ರೆಸ್ ಕೇರಳ ಹಾಗೂ ಜನತಾದಳ ತಲಾ ಒಂದು ಸ್ಥಾನ ಪಡೆದಿವೆ. ಬುಧವಾರ ನಡೆಯುವ ಉನ್ನತ ಮಟ್ಟದ ಸಭೆಯಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಮೂಲಗಳು ಹೇಳಿವೆ.

ಕೋವಿಡ್-19 ಪಾಸಿಟಿವ್ ಬಳಿಕ ಕ್ವಾರಂಟೈನ್‌ನಲ್ಲಿರುವ ಕೇರಳ ಕಾಂಗ್ರೆಸ್ ಮುಖಂಡ ಪಿ.ಜೆ.ಜೋಸೆಫ್ ಹೊರತುಪಡಿಸಿ ಎಲ್ಲ ಅಂಗಪಕ್ಷಗಳ ಮುಖಂಡರ ಜತೆ ಚರ್ಚೆ ನಡೆಸಲಾಗಿದೆ ಎಂದು ಹಿರಿಯ ಯುಡಿಎಫ್ ಮುಖಂಡರೊಬ್ಬರು ಬಹಿರಂಗಪಡಿಸಿದ್ದಾರೆ. ಮಾಡು ಇಲ್ಲವೇ ಮಡಿ ಹೋರಾಟಕ್ಕೆ ಸಜ್ಜಾಗಿರುವ ಕಾಂಗ್ರೆಸ್ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯುವ ಉದ್ದೇಶದಿಂದ ಗರಿಷ್ಠ ಸ್ಥಾನಗಳಲ್ಲಿ ಸ್ಪರ್ಧಿಸಿದೆ.

ಯುನೈಟೆಡ್ ಕೇರಳ ಕಾಂಗ್ರೆಸ್ (ಎಂ) ಸ್ಪರ್ಧಿಸಿದ್ದ 15 ಸ್ಥಾನಗಳನ್ನು ಬಿಟ್ಟುಕೊಡುವಂತೆ ಜೋಸೆಫ್ ಬಣ ಆಗ್ರಹಿಸಿದ್ದು, ಅಂತಿಮವಾಗಿ 12 ಸ್ಥಾನಗಳಿಗೆ ಒಪ್ಪಿಕೊಂಡಿದೆ ಎಂದು ತಿಳಿದುಬಂದಿದೆ. ಕಾಂಗ್ರೆಸ್ ಪಕ್ಷ ಮಾತ್ರ ಜೋಸೆಫ್ ಬಣಕ್ಕೆ 8-9 ಸ್ಥಾನಗಳಲ್ಲಿ ಬಿಟ್ಟುಕೊಡಲು ಮುಂದಾಗಿದೆ. 2019ರ ಚುನಾವಣೆಯಲ್ಲಿ ಕಾಂಗ್ರೆಸ್ 87 ಸ್ಥಾನಗಳಲ್ಲಿ ಸ್ಪರ್ಧಿಸಿತ್ತು. ಕಾಂಗ್ರೆಸ್ ಎಂಟು ಸ್ಥಾನಗಳನ್ನು ಹೆಚ್ಚುವರಿಯಾಗಿ ಪಡೆದರೆ, 23 ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಮುಸ್ಲಿಂ ಲೀಗ್ ಮೂರು ಸ್ಥಾನಗಳನ್ನು ಹೆಚ್ಚುವರಿಯಾಗಿ ಪಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News