ಬೆಂಗಳೂರು: ಮೀಟರ್ ದರ ಏರಿಕೆಗೆ ಒತ್ತಾಯಿಸಿ ಆಟೋ ಚಾಲಕರ ಧರಣಿ

Update: 2021-03-03 14:33 GMT

ಬೆಂಗಳೂರು, ಮಾ.3: ಆಟೋ ಮೀಟರ್ ದರ ಏರಿಕೆ, ಲಾಕ್‍ಡೌನ್ ಪರಿಹಾರ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಆಟೋ ರಿಕ್ಷಾ ಡ್ರೈವರ್ ಯೂನಿಯನ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಬುಧವಾರ ನಗರದ ರೈಲ್ವೆ ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನದವರೆಗೂ ಪ್ರತಿಭಟನಾ ಜಾಥಾ ನಡೆಸಿದ ಆಟೋ ಚಾಲಕರು, ಕೋವಿಡ್ ಲಾಕ್‍ಡೌನ್ ಸಮಯದಲ್ಲಿ ಕೆಲಸವಿಲ್ಲದೆ ಸಂಕಷ್ಟಕ್ಕೆ ತುತ್ತಾಗಿದ್ದೇವೆ. ಈ ವೇಳೆ ಇತರೆ ಮೂಲಗಳಿಂದ ಸಾಲ ಪಡೆದು ಜೀವನ ನಡೆಸಿದ್ದೇವೆ. ಹೀಗಾಗಿ ರಾಜ್ಯ ಸರಕಾರ ಕೂಡಲೇ ಕೋವಿಡ್ ಪರಿಹಾರವನ್ನು ವಿತರಿಸುವ ಮೂಲಕ ಆಟೋ ಚಾಲಕರನ್ನು ಸಾಲ ಬಾಧೆಯಿಂದ ಮುಕ್ತಿಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.

ಆಟೋ, ಟ್ಯಾಕ್ಸಿ, ಲಘು ಗೂಡ್ಸ್ ವಾಹನ ಚಾಲಕರಿಗೆ ಕಲ್ಯಾಣ ಮಂಡಳಿ ರಚನೆಯಾಗಬೇಕು, ಗುರುತಿನ ಚೀಟಿ ನೀಡಿ, ಕಲ್ಯಾಣ ಯೋಜನೆಗಳನ್ನು ಜಾರಿಗಾಗಿ ಬಜೆಟ್‍ನಲ್ಲಿ ಒಂದು ಸಾವಿರ ಕೋಟಿ ರೂ. ನೀಡಬೇಕೆಂದು ಆಟೋರಿಕ್ಷಾ ಡ್ರೈವರ್ ಯೂನಿಯನ್‍ನ ಅಧ್ಯಕ್ಷ ಬಿ.ವಿ.ರಾಘವೇಂದ್ರ ಆಗ್ರಹಿಸಿದ್ದಾರೆ.

15 ವರ್ಷಗಳ ಹಳೆಯ ವಾಹನ ಸ್ಕ್ರಾಪ್ ಪಾಲಿಸಿ ಅವೈಜ್ಞಾನಿಕವಾಗಿದ್ದು, ಅದನ್ನು ವಾಪಸ್ ಪಡೆಯಬೇಕು. ಸಂಚಾರಿ ಪೊಲೀಸರು ಮತ್ತು ಆರ್‍ಟಿಒ ಅಧಿಕಾರಿಗಳ ದುಬಾರಿ ದಂಡ ವಿಧಿಸುವ ನಿಯಮವನ್ನು ಹಿಂಪಡೆಯಬೇಕೆಂದು ಅವರು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News