ಬೆಂಗಳೂರು; ನೂತನ ಕೃಷಿ ಕಾಯ್ದೆಗಳ ಹಿಂಪಡೆಯಲು ಒತ್ತಾಯಿಸಿ ಧರಣಿ

Update: 2021-03-03 17:52 GMT

ಬೆಂಗಳೂರು, ಮಾ.3: ಕೇಂದ್ರ ಸರಕಾರ ಜಾರಿ ಮಾಡಿರುವ ನೂತನ ಕೃಷಿ ಕಾಯ್ದೆಗಳನ್ನು ಕೂಡಲೆ ಹಿಂಪಡೆದು, ರೈತರ ಸ್ವಾಭಿಮಾನದ ಬದುಕಿಗೆ ಪ್ರೇರಣೆ ನೀಡಬೇಕೆಂದು ಕರ್ನಾಟಕ ವರ್ಕರ್ಸ್ ಯೂನಿಯನ್ ಪ್ರಧಾನ ಕಾರ್ಯದರ್ಶಿ ಇ.ಕೆ.ಎನ್.ರಾಜನ್ ಒತ್ತಾಯಿಸಿದ್ದಾರೆ.

ಬುಧವಾರ ದೇಶಾದ್ಯಂತ ರೈತರು ನಡೆಸುತ್ತಿರುವ ಹೋರಾಟವನ್ನು ಬೆಂಬಲಿಸಿ ಹಾಗೂ ರೈತರಿಗೆ ಮಾರಕವಾದ ಕಾಯ್ದೆಗಳನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ಕರ್ನಾಟಕ ವರ್ಕರ್ಸ್ ಯೂನಿಯನ್ ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ನೂತನ ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ಹೊಸದಿಲ್ಲಿಯಲ್ಲಿ ಕಳೆದ ಮೂರು ತಿಂಗಳಿಂದ ರೈತರು ಹೋರಾಟ ಮಾಡುತ್ತಿದ್ದಾರೆ. ಕೊರೆಯುವ ಚಳಿಯಲ್ಲಿ ವೃದ್ದರು, ಮಹಿಳೆಯರು ಸೇರಿದಂತೆ ಎಲ್ಲ ವಯೋಮಾನದ ರೈತರು ರಸ್ತೆ ಮಧ್ಯೆ ಕೂತಿದ್ದಾರೆ. ಈ ಹೋರಾಟಗಾರರು ದೇಶದ ಜನತೆಯ ಪ್ರತೀಕವಾಗಿದ್ದಾರೆ. ಇವರಿಗೆ ಮಾನ್ಯತೆ ಕೊಡುವುದು ಸರಕಾರದ ಕರ್ತವ್ಯವೆಂದು ಅವರು ತಿಳಿಸಿದ್ದಾರೆ.

ಇಲ್ಲಿಯವರೆಗೂ ಸುಮಾರು 250ಕ್ಕೂ ಹೆಚ್ಚು ಹೋರಾಟಗಾರರು ಸಾವನ್ನಪ್ಪಿದ್ದಾರೆ. ಆದರೂ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಯಾವೊಬ್ಬ ಬಿಜೆಪಿ ನಾಯಕರೂ ಪ್ರತಿಭಟನಾ ಸ್ಥಳಕ್ಕೆ ಬಂದು ರೈತರ ಅಳಲನ್ನು ಕೇಳುತ್ತಿಲ್ಲ. ಹೀಗಾಗಿ ಸ್ವಾಭಿಮಾನವನ್ನು ಮೈಗೂಡಿಸಿಕೊಂಡಿರುವ ರೈತರ ಹೋರಾಟವನ್ನು ಮುಂದುವರೆಸಿದ್ದಾರೆ. ಅವರ ಹೋರಾಟವನ್ನು ಬೆಂಬಲಿಸುವುದು ದೇಶದ ಪ್ರತಿಯೊಬ್ಬ ನಾಗರೀಕನ ಕರ್ತವ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News