ಡಿ-ವೋಟರ್ ಪಟ್ಟಿಯಲ್ಲಿ ಹೆಸರು ಸೇರಿಸಿದ್ದಕ್ಕಾಗಿ ಸುಪ್ರೀಂ ಕೋರ್ಟ್ ಮೊರೆ ಹೋದ ಮಹಿಳೆಯರು

Update: 2021-03-04 04:37 GMT

ಹೊಸದಿಲ್ಲಿ: ಕಳೆದ 23 ವರ್ಷಗಳಿಂದ ಸಂದೇಹಾಸ್ಪದ ಮತದಾರರು (ಡಿ-ವೋಟರ್) ಪಟ್ಟಿಯಲ್ಲಿ ತಮ್ಮ ಹೆಸರನ್ನು ಇರಿಸಿದ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಅಸ್ಸಾಂನ ಬರ್ಪೇಡಾ ಜಿಲ್ಲೆಯ 26 ಮಹಿಳೆಯರು ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಅಸ್ಸಾಂ ವಿಧಾನಸಭೆಗೆ ನಡೆಯುವ ಚುನಾವಣೆ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಈ ಸಂಬಂಧ ಕೇಂದ್ರ ಸರ್ಕಾರ, ಚುನಾವಣಾ ಆಯೋಗ ಮತ್ತು ಅಸ್ಸಾಂ ಸರ್ಕಾರದಿಂದ ಸ್ಪಷ್ಟನೆ ಕೇಳಿದೆ.

"ಮುಖ್ಯ ಅಂಶಗಳನ್ನು ಪರಿಗಣಿಸುವ ಅಗತ್ಯವಿದೆ" ಎಂದು ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೋಬ್ಡೆ ಮತ್ತು ನ್ಯಾಯಮೂರ್ತಿಗಳಾದ ಎಲ್.ಎನ್.ರಾವ್ ಹಾಗೂ ಎಸ್.ಆರ್.ಭಟ್ ಅವರನ್ನೊಳಗೊಂಡ ನ್ಯಾಯಪೀಠ ಹೇಳಿದೆ. ತಹ್ಮಿನಾ ಖಟೂನ್ ಮತ್ತು 25 ಮಂದಿ ಮಹಿಳೆಯರ ಪರವಾಗಿ ಜಯಶ್ರೀ ಸಾತಪುತೆ ಮತ್ತು ತೃಪ್ತಿ ಪೋದ್ದಾರ್ ವಾದ ಮಂಡಿಸಿದರು. ನಾಲ್ಕು ವಾರಗಳ ಒಳಗಾಗಿ ಈ ಸಂಬಂಧ ಉತ್ತರಿಸುವಂತೆ ಸುಪ್ರೀಂಕೋರ್ಟ್ ಪ್ರತಿವಾದಿಗಳಿಗೆ ಸೂಚಿಸಿದೆ.

ಅರ್ಜಿದಾರರ ಪೈಕಿ 24 ಮಂದಿ ಬರ್ಪೇಟಾದ ಬೆಹರ್‌ಗಾಂವ್ ಜಿಲ್ಲೆಯವರಾಗಿದ್ದು, ಇಲ್ಲಿ ಶೇಕಡ 70ಕ್ಕಿಂತಲೂ ಅಧಿಕ ಮುಸ್ಲಿಮರಿದ್ದಾರೆ. ಯಾವ ವರದಿಯ ಆಧಾರದಲ್ಲಿ ತಮ್ಮನ್ನು ಡಿ-ವೋಟರ್ ಪಟ್ಟಿಗೆ ಸೇರಿಸಲಾಗಿದೆ ಎಂಬ ಬಗ್ಗೆ ಮಾಹಿತಿ ಹಕ್ಕು ಕಾಯ್ದೆಯಡಿ ಪ್ರಶ್ನಿಸಿರುವ ಅರ್ಜಿದಾರರು ಆ ವರದಿಯ ಪ್ರತಿಯನ್ನು ನೀಡುವಂತೆ ಕೋರಿದ್ದರು. ಆದರೆ ಹಲವು ವರ್ಷಗಳಿಂದ ಯಾವ ಅಧಿಕಾರಿಗಳಿಂದಲೂ ಮಾಹಿತಿ ಸಿಕ್ಕಿಲ್ಲ ಎಂದು ದೂರಲಾಗಿದೆ.

ಇವರ ಆರ್‌ಟಿಐ ಅರ್ಜಿಗೆ 2019ರ ಸೆಪ್ಟೆಂಬರ್ 7ರಂದು ಉತ್ತರಿಸಿದ ಮತದಾರರ ನೋಂದಣಿ ಅಧಿಕಾರಿ (ಇಆರ್‌ಓ), "1997ರಿಂದ ನಿಮ್ಮ ಹೆಸರು ಡಿ-ಮಾರ್ಕ್ ಆಗಿದೆ. ಆದರೆ ಡಿ-ಮಾರ್ಕ್‌ನಲ್ಲಿ ಸೇರಿಸಿದ್ದಕ್ಕೆ ಆಧಾರವಾಗಿ ಯಾವ ದಾಖಲೆಯೂ ಕಚೇರಿಯಲ್ಲಿ ಲಭ್ಯವಿಲ್ಲ" ಎಂದು ಉತ್ತರಿಸಿದ್ದರು. ತಮ್ಮ ಭಾರತೀಯ ಪೌರತ್ವವನ್ನೇ ಸಂದೇಹಿಸುವ ರೀತಿಯಲ್ಲಿ ಇರುವ ಡಿ-ವೋಟರ್ ಪಟ್ಟಿಯಿಂದ ತಮ್ಮ ಹೆಸರು ಕಿತ್ತು ಹಾಕುವಂತೆ ಅರ್ಜಿದಾರರು ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News