‘ರಾಷ್ಟ್ರೀಯ ಶಿಕ್ಷಣ ನೀತಿ’ ರಾಜ್ಯದ ಸಿದ್ಧತೆಗಳಿಗೆ ಕಸ್ತೂರಿ ರಂಗನ್ ಮೆಚ್ಚುಗೆ

Update: 2021-03-02 17:43 GMT

ಬೆಂಗಳೂರು, ಮಾ.2: ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕೇಂದ್ರದಲ್ಲಿ ಪ್ರಕಟಿಸುವ ಮುನ್ನವೆ ಆ ನೀತಿಯ ಜಾರಿಗೆ ಎಲ್ಲ ರಾಜ್ಯಗಳಿಗಿಂತ ಮೊದಲೆ ಕರ್ನಾಟಕವು ಸರ್ವ ಸಿದ್ಧತೆಗಳನ್ನು ಮಾಡಿಕೊಂಡು ಕಾರ್ಯಪಡೆಯನ್ನೂ ರಚನೆ ಮಾಡಿಕೊಂಡಿದ್ದರ ಬಗ್ಗೆ ಇಸ್ರೊ ಮಾಜಿ ಅಧ್ಯಕ್ಷ ಹಾಗೂ ರಾಷ್ಟ್ರೀಯ ಶಿಕ್ಷಣ ನೀತಿಯ ಕರಡು ಸಮಿತಿ ಅಧ್ಯಕ್ಷ ಡಾ.ಕಸ್ತೂರಿ ರಂಗನ್ ಮೆಚ್ಚುಗೆ ವ್ಯಕ್ತಪಡಿಸಿದರು. 

ಮಂಗಳವಾರ ನಗರದಲ್ಲಿ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ವತಿಯಿಂದ ನೀಡಲಾದ ‘ಜೀವಮಾನ ಸಾಧನೆ’ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಅವರು, ನಾವು ದಿಲ್ಲಿಯಲ್ಲಿ ವರದಿಯನ್ನು ಸಿದ್ಧಪಡಿಸಿ ಮಾನವ ಸಂಪನ್ಮೂಲ ಸಚಿವಾಯಲಯಕ್ಕೆ ಸಲ್ಲಿಸಿದ್ದೆವು. ನಂತರ ಎಲ್ಲ ರಾಜ್ಯಗಳಿಗೂ ನೀತಿಯ ಕರಡು ಪ್ರತಿಗಳನ್ನು ಕಳಿಸಿಕೊಡಲಾಯಿತು ಎಂದರು.

ಕರ್ನಾಟಕವು ಕರಡು ಪ್ರತಿ ಸಿಕ್ಕಿದ ಕೂಡಲೆ ಅದನ್ನು ಅನುಷ್ಠಾನ ಮಾಡುವ ನಿಟ್ಟಿನಲ್ಲಿ ಸಿದ್ಧತೆಗಳನ್ನು ಮಾಡಿಕೊಂಡಿತು. ಸಲಹೆ-ಸಹಕಾರ ನೀಡಲು ಕಾರ್ಯಪಡೆಯ್ನೂ ರಚಿಸಿಕೊಂಡಿತು. ಇದು ಉಪ ಮುಖ್ಯಮಂತ್ರಿ ಅಶ್ವತ್ಥನಾರಾಯಣ ಅವರ ದೂರದೃಷ್ಟಿಗೆ ಸಾಕ್ಷಿಯಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಇಡೀ ಶಿಕ್ಷಣ ನೀತಿಯನ್ನು ಹೇಗೆ ಜಾರಿ ಮಾಡಬೇಕು? ಪ್ರಾಥಮಿಕ ಹಂತ, ಪ್ರೌಢ ಹಂತ, ಕಾಲೇಜು ಹಂತ ಹಾಗೂ ವಿಶ್ವವಿದ್ಯಾಲಯದ ಹಂತಗಳಲ್ಲಿ ಯಾವ ರೀತಿಯಲ್ಲಿ ಜಾರಿ ಮಾಡಬೇಕು ಎಂಬ ಎಲ್ಲ ಸಿದ್ಧತೆಯ ಮಾಹಿತಿಯನ್ನೂ ಅಶ್ವತ್ಥನಾರಾಯಣ ನನಗೆ ನೀಡಿದರು. ಆಮೇಲೆ ಎಷ್ಟು ವೇಗವಾಗಿ ಪ್ರಕ್ರಿಯೆಗಳು ನಡೆದವು ಎಂದರೆ, ಕಾರ್ಯಪಡೆ ವರದಿ ನೀಡಿದ್ದೂ ಆಯಿತು. ಆ ವರದಿಯನ್ನು ಸಂಪುಟ ಒಪ್ಪಿದ್ದೂ ಆಯಿತು. ಅದಾದ ಮೇಲೆ ಆಡಳಿತಾತ್ಮಕ, ಕಾನೂನಾತ್ಮಕ ಸುಧಾರಣೆಗಳು ಆದವು. ಒಂದು ಸರಕಾರ ಇಷ್ಟು ಕ್ಷಿಪ್ರಗತಿಯಲ್ಲಿ ಕಾರ್ಯೋನ್ಮುಖವಾಗುವುದು ವಿರಳ. ಇದೇ ಕರ್ನಾಟಕ ಎಂದು ಕಸ್ತೂರಿ ರಂಗನ್ ಮುಕ್ತಕಂಠದಿಂದ ಶ್ಲಾಘಿಸಿದರು. 

ಶಿಕ್ಷಣ ನೀತಿಯಲ್ಲಿ ಮೂಲ ವಿಜ್ಞಾನಕ್ಕೆ ಒತ್ತು: ಕಾರ್ಯಕ್ರಮದಲ್ಲಿ ಎಲ್ಲ ವಿಜ್ಞಾನಿಗಳಿಗೆ ಗೌರವ ಸಮರ್ಪಣೆ ಮಾಡಿ ಮಾತನಾಡಿದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ಮೂಲ ವಿಜ್ಞಾನ ಬೋಧನೆಯ ಶೈಲಿ ಬದಲಾಗಬೇಕಿದೆ. ಹಾಗೆಯೇ, ಮಕ್ಕಳಿಗೆ ಮೂಲ ವಿಜ್ಞಾನವನ್ನು ಕಲಿಯಲು ಹೆಚ್ಚೆಚ್ಚು ಪ್ರೋತ್ಸಾಹ ನೀಡಬೇಕಿದೆ. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಗುಣಮಟ್ಟದ ಬೋಧನೆ, ಕಲಿಕೆಯ ಜತೆಗೆ ಸಂಶೋಧನೆಗೂ ಹೆಚ್ಚು ಮಹತ್ವ ನೀಡಲಾಗಿದೆ. ಆವಿಷ್ಕಾರ ಕ್ಷೇತ್ರದಲ್ಲಿ ಕರ್ನಾಟಕ ಮೊದಲನೆ ಸ್ಥಾನದಲ್ಲಿದ್ದು, ಈ ಸ್ಥಾನವನ್ನು ಉಳಿಸಿಕೊಳ್ಳಲು ಶಿಕ್ಷಣ ನೀತಿಯನ್ನು ವೇಗಗತಿಯಲ್ಲಿ ಜಾರಿ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

ಇನ್ನು ಹತ್ತು ವರ್ಷಗಳಲ್ಲಿ 150 ವಿಶ್ವವಿದ್ಯಾಲಯಗಳನ್ನು ಸ್ಥಾಪನೆ ಮಾಡುವ ಗುರಿ ಹೊಂದಲಾಗಿದೆ. ವೈಯಕ್ತಿಕವಾಗಿ ಹೇಳುವುದಾದರೆ, ಹತ್ತು ವರ್ಷಗಳಲ್ಲಿ ಎಲ್ಲ ಗುಣಮಟ್ಟದ ಕಾಲೇಜುಗಳು ವಿವಿಗಳಾಗಬೇಕು ಎನ್ನುವುದು ನನ್ನ ಉದ್ದೇಶ. ಮುಂದಿನ ದಿನಗಳಲ್ಲಿ ವಿವಿಗಳಿಗೆ, ಕಾಲೇಜುಗಳಿಗೆ ಮಾನ್ಯತೆ ನೀಡುವ ಅಧಿಕಾರ ರಾಜ್ಯಗಳಿಗೆ ದಕ್ಕಲಿದೆ. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಶಿಕ್ಷಣದ ಸುಧಾರಣೆಗಳ ಪರ್ವವೇ ಆರಂಭವಾಗಲಿದೆ ಎಂದು ಉಪ ಮುಖ್ಯಮಂತ್ರಿ ತಿಳಿಸಿದರು.

ಇದೇ ವೇಳೆ ಉಪ ಮುಖ್ಯಮಂತ್ರಿ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ತರಬೇತಿ ಸಂಸ್ಥೆಯನ್ನು ಉದ್ಘಾಟಿಸಿದರು. ಬಿಡಿಎ ಅಧ್ಯಕ್ಷ ಹಾಗೂ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಅಕಾಡೆಮಿಯ ಅಧ್ಯಕ್ಷ ಪ್ರೊ.ಅಯ್ಯಪ್ಪನ್, ಅಕಾಡೆಮಿ ಸಿಇಒ ಡಾ.ರಮೇಶ್ ಮುಂತಾದವರು ಪಾಲ್ಗೊಂಡಿದ್ದರು.

ಪ್ರಶಸ್ತಿ ಪುರಸ್ಕೃತ ವಿಜ್ಞಾನಿಗಳು
ಪ್ರೊ.ಸಿ.ಎನ್.ಆರ್.ರಾವ್ ಜೀವಮಾನ ಸಾಧನೆ ಪ್ರಶಸ್ತಿ(ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್, ಕೃಷಿ, ವೈದ್ಯಕೀಯ), ಪದ್ಮವಿಭೂಷಣ ಡಾ.ಕೆ.ಕಸ್ತೂರಿ ರಂಗನ್, ಪದ್ಮಶ್ರೀ ಡಾ.ಗೋಡ್‍ಬಳೆ ರೋಹಿಣಿ ಮಧುಸೂದನ್(ಹಾಜರಿರಲಿಲ್ಲ), ಪದ್ಮಭೂಷಣ ಡಾ.ಎಂ.ಮಹಾದೇವಪ್ಪ, ಪ್ರೊ.ಸಿ.ಕಾಮೇಶ್ವರ ರಾವ್. 
ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಜೀವಮಾನ ಸಾಧನೆ ಪ್ರಶಸ್ತಿ (ವಿಜ್ಞಾನ- ಕನ್ನಡದಲ್ಲಿ ಬರವಣಿಗೆ) ನಾಗೇಶ್ ಹೆಗಡೆ, ಡಾ.ಸಿ.ಆರ್.ಚಂದ್ರಶೇಖರ್ ಸೇರಿದಂತೆ ಇನ್ನಿತರ ವಿಜ್ಞಾನಿಗಳಿಗೆ ಗೌರವ ಸಮರ್ಪಣೆ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News