ವೇತನ ಹೆಚ್ಚಳ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಪಟ್ಟು: ಬಿಸಿಯೂಟ ನೌಕರರಿಂದ ಬೃಹತ್ ಪ್ರತಿಭಟನೆ

Update: 2021-03-03 13:07 GMT

ಬೆಂಗಳೂರು, ಮಾ.3: ವೇತನ ಹೆಚ್ಚಳ, ಪಿಂಚಣಿ ಜಾರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬಿಸಿಯೂಟ ನೌಕರರು ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಿದರು.

ಬುಧವಾರ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಬೆಂಗಳೂರು ನಗರಕ್ಕೆ ಆಗಮಿಸಿದ ಬಿಸಿಯೂಟ ನೌಕರರು, ಮಕ್ಕಳ ಹಸಿವನ್ನು ತಣಿಸುವ ನಮಗೆ ರಾಜ್ಯ ಸರಕಾರ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕು. ನಾವು ಶ್ರೀಮಂತರಾಗುವಷ್ಟು ವೇತನ ಕೇಳುತ್ತಿಲ್ಲ. ಕನಿಷ್ಠ ಘನತೆಯಿಂದ ಬದುಕುವಷ್ಟು ವೇತನ ನೀಡಬೇಕೆಂದು ಒತ್ತಾಯಿಸಿದರು.

ಈ ವೇಳೆ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಗೌರವ ಅಧ್ಯಕ್ಷೆ ವರಲಕ್ಷ್ಮಿ ಮಾತನಾಡಿ, ಬಿಸಿಯೂಟ ಕಾರ್ಯದಲ್ಲಿ ತೊಡಗಿರುವ ಹೆಚ್ಚಿನ ಸಂಖ್ಯೆಯ ನೌಕರರು ಬಡವರಾಗಿದ್ದಾರೆ. ಹಾಗೂ ವಿಧವೆಯರು, ವಿಚ್ಚೇಧಿತ ಮಹಿಳೆಯರಾಗಿದ್ದಾರೆ. ಇವರಿಗೆ ಬೇರೆ ಆದಾಯದ ಮೂಲಗಳಿಲ್ಲ. ಈ ಬಗ್ಗೆ ರಾಜ್ಯ ಸರಕಾರ ವಿಶೇಷ ಆಸಕ್ತಿ ವಹಿಸಬೇಕೆಂದು ಮನವಿ ಮಾಡಿದ್ದಾರೆ.

ಬಿಸಿಯೂಟ ನೌಕರರಿಗೆ ನಿಗದಿತ ವೇಳೆಗೆ ಸಂಬಳ ಆಗುತ್ತಿಲ್ಲ. ಕಳೆದ ನಾಲ್ಕು ತಿಂಗಳಿಂದ ಹಲವು ನೌಕರರಿಗೆ ಸಂಬಳ ಆಗದೆ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಹೀಗಾಗಿ ಕೂಡಲೇ ವೇತನವನ್ನು ಬಿಡುಗಡೆ ಮಾಡಬೇಕೆಂದು ಅವರು ಒತ್ತಾಯಿಸಿದರು.

ಬಿಸಿಯೂಟ ಯೋಜನೆಯಡಿ 1.20 ಲಕ್ಷಕ್ಕೂ ಹೆಚ್ಚು ನೌಕರರು ಕಳೆದ 15 ವರ್ಷಕ್ಕೂ ಹೆಚ್ಚು ಕಾಲದಿಂದ ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ ಬಡ ಸಮುದಾಯದ ನೌಕರರೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ಇವರಿಗೆ ವೇತನ ಹೆಚ್ಚಳ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದು ಅವರು ರಾಜ್ಯ ಸರಕಾರಕ್ಕೆ ಮನವಿ ಮಾಡಿದ್ದಾರೆ.

ಹಕ್ಕೊತ್ತಾಯಗಳು

-2021-22ರ ಬಜೆಟ್‍ನಲ್ಲಿ ಹೆಚ್ಚಿನ ಅನುದಾನ ಮೀಸಲಿಡಬೇಕು.

-ನೂತನ ಶಿಕ್ಷಣ ನೀತಿ ಜಾರಿ ಮಾಡುವಾಗ ಬಿಸಿಯೂಟ ಯೋಜನೆಯನ್ನು ಬಲಗೊಳಿಸಬೇಕು.

-ಬಿಸಿಯೂಟ ನೌಕರರನ್ನು ಖಾಯಂ ಮಾಡಿ ಶಾಸನಾತ್ಮಕ ಸಲವತ್ತುಗಳನ್ನು ಜಾರಿ ಮಾಡಬೇಕು.

-ಪ್ರತಿ ತಿಂಗಳು 5ನೇ ತಾರೀಖಿನಂದ ವೇತನ ಬಿಡುಗಡೆ ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News