ಅಶ್ಲೀಲ ಸಿಡಿಯೊಳಗೆ ರಾಜ್ಯದ ಭವಿಷ್ಯ

Update: 2021-03-04 08:58 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಕಳೆದ ಸಂಪುಟ ವಿಸ್ತರಣೆಯ ವೇಳೆಯೇ, ಬಿಜೆಪಿಯೊಳಗಿರುವ ನಾಯಕರ ಅಶ್ಲೀಲ ಸಿಡಿ ಬಿಡುಗಡೆಗೆ ಮುಹೂರ್ತ ನಿಗದಿಯಾಗಿತ್ತು. ‘ಅಶ್ಲೀಲ ಸಿಡಿ’ಯನ್ನು ಮುಂದಿಟ್ಟುಕೊಂಡು ಹಲವರು ಸಚಿವ ಸ್ಥಾನವನ್ನು ತನ್ನದಾಗಿಸಿಕೊಂಡಿದ್ದಾರೆ ಎಂಬ ಆರೋಪವನ್ನು ಬಿಜೆಪಿಯೊಳಗಿರುವ ನಾಯಕರೇ ಮಾಡಿದ್ದರು. ಅಷ್ಟೇ ಅಲ್ಲ, ‘ನೋಡಲು ಅಸಹ್ಯವಾಗುವ ಸಿಡಿಗಳಿವೆ’ ಎಂದೂ ಅವರು ಹೇಳಿದ್ದರು. ಇದೀಗ ಬಿಡುಗಡೆಯಾಗಿರುವ ಸಚಿವ ರಮೇಶ್ ಜಾರಕಿಹೊಳಿಯವರದು ಎನ್ನಲಾಗಿರುವ ಅಶ್ಲೀಲ ಸಿಡಿ, ನೋಡಲು ನಿಜಕ್ಕೂ ಅಸಹ್ಯವಾಗಿರುವ ಸಿಡಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಅನೈತಿಕವಾಗಿ ಒಂದು ಸರಕಾರ ಅಧಿಕಾರಕ್ಕೆ ಬರುವುದನ್ನು ನ್ಯಾಯವ್ಯವಸ್ಥೆ ಮತ್ತು ಜನಸಾಮಾನ್ಯರು ವೌನವಾಗಿ ಒಪ್ಪಿಕೊಳ್ಳುತ್ತಾರೆ ಎನ್ನುವ ವ್ಯವಸ್ಥೆಯಲ್ಲಿ , ಸರಕಾರದ ಭಾಗವಾಗಿರುವ ವ್ಯಕ್ತಿಯೊಬ್ಬನ ಇಂತಹದೊಂದು ಅನೈತಿಕ, ಅಸಹ್ಯ ಸಿಡಿಯೊಂದು ಬಿಡುಗಡೆಯಾಗುವುದನ್ನು ಸಹಜ ಎಂದೇ ನಾವು ಸ್ವೀಕರಿಸಬೇಕು. ಈ ಸಿಡಿಯಲ್ಲಿ ಸರಕಾರ, ರಾಜಕಾರಣಿಗಳು ಮಾತ್ರವಲ್ಲ, ಆ ಸರಕಾರ ರಚನೆಯಾದ ಮಾರ್ಗವನ್ನು ಸಮರ್ಥಿಸಿದ ನ್ಯಾಯಾಲಯ, ಆ ಅನೈತಿಕ ಮಾಜಿ ಶಾಸಕರು ಮತ್ತೆ ಅವರನ್ನು ಆಯ್ಕೆಯಾಗುವಂತೆ ನೋಡಿಕೊಂಡ ಮತದಾರರು...ಹೀಗೆ ಎಲ್ಲರೂ ಪರೋಕ್ಷವಾಗಿ ಹೊಣೆಗಾರರೇ ಆಗಿದ್ದಾರೆ. ಟಿವಿಯ ಮುಂದೆ ಕುಳಿತು ಆ ಸಿಡಿಯ ಕುರಿತ ರೋಚಕ ಮಾಹಿತಿಗಳನ್ನು ಆಲಿಸುವ ನಾವೆಲ್ಲರೂ ಅದರಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಭಾಗಿಯಾಗಿದ್ದೇವೆ ಎನ್ನುವ ಕಟು ಸತ್ಯವನ್ನು ಜೀರ್ಣಿಸಿಕೊಳ್ಳಲೇಬೇಕು.

ಅನೈತಿಕತೆ ರಾಜಕಾರಣಕ್ಕೆ ಹೊಸತಲ್ಲ. ಈ ಹಿಂದಿನ ಅವಧಿಯಲ್ಲಿ, ವಿಧಾನಸಭೆಯೊಳಗೇ ಬ್ಲೂ ಫಿಲಂ ನೋಡಿ ಸಚಿವರ ಸಹಿತ ಹಲವರು ಮಾಧ್ಯಮಗಳ ಕೈಗೆ ಸಿಕ್ಕಿ ಬಿದ್ದಿದ್ದರು. ಬಳಿಕ ಅವರು ರಾಜೀನಾಮೆಯನ್ನೂ ನೀಡಬೇಕಾಗಿ ಬಂತು. ಮುಂದೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸಂಪೂರ್ಣ ನೆಲಕಚ್ಚಿ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂತು. ಈ ಬಾರಿ ಬಿಜೆಪಿಯ ಸಾಧನೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದೆ. ಅಂದು ಬ್ಲೂಫಿಲಂ ನೋಡಿ ಸಿಕ್ಕಿ ಬಿದ್ದರೆ, ಇಂದು, ಬ್ಲೂಫಿಲಂನಲ್ಲಿ ಸ್ವತಃ ಕಾಣಿಸಿಕೊಂಡಿದ್ದಾರೆ. ವ್ಯಂಗ್ಯ, ತಮಾಷೆ, ಆಕ್ರೋಶ, ಪ್ರತಿಭಟನೆ, ಸಮರ್ಥನೆಯ ರೂಪದಲ್ಲಿ ಜನಸಾಮಾನ್ಯರು ಸಿಡಿಯ ವಿರುದ್ಧ ಪ್ರತಿಕ್ರಿಯಿಸುತ್ತಿದ್ದಾರೆ. ಆದರೆ ಯಾರೂ ಈ ಬಗ್ಗೆ ಆತಂಕಿತರಾದಂತೆ ಕಾಣುತ್ತಿಲ್ಲ. ಬ್ಲೂಫಿಲಂಗಳ ಸಿಡಿಯ ನಿಯಂತ್ರಣದಲ್ಲಿ ಸಿಲುಕಿಕೊಂಡಿರುವ ಒಂದು ಸರಕಾರ ಈ ರಾಜ್ಯವನ್ನು ಯಾವ ದಿಕ್ಕಿಗೆ ಮುನ್ನಡೆಸಬಹುದು ಎಂಬ ಬಗ್ಗೆ ಯಾರೂ ಚಿಂತಿಸುತ್ತಿಲ್ಲ. ಸಿಡಿಯ ಬಗ್ಗೆ ಕೆಲವರು ಸಮರ್ಥನೆಗಳನ್ನೂ ನೀಡುತ್ತಿದ್ದಾರೆ. ಸಿಡಿಯಲ್ಲಿರುವುದು ಒಂದು ಖಾಸಗಿ ಕೋಣೆಯಲ್ಲಿ ಪರಸ್ಪರ ಸಮ್ಮತಿಯೊಂದಿಗೆ ನಡೆದ ಲೈಂಗಿಕ ಕ್ರಿಯೆ. ಇದನ್ನು ಚರ್ಚಿಸುವುದು ತಪ್ಪು ಎಂದು ವಾದಿಸುತ್ತಿದ್ದಾರೆ. ಯಾರು ಅದನ್ನು ಚಿತ್ರೀಕರಿಸಿ, ವೀಡಿಯೊ ಮಾಡಿದ್ದಾರೆಯೊ ಅವರೇ ಅಪರಾಧಿಗಳು ಎಂದೂ ಸಮರ್ಥನೆ ಮಾಡುವವರಿದ್ದಾರೆ. ಆದರೆ ಸರಕಾರದ ಭಾಗವಾಗಿರುವ ಒಬ್ಬ ಉನ್ನತ ಸಚಿವನಿಗೆ ಹಲವು ಹೊಣೆಗಾರಿಕೆಗಳಿವೆ. ಅದರ ಒಂದು ಭಾಗವಾಗಿದೆ, ನೈತಿಕವಾಗಿ ಸಮಾಜಕ್ಕೆ ಮಾದರಿಯಾಗಿರುವುದು.

ಕನಿಷ್ಠ ಲಜ್ಜೆಯನ್ನು ಕಾಪಾಡಿಕೊಳ್ಳುವುದು. ಅದನ್ನು ಕಾಪಾಡಿಕೊಳ್ಳಲು ಸಾಧ್ಯವಿಲ್ಲ ಎಂದಾದರೆ ತಾನು ಹೊತ್ತಿರುವ ಜವಾಬ್ದಾರಿಯಿಂದ ಕಳಚಿಕೊಂಡು ತನಗೆ ಬೇಕಾದಂತೆ ಬದುಕುವ ಧಾರಾಳ ಅವಕಾಶ ಆತನಿಗಿದೆ. ‘ಹನಿ ಟ್ರಾಪ್’ ಜಾಗತಿಕವಾಗಿ ಹಲವು ಅನಾಹುತಗಳನ್ನು ಮಾಡಿಸಿದೆ. ಭಾರತದ ಸೇನಾ ಅಧಿಕಾರಿಗಳನ್ನು ಹನಿ ಟ್ರಾಪ್ ಮಾಡಿ, ದೇಶದ ರಹಸ್ಯಗಳನ್ನು ಶತ್ರು ದೇಶಗಳು ತಮ್ಮದಾಗಿಸಿಕೊಂಡ ಉದಾಹರಣೆಗಳಿವೆ. ರಮೇಶ್ ಜಾರಕಿ ಹೊಳಿ ಈ ರಾಜ್ಯದ ಮಹತ್ವದ ಖಾತೆಯನ್ನು ನಿರ್ವಹಿಸುತ್ತಿದ್ದರು. ಅವರ ಅಶ್ಲೀಲ ಸಿಡಿಗಳನ್ನು ಬಳಸಿಕೊಂಡು, ದುಷ್ಕರ್ಮಿಗಳು ಅವರ ಮೂಲಕವೇ ನಾಡಿಗೆ ಹಲವು ಅನರ್ಥಗಳನ್ನು ಮಾಡುವ ಸಾಧ್ಯತೆಗಳಿದ್ದವು. ಹಾಗೆಯೇ ಇಂತಹ ಸಿಡಿಗಳನ್ನು ಯಾರೋ ಒಬ್ಬ ರಾಜಕಾರಣಿ ಅಥವಾ ಉದ್ಯಮಿಯಷ್ಟೇ ಅಲ್ಲ, ಒಬ್ಬ ಉಗ್ರಗಾಮಿಯೂ ಬ್ಲಾಕ್‌ಮೇಲ್‌ಗೆ ಬಳಸಬಹುದು. ತಮ್ಮ ಮಾನ, ಮರ್ಯಾದೆಗೆ ಅಂಜಿ ದುಷ್ಕರ್ಮಿಗಳು ಕೇಳಿದ ಸಹಾಯವನ್ನು ಮಾಡಿಕೊಡುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ವಿಪರ್ಯಾಸ ಗಮನಿಸಿ. ಕಳೆದ ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ಹಲವರು ‘ಸಿಡಿ’ಗಳನ್ನು ಮುಂದಿಟ್ಟುಕೊಂಡು ಸಚಿವ ಸ್ಥಾನಗಳನ್ನು ಗಿಟ್ಟಿಸಿಕೊಂಡಿದ್ದಾರೆ ಎಂದು ಬಿಜೆಪಿಯೊಳಗಿನ ನಾಯಕರೇ ಆರೋಪಿಸಿದ್ದಾರೆ. ಅಂದರೆ, ಅನರ್ಹರೆಂದು ಗೊತ್ತಿದ್ದೂ, ಸಿಡಿಗೆ ಹೆದರಿ ಅವರನ್ನು ಸಚಿವರನ್ನಾಗಿ ಮಾಡಲಾಯಿತು ಎನ್ನುವುದನ್ನು ಬಿಜೆಪಿಯೊಳಗಿದ್ದವರೇ ಒಪ್ಪಿಕೊಂಡಿದ್ದಾರೆ. ಇದೀಗ, ಇಂತಹ ಅಶ್ಲೀಲ ಸಿಡಿಗಳು ಇನ್ನೂ ಹಲವಾರಿವೆ ಎಂಬ ಬೆದರಿಕೆಗಳು ಕೇಳಿ ಬರುತ್ತಿವೆ. ಉನ್ನತ ನಾಯಕರ ಸಿಡಿಗಳೂ ತಮ್ಮ ಬಳಿ ಇವೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಹಾಗಾದರೆ ಈ ಸಿಡಿಗಳನ್ನು ಬಳಸಿ ಈವರೆಗೆ ಇವರೆಲ್ಲ ಸರಕಾರವನ್ನು ನಿಯಂತ್ರಿಸುತ್ತಿದ್ದರೆ? ತಮಗೆ ಬೇಕಾದ ಸವಲತ್ತುಗಳನ್ನು, ಅಧಿಕಾರಗಳನ್ನು ತಮ್ಮದಾಗಿಸಿಕೊಳ್ಳುತ್ತಾ ಬಂದಿದ್ದಾರೆಯೇ? ಎಂಬ ಪ್ರಶ್ನೆ ಏಳುತ್ತವೆ.

ಇಡೀ ಸರಕಾರವೇ ಸಿಡಿಯ ನಿಯಂತ್ರಣದಲ್ಲಿದ್ದರೆ, ನಡೆದ ಚುನಾವಣೆಗಳಿಗೆ ಏನು ಅರ್ಥ ಉಳಿಯಿತು? ರಾಜಕಾರಣಿಗಳು ಜನರ ಬದಲಿಗೆ ಸಿಡಿಗೆ ಹೆದರಿ ಆಡಳಿತ ನಡೆಸಿದರೆ ಪ್ರಜಾಪ್ರಭುತ್ವಕ್ಕೆ ಏನು ಅರ್ಥ ಉಳಿಯಿತು? ಆದುದರಿಂದಲೇ, ಜಾರಕಿಹೊಳಿ ಸಿಡಿಯೊಳಗೆ ಏನೆಲ್ಲ ಅಸಹ್ಯಗಳನ್ನು ಮಾಡಿದ್ದಾರೆಯೋ ಅದು ಅವರ ಖಾಸಗಿ ವಿಷಯವಲ್ಲ. ಅದು ನಾಡಿನ ಭವಿಷ್ಯದ ವಿಷಯ. ಆ ಸಿಡಿಯ ಅಂತಿಮ ಪರಿಣಾಮಗಳನ್ನು ಉಣ್ಣುವುದು ಈ ನಾಡು ಎನ್ನುವ ಎಚ್ಚರಿಕೆ ನಮಗೆಲ್ಲರಿಗೂ ಇರಬೇಕು. ಇಂದು ನಾವು ಚರ್ಚೆ ನಡೆಸಬೇಕಾಗಿರುವುದು ಬಿಡುಗಡೆಗೊಂಡ ಸಿಡಿಯ ಕುರಿತಂತೆ ಅಲ್ಲ, ಬಿಡುಗಡೆಗೊಳ್ಳದೇ ಉಳಿದಿರುವ ಆ ಸಿಡಿಗಳ ಕುರಿತಂತೆ. ಅದು ಬಿಡುಗಡೆ ಗೊಂಡರೆ, ಕನಿಷ್ಠ ಯಾರು ಆರೋಪಿಯೋ ಅವರನ್ನು ಹೊರಗಿಟ್ಟು ಸರಕಾರ ಮುಂದುವರಿಯಬಹುದು. ಆದರೆ ಅದು ಬಿಡುಗಡೆಗೊಳ್ಳದೇ ಇದ್ದರೆ, ಆ ಸಿಡಿ ಸರಕಾರವನ್ನು ನಿಯಂತ್ರಿಸುತ್ತಲೇ ಇರುತ್ತದೆ.

ಆದುದರಿಂದಲೇ, ಬಿಡುಗಡೆಗೊಂಡಿರುವ ಸಿಡಿಗಿಂತ ಬಿಡುಗಡೆಗೊಳ್ಳದೇ ಇರುವ ಸಿಡಿಗಳೇ ನಾಡಿಗೆ ಅಪಾಯಕಾರಿ. ಕನಿಷ್ಠ ಹನಿಟ್ರಾಪ್‌ಗೆ ಒಳಗಾದವರಿಗಾದರೂ ಸತ್ಯ ಗೊತ್ತಿರುತ್ತದೆ. ಹನಿಟ್ರಾಪ್ ಮಾಡುವವರು ತಮ್ಮ ಬ್ಲಾಕ್‌ಮೇಲ್ ಕೆಲಸ ಮುಗಿದ ಬಳಿಕ, ಒಂದಲ್ಲ ಒಂದು ದಿನ ಅದನ್ನು ಬಿಡುಗಡೆ ಮಾಡಿಯೇ ಮಾಡುತ್ತಾರೆ. ಆದುದರಿಂದ, ಯಾರೆಲ್ಲ ಬ್ಲಾಕ್‌ಮೇಲ್‌ಗೆ ಒಳಗಾಗಿದ್ದಾರೆಯೋ ಅವರೆಲ್ಲ ಧೈರ್ಯದಿಂದ ಪೊಲೀಸರಿಗೆ ದೂರು ನೀಡಬೇಕು. ಜೊತೆಗೆ ರಾಜೀನಾಮೆಯನ್ನು ನೀಡಬೇಕು. ನಾಡಿನ ಕುರಿತಂತೆ ಕಾಳಜಿಯಿರುವ ನಾಯಕರಿಗಷ್ಟೇ ಇದು ಸಾಧ್ಯ. ಇದೇ ಸಂದರ್ಭದಲ್ಲಿ ‘‘ಆರೋಪ ಸಾಬೀತಾದರೆ ಗಲ್ಲಿಗೇರಲು ಸಿದ್ಧ’’ ಎಂದು ರಮೇಶ್ ಜಾರಕಿ ಹೊಳಿ ತಿಳಿಸಿದ್ದಾರೆ. ಲಜ್ಜೆ ಕಳೆದುಕೊಂಡವನನ್ನು ಯಾವ ಜೈಲೂ ಶಿಕ್ಷಿಸಲಾರದು. ಜೊತೆಗೆ ಲಜ್ಜೆ ಕಳೆದುಕೊಂಡವ ಎಲ್ಲವನ್ನೂ ಕಳೆದು ಕೊಂಡ ಎನ್ನುವ ಸತ್ಯವನ್ನು ಜಾರಕಿ ಹೊಳಿ ಇನ್ನಾದರೂ ಒಪ್ಪಿಕೊಳ್ಳಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News