ಗುಜರಾತ್ ಸ್ಥಳೀಯ ಸಂಸ್ಥೆ ಚುನಾವಣೆ: ಬಿಜೆಪಿ ಪ್ರಾಬಲ್ಯ,ಮತ್ತೊಮ್ಮೆ ಆಪ್ ಗಮನಾರ್ಹ ನಿರ್ವಹಣೆ

Update: 2021-03-02 12:03 GMT

ಹೊಸದಿಲ್ಲಿ ಗುಜರಾತ್ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ವಿವಿಧ ಮುನ್ಸಿಪಾಲಿಟಿಗಳಲ್ಲಿ ರವಿವಾರ ನಡೆದ ಚುನಾವಣೆಯಲ್ಲಿ 8,474 ಸೀಟುಗಳ ಪೈಕಿ 2,085ರಲ್ಲಿ ಜಯ ಸಾಧಿಸಿದ ಆಡಳಿತಾರೂಢ ಬಿಜೆಪಿ ಪಕ್ಷ  ಪ್ರತಿಸ್ಪರ್ಧಿ ಕಾಂಗ್ರೆಸ್ ವಿರುದ್ದ ಸ್ಪಷ್ಟ ಮುನ್ನಡೆ ಪಡೆದಿದೆ. ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ(ಎಎಪಿ)ತನ್ನ ಮೊದಲ ಪ್ರಯತ್ನದಲ್ಲಿ 15 ಸೀಟುಗಳಲ್ಲಿ ಜಯ ಸಾಧಿಸಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ತವರು ರಾಜ್ಯದಲ್ಲಿ ಬಿಜೆಪಿ ಉತ್ತಮ ನಿರ್ವಹಣೆ ಮುಂದುವರಿಸಿದ್ದು, ಕಳೆದ ವಾರ ಪ್ರಕಟವಾಗಿದ್ದ ಆರು ಪ್ರಮುಖ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಜಯ ಸಾಧಿಸಿತ್ತು. 576 ಸೀಟುಗಳಲ್ಲಿ 483 ಸೀಟುಗಳನ್ನು ಗೆದ್ದುಕೊಂಡಿತ್ತು. ಅಹ್ಮದಾಬಾದ್, ಸೂರತ್, ರಾಜ್ ಕೋಟ್, ವಡೋದರ, ಭಾವನಗರ ಹಾಗೂ ಜಾಮ್ನಗರ ಪಾಲಿಕೆಯನ್ನು ಗೆದ್ದುಕೊಂಡಿತ್ತು. ಎಎಪಿ 27ರಲ್ಲಿ ಜಯ ಸಾಧಿಸಿ ತನ್ನ ಇರುವಿಕೆಯನ್ನು ಸಾಬೀತುಪಡಿಸಿತ್ತು. ಕಾಂಗ್ರೆಸ್ ಯಾವ ನಗರದಲ್ಲೂ ಗಮನಾರ್ಹ ಪ್ರದರ್ಶನ ನೀಡಿಲ್ಲ.

ಇಂದು ನಡೆದ ಮತ ಎಣಿಕೆಯಲ್ಲಿ ಬಿಜೆಪಿ 81 ಮುನ್ಸಿಪಾಲಿಟಿಗಳಲ್ಲಿ 75ರಲ್ಲಿ ಮುನ್ನಡೆ ಪಡೆದಿದ್ದರೆ, ಕಾಂಗ್ರೆಸ್ 4ಕ್ಕೆ ಕುಸಿದಿದೆ. ಆಪ್ 2ರಲ್ಲಿ ಮುನ್ನಡೆಯಲ್ಲಿದೆ.

ಬಿಜೆಪಿ ಎಲ್ಲ 31 ಜಿಲ್ಲಾ ಪಂಚಾಯತ್ ಗಳಲ್ಲಿ ಮುನ್ನಡೆಯಲ್ಲಿದೆ. 231 ತಾಲೂಕ್ ಪಂಚಾಯತ್ ಗಳ ಪೈಕಿ ಬಿಜೆಪಿ 196ರಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಕಾಂಗ್ರೆಸ್ 33ರಲ್ಲಿ ಮುನ್ನಡೆಯಲ್ಲಿದೆ.

ಒಟ್ಟು 8,474 ಸ್ಥಾನಗಳಲ್ಲಿ 8,235 ಸ್ಥಾನಗಳಲ್ಲಿ ಚುನಾವಣೆ ನಡೆದಿತ್ತು. ಉಳಿದ ಸೀಟುಗಳಲ್ಲಿ ಅವಿರೋಧ ಆಯ್ಕೆ ನಡೆದಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News