ಕೊವ್ಯಾಕ್ಸಿನ್ 81 ಶೇ. ಪರಿಣಾಮಕಾರಿ: ಫಲಿತಾಂಶಗಳ ವಿವರ ಪ್ರಕಟಿಸಿದ ಭಾರತ್ ಬಯೋಟೆಕ್

Update: 2021-03-03 17:21 GMT

ಹೊಸದಿಲ್ಲಿ,ಮಾ.3; ಕೋವಿಡ್-19 ಸೋಂಕಿನ ವಿರುದ್ಧ ನೀಡಲಾಗುವ ಕೊವ್ಯಾಕ್ಸಿನ್ ಲಸಿಕೆಯ ಮೂರು ಹಂತಗಳ ಪ್ರಾಯೋಗಿಕ ಪರೀಕ್ಷೆಗಳ ಫಲಿತಾಂಶಗಳನ್ನು ತಯಾರಕ ಸಂಸ್ಥೆ ‘ಬಯೋಟೆಕ್’ ಬುಧವಾರ ಪ್ರಕಟಿಸಿದ್ದು, ಲಸಿಕೆಯು ಶೇ.81ರಷ್ಟು ಕ್ಲಿನಿಕಲ್ ಪರಿಣಾಮಕಾರಿತ್ವವನ್ನು ಪ್ರದರ್ಶಿಸಿದೆಯೆಂದು ತಿಳಿಸಿದೆ.

ಭಾರತ್ ಬಯೋಟೆಕ್‌ನ ಚೇರ್‌ಮನ್ ಹಾಗೂ ಆಡಳಿತ ನಿರ್ದೇಶಕ ಡಾ. ಕೃಷ್ಣ ಎಲ್ಲಾ ಹೊಸದಿಲ್ಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಕೊವ್ಯಾಕ್ಸಿನ್ ಲಸಿಕೆಯ ಮೂರು ಹಂತಗಳ ಪ್ರಾಯೋಗಿಕ ಪರೀಕ್ಷೆಗಳ ವಿವರಗಳನ್ನು ಪ್ರಕಟಿಸಿದರು. ‘‘ ಲಸಿಕೆಯ ಸಂಶೋಧನೆಯಲ್ಲಿ ಈ ದಿನವು ಮಹತ್ವದ ಮೈಲುಗಲ್ಲಾಗಿದೆ. 27 ಸಾವಿರ ಮಂದಿಯನ್ನೊಳಗೊಂಡ ಕೋವಿಡ್-19 ಲಸಿಕೆಯ 1,2 ಹಾಗೂ 3 ಹಂತಗಳ ಪ್ರಾಯೋಗಿಕ ಪರೀಕ್ಷೆಗಳ ಫಲಿತಾಂಶಗಳ ದತ್ತಾಂಶಗಳ ವರದಿಯನ್ನು ನಾವು ಪ್ರಕಟಿಸಿದ್ದೇವೆ. ಕೊವ್ಯಾಕ್ಸಿನ್ ಲಸಿಕೆಯು ಕೊರೋನ ವೈರಸ್ ವಿರುದ್ಧ ಅತ್ಯಧಿಕ ಮಟ್ಟದ ಕ್ಲಿನಿಕಲ್ ಪರಿಣಾಮಕಾರಿತ್ವದ ಪ್ರವೃತ್ತಿಯನ್ನು ಪ್ರದರ್ಶಿಸಿದೆ. ಅಷ್ಟೇ ಅಲ್ಲದೆ, ಕ್ಷಿಪ್ರವಾಗಿ ತಲೆಯೆತ್ತುತ್ತಿರುವ ಕೊರೋನ ವೈರಸ್‌ನ ವಿವಿಧ ಪ್ರಭೇದಗಳ ವಿರುದ್ಧವೂ ಗಣನೀಯವಾಗಿ ಪ್ರತಿರೋಧ ಸಾಮರ್ಥ್ಯವನ್ನು ಹೊಂದಿದೆ’’ ಎಂದು ತಿಳಿಸಿದ್ದಾರೆ.

     ಕೋವಿಡ್-19 ಸೋಂಕಿಗೊಳಗಾಗದೆ ಎರಡನೆ ಡೋಸ್ ಪಡೆದವರಿಗೆ ಸೋಂಕು ಬರುವುದನ್ನು ತಡೆಗಟ್ಟುವಲ್ಲಿ ಕೊವ್ಯಾಕ್ಸಿನ್ ಲಸಿಕೆಯು ಶೇ.81ರಷ್ಟು ಮಧ್ಯಂತರ ಪರಿಣಾಮಕಾರಿತ್ವವನ್ನು ಪ್ರದರ್ಶಿಸಿದೆಯೆಂದು ಕಂಪೆನಿಯ ಹೇಳಿಕೆಯು ತಿಳಿಸಿದೆ. ಕೋವ್ಯಾಕ್ಸಿನ್ ಲಸಿಕೆಯನ್ನು ಭಾರತ್ ಬಯೋಟೆಕ್ ಸಂಸ್ಥೆಯು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್)ಯ ಸಹಭಾಗಿತ್ವದೊಂದಿಗೆ ಅಭಿವೃದ್ಧಿಪಡಿಸಿದೆ.

ಕೊವ್ಯಾಕ್ಸಿನ್‌ಗೆ ಯುರೋಪ್ ರಾಷ್ಟ್ರಗಳಿಂದ ಬೇಡಿಕೆಯ ನಿರೀಕ್ಷೆ

 ಕೊವ್ಯಾಕ್ಸಿನ್ ಲಸಿಕೆಯ ಬಗ್ಗೆ ಕೆಲವು ಯುರೋಪಿಯನ್ ರಾಷ್ಟ್ರಗಳು ಆಸಕ್ತಿಯನ್ನು ತೋರಿಸಿವೆ. ಭಾರತದಲ್ಲಿನ ಫ್ರೆಂಚ್ ರಾಯಭಾರಿ ಅವರು ಇತ್ತೀಚೆಗೆ ಹೈದರಾಬಾದ್‌ನಲ್ಲಿರುವ ಭಾರತ್ ಬಯೋಟೆಕ್‌ನ ಘಟಕಕ್ಕೆ ಭೇಟಿ ನೀಡಿದ್ದರು. ಇದೊಂದು ಸೌಹಾರ್ದಯುತ ಭೇಟಿಯೆಂದು ಹೇಳಲಾಗಿತ್ತಾದರೂ, ಯುರೋಪ್ ಒಕ್ಕೂಟದ ರಾಷ್ಟ್ರಗಳು ತಮ್ಮ ಜನಸಂಖ್ಯೆಗೆ ಬೇಕಾಗುವಷ್ಟು ಲಸಿಕೆಯನ್ನು ಸಂಪಾದಿಸಲು ಹರಸಾಹಸ ಪಡುತ್ತಿರುವ ಸಂದರ್ಭದಲ್ಲಿ ಫ್ರೆಂಚ್ ರಾಯಭಾರಿಯವರ ಈ ಭೇಟಿಯು ಕುತೂಹಲ ಸೃಷ್ಟಿಸಿದೆ. ಕೊವ್ಯಾಕ್ಸಿನ್ ಲಸಿಕೆಯ ಮೂರನೇ ಹಂತದ ಪ್ರಾಯೋಗಿಕ ಪರೀಕ್ಷೆಯ ಫಲಿತಾಂಶವು ಯುರೋಪ್‌ನ ಕೆಲವು ದೇಶಗಳು ಆ ಲಸಿಕೆಯನ್ನು ಆಯ್ಕೆ ಮಾಡಿಕೊಳ್ಳುವ ಸಾಧ್ಯತೆಗಳು ಇವೆಯೆಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News