ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಾವಿರಾರು ಕಾರ್ಮಿಕರಿಂದ ವಿಧಾನಸೌಧದೆಡೆಗೆ ಪಾದಯಾತ್ರೆ

Update: 2021-03-04 15:32 GMT

ಬೆಂಗಳೂರು, ಮಾ.4: ಗುತ್ತಿಗೆ ಕಾರ್ಮಿಕರಿಗೆ ಕನಿಷ್ಠ ವೇತನ 24 ಸಾವಿರ ನಿಗದಿ, ಮಹಿಳೆಯರನ್ನು ರಾತ್ರಿ ಪಾಳಿ ಮತ್ತು ಅಪಾಯಕಾರಿ ಕೆಲಸಗಳಲ್ಲಿ ದುಡಿಸಿಕೊಳ್ಳುವುದು ಮತ್ತು ಕೃಷಿ ವಿರೋಧಿ ಕಾಯ್ದೆಗಳನ್ನು ಕೈಬಿಡುವುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್(ಸಿಐಟಿಯು) ನೇತತ್ವದಲ್ಲಿ ವಿವಿಧ ಕಾರ್ಮಿಕ ಸಂಘಟನೆಗಳು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಗುರುವಾರ ನಗರದ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಫ್ರೀಡಂ ಪಾರ್ಕ್ ಮೈದಾನದವರೆಗೂ ಕಾಲ್ನಡಿಗೆ ಜಾಥಾ ನಡೆಸಿದ ಹೋರಾಟಗಾರರು, ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಣಕ್ಕೆ ಮುಂದಾಗಿರುವ ಕ್ರಮವನ್ನು ಕೈಬಿಡಬೇಕೆಂದು ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಒತ್ತಾಯಿಸಿದರು.

ಮತ್ತೊಂದೆಡೆ ವಿವಿಧ 31 ಬೇಡಿಕೆಗಳ ಈಡೇರಿಕೆಗಾಗಿ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಗ್ರಾಮ ಪಂಚಾಯತ್‍ನಲ್ಲಿ ಸೇವೆ ಸಲ್ಲಿಸುವ ಕಾರ್ಮಿಕರು ಸೇರಿದಂತೆ ವಿವಿಧ ಕಾರ್ಮಿಕ ಸಂಘಟನೆಗಳ ಸದಸ್ಯರು ಪ್ರತಿಭಟನೆ ಮೆರವಣಿಗೆಯಲ್ಲಿ ಭಾಗಿಯಾಗಿದ್ದರು.

ಪ್ರತಿಭಟನಾ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಕಾರ್ಮಿಕ ಮುಖಂಡ ಮೀನಾಕ್ಷಿ ಸುಂದರಂ, ಕಾರ್ಮಿಕರಿಗೆ ರಕ್ಷಣೆ ನೀಡುವ ಕಾನೂನುಗಳನ್ನು ರದ್ದು ಮಾಡಲಾಗಿದ್ದು, ಕಾರ್ಮಿಕ ಭಾರತೀಯರನ್ನು ಕಾನೂನಿನ ಪ್ರಕಾರ ಕಾರ್ಮಿಕರನ್ನು ಶೋಷಣೆ ಮಾಡುವ ಮಾಲಕರಿಗೆ ರಕ್ಷಣೆ ನೀಡುವ ಕಾಯಿದೆಗಳನ್ನು ಜಾರಿ ಮಾಡುತ್ತಿವೆ ಎಂದು ಆರೋಪಿಸಿದರು.

300 ಜನಕ್ಕಿಂತ ಕಡಿಮೆ ಸಂಖ್ಯೆಯಲ್ಲಿ ದುಡಿಯುವ ಕೈಗಾರಿಕೆಗಳನ್ನು ಪರಿಗಣಿಸುವುದಿಲ್ಲ ಎಂದು ಹೇಳಲಾಗುತ್ತಿದೆ ಇದರಿಂದ ಶೇ.80 ರಷ್ಟು ಕಾರ್ಮಿಕರು ಬೀದಿಪಾಲಾಗಲಿದ್ದಾರೆ ಎಂದ ಅವರು, ದೇಶ ಅಭಿವದ್ಧಿ ಆಗಬೇಕು ಎಂದರೆ ಕಾರ್ಮಿಕರಿಗೆ ನೀಡುವ ವೇತನ ಕಡಿಮೆ ಮಾಡಬೇಕು ಎಂದು ಅಭಿಪ್ರಾಯ ಹೊಂದಿದ್ದಾರೆ. ಇದರಿಂದ ಕಾರ್ಮಿಕರ ರಕ್ಷಣೆ ಸಾಧ್ಯವೇ ಎಂದು ಪ್ರಶ್ನೆ ಮಾಡುವಂತಾಗಿದೆ ಎಂದರು.

ಸರಕಾರ ರಚನೆ ಮಾಡಿಕೊಳ್ಳುವುದಕ್ಕೆ ಶಾಸಕರನ್ನು ಖರೀದಿ ಮಾಡುವುದಕ್ಕೆ ಹಣ ಇದೆ. ಆದರೆ, ಕಾರ್ಮಿಕರ ಪರವಾದ ಕೆಲಸ ಮಾಡುವುದಕ್ಕೆ ಮುಂದಾಗುತ್ತಿಲ್ಲ. ಕೋವಿಡ್ ಸಂದರ್ಭದಲ್ಲಿ 70ಕ್ಕೂ ಹೆಚ್ಚು ಜನ ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಸಾವನ್ನಪ್ಪಿದ್ದಾರೆ. ಅವರಿಗೆ ಈವರೆಗೂ ಪರಿಹಾರ ನೀಡುವುದಕ್ಕೆ ಮುಂದಾಗಿಲ್ಲ ಎಂದು ಅವರು ಆರೋಪಿಸಿದರು.

ಪ್ರತಿಭಟನೆಯ ಮೆರವಣಿಗೆಯಲ್ಲಿ ಸಿಐಟಿಯು ರಾಜ್ಯಾಧ್ಯಕ್ಷೆ ವರಲಕ್ಷ್ಮೀ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.

►ರೈತ ವಿರೋಧಿಯಾಗಿರುವ ಮೂರು ಕಾಯಿದೆಗಳನ್ನು ರದ್ದು ಮಾಡಬೇಕು.
►ವಿದ್ಯುಚ್ಛಕ್ತಿ ಖಾಸಗೀಕರಕರಣ ಮಾಡುವುದನ್ನು ಕೈ ಬಿಡಬೇಕು.
►ಬೆಲೆ ಏರಿಕೆ ಆಧಾರದಲ್ಲಿ ತುಟ್ಟಿ ಭತ್ಯೆ ಸೇರಿದಂತೆ ಎಲ್ಲ ವಿಭಾಗಗಳಲ್ಲಿ ಕಾರ್ಮಿಕರಿಗೂ ಕನಿಷ್ಠ ವೇತನ 24 ಸಾವಿರ ರು.ಗಳನ್ನು ಜಾರಿ ಮಾಡಬೇಕು.
►ಕಾರ್ಖಾನೆ ಕಾಯ್ದೆ, ವಾಣಿಜ್ಯ ಸಂಸ್ಥೆಗಳಲ್ಲಿ ಕೈಗಾರಿಕಾ ನಿಶ್ಚಿತ ಕಾಲಾವಧಿ ಕಾರ್ಮಿಕರ ನೇಮಕದ ಮಾದರಿ ಸ್ಥಾಯಿ ಆದೇಶಗಳಿಗೆ ಕಾರ್ಮಿಕ ವಿರೋಧಿ ತಿದ್ದುಪಡಿಗಳನ್ನು ತಕ್ಷಣ ರಾಜ್ಯ ಸರಕಾರ ಹಿಂಪಡೆಯಬೇಕು.
►ಸರಕಾರದ ನಿಗಮ ಮಂಡಳಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ಗುತ್ತಿಗೆ ಕಾರ್ಮಿಕರಿಗೆ ಕನಿಷ್ಠ ವೇತನ ಜಾರಿ ಮಾಡಬೇಕು.
►ಅಂಗನವಾಡಿ ಬಿಸಿಯೂಟ ಮತ್ತು ಆಶಾ ಕಾರ್ಯಕರ್ತೆಯರ ಕೆಲಸ ಕಾಯಂ ಮಾಡಬೇಕು. ನಿವತ್ತಿ ಸೌಲಭ್ಯಗಳನ್ನು ಜಾರಿ ಮಾಡಬೇಕು. 
►ಕರ್ನಾಟಕ ಅಸಂಘಟಿತ ಕಾರ್ಮಿಕರ ಭವಿಷ್ಯನಿಧಿ ಯೋಜನೆ ಜಾರಿಗೆ ಶಾಸನ ರೂಪಿಸಿ ಜಾರಿ ಮಾಡಬೇಕು.
►ಹಮಾಲಿ ಕಾರ್ಮಿಕರು, ಆಟೋ, ಟ್ಯಾಕ್ಸಿ ಚಾಲಕರು ಮನೆ ಕೆಲಸಗಾರರು ಬೀದಿ ಬದಿ ವ್ಯಾಪಾರಿಗಳ ರಕ್ಷಣೆಗಾಗಿ ಬಜೆಟ್‍ನಲ್ಲಿ 500 ಕೋಟಿ ಹಣವನ್ನು ಮೀಸಲಿಡಬೇಕು.

ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಕ್ರಮ: ಶಿವರಾಮ್ ಹೆಬ್ಬಾರ್
ಕಾರ್ಮಿಕ ಸಂಘಟನೆಗಳ ಬೇಡಿಕೆಗಳ ಪರಿಹಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಸಭೆ ನಡೆಸಿ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಭರವಸೆ ನೀಡಿದರು.
ವಿವಿಧ ಸಂಘ ಸಂಸ್ಥೆಗಳ ನಡೆಸುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಅವರು, ಕಾರ್ಮಿಕರ ಬೇಡಿಕೆಗಳನ್ನು ಈಗಾಗಲೇ ಪರಿಶೀಲಿಸಿದ್ದೇನೆ, ಶೀಘ್ರದಲ್ಲಿ ಸಭೆ ನಡೆಸಿ ಪರಿಹರಿಸಲಾಗುವುದು ಎಂದರು.

'ನಮ್ಮ ಕಷ್ಟಗಳ ಬಗ್ಗೆ ಚರ್ಚಿಸಿ'
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಬಗ್ಗೆ ಬಿಸಿ ಬಿಸಿ ಚರ್ಚೆ ನಡೆಸುವ ಬದಲು ನಮ್ಮ ಕಷ್ಟಗಳ ಬಗ್ಗೆ ಚರ್ಚೆ ನಡೆಸಿ. ಅಲ್ಲದೆ, ನಮ್ಮಿಂದ ರಾಜ್ಯ ನಿರ್ಮಾಣಗೊಂಡಿದೆ. ಇನ್ನು, ಮೇಲಾಧಿಕಾರಿಗಳ ದರ್ಪ ಸರಿಯಲ್ಲ ಒಂದು ದಿನ ನಾವು ಕೈ ಕೊಟ್ಟರೆ ನಿಮ್ಮ ಕೆಲಸ ನಡೆಯಲ್ಲ.
-ವರಲಕ್ಷ್ಮೀ, ಅಧ್ಯಕ್ಷೆ ಸಿಐಟಿಯು

'ಹೋರಾಟ ಕೈಬಿಡಿ'
ನಮ್ಮೆಲ್ಲ ಬೇಡಿಕೆಗಳನ್ನು ಹಂತ ಹಂತವಾಗಿ ಪರಿಹರಿಸುವ ಕೆಲಸ ಮಾಡಲಾಗುವುದು. ಭರವಸೆಯಲ್ಲ, ವಿಶ್ವಾಸದ ನುಡಿಗಳನ್ನು ಹೇಳುತ್ತೇನೆ. ರಾಜ್ಯ ಸರಕಾರ ನಿಮ್ಮ ಜೊತೆ ಇರಲಿದೆ. ದಯಮಾಡಿ ಮಹಿಳೆಯರೆಲ್ಲ ಹೋರಾಟ ಮಾಡುವುದು ಬಿಡಿ.
-ಶಶಿಕಲಾ ಜೊಲ್ಲೆ, ಸಚಿವೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News