ಕೋವಿಡ್ ಲಸಿಕೆ ಪಡೆದ ಶತಾಯುಷಿಗಳು

Update: 2021-03-02 04:22 GMT

ಬೆಂಗಳೂರು/ ಹೈದರಾಬಾದ್: ಕೋವಿಡ್-19 ಲಸಿಕೆಗಳ ಕ್ಷಮತೆ ಬಗೆಗಿನ ತಪ್ಪುಕಲ್ಪನೆ ಹಾಗೂ ಭೀತಿಗೆ ಅವಕಾಶವಿಲ್ಲದಂತೆ, 102 ವರ್ಷದ ನಿವೃತ್ತ ಸೇನಾ ಅಧಿಕಾರಿ ಕೆ.ಎನ್. ಸುಬ್ರಮಣಿಯನ್ ಬೆಂಗಳೂರಿನಲ್ಲಿ ಕೋವಿಡ್-19 ವಿರುದ್ಧದ ಲಸಿಕೆ ಪಡೆದಿದ್ದಾರೆ. ಅಂತೆಯೇ 100 ವರ್ಷ ವಯಸ್ಸಿನ ಜೈದೇವ್ ಚೌಧರಿ ಹೈದರಾಬಾದ್‌ನಲ್ಲಿ ಸೋಮವಾರ ಲಸಿಕೆ ಪಡೆದಿದ್ದಾರೆ.

ಸೋಮವಾರ ಸಂಜೆ 5ರ ಸುಮಾರಿಗೆ ಹೆಬ್ಬಾಳದ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಸುಬ್ರಮಣಿಯನ್ ಲಸಿಕೆ ಹಾಕಿಸಿಕೊಂಡರು. ಬೆಂಗಳೂರಿನಲ್ಲಿ ಕೋವಿಡ್-19 ಲಸಿಕೆ ಹಾಕಿಸಿಕೊಂಡ ಅತ್ಯಂತ ಹಿರಿಯರು ಎಂಬ ಕೀರ್ತಿಗೆ ಅವರು ಪಾತ್ರರಾಗಿದ್ದಾರೆ. ಅಂತೆಯೇ ನಿವೃತ್ತ ಉದ್ಯಮಿಯಾಗಿರುವ ಚೌಧರಿ, ಹೈದರಾಬಾದ್‌ನ ಆಸ್ಪತ್ರೆಗೆ ತೆರಳಿ ಲಸಿಕೆ ಹಾಕಿಸಿಕೊಂಡರು. ಇಬ್ಬರಲ್ಲೂ ಯಾವುದೇ ಅಡ್ಡ ಪರಿಣಾಮಗಳು ಕಾಣಿಸಿಕೊಂಡಿಲ್ಲ. 60 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಹಾಗೂ ಸಹ ಅಸ್ವಸ್ಥತೆಯಿಂದ ಬಳಲುತ್ತಿರುವ 45-59 ವಯೋಮಿತಿಯ ಎಲ್ಲರೂ ಲಸಿಕೆ ಹಾಕಿಸಿಕೊಳ್ಳುವಂತೆ ಚೌಧರಿ ಸಲಹೆ ಮಾಡಿದರು.

ನಾಲ್ಕು ವರ್ಷದ ಹಿಂದೆ ಅಗ್ನಿ ಆಕಸ್ಮಿಕದಲ್ಲಿ ಶ್ವಾಸಕೋಶಕ್ಕೆ ಹಾನಿಯಾಗಿದ್ದ ನವೀನ್ ಕುಮಾರ್ (70) ಎಂಬ ಬೆಂಗಳೂರು ನಿವಾಸಿ ಆಕ್ಸಿಜನ್ ಸಿಲಿಂಡ್ ಜತೆಗೇ ಆಗಮಿಸಿ ಲಸಿಕೆ ಪಡೆದರು. ಕೋವಿಡ್-19 ಸಾಂಕ್ರಾಮಿಕ ಆರಂಭವಾದ ಬಳಿಕ ಇದೇ ಮೊದಲ ಬಾರಿಗೆ ಮನೆಯಿಂದ ಹೊರಬಂದಿದ್ದಾಗಿ ಅವರು ತಿಳಿಸಿದರು. ಅವರ ಪತ್ನಿ ಮಂಜುಳಾ ಕೂಡಾ ಲಸಿಕೆ ಹಾಕಿಸಿಕೊಂಡರು.

ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ 97 ವರ್ಷದ ರಾಮಸ್ವಾಮಿ ಪಾರ್ಥಸಾರಥಿ ಕೂಡಾ ಲಸಿಕೆ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News