ಪ್ರಧಾನಿ ಮೋದಿಯ ದಿಢೀರ್ ತಮಿಳು ಪ್ರೇಮಕ್ಕೆ ತಮಿಳಿಗರು ಮರುಳಾಗುವುದಿಲ್ಲ:ಕಮಲ್ ಹಾಸನ್

Update: 2021-03-04 15:06 GMT

ಚೆನ್ನೈ,ಮಾ.4: ತಮಿಳು ನಟ-ರಾಜಕಾರಣಿ ಕಮಲ್ ಹಾಸನ್ ಅವರು ಪ್ರಧಾನಿ ನರೇಂದ್ರ ಮೋದಿಯವರ ದಿಢೀರ್ ತಮಿಳು ಭಾಷಾ ಪ್ರೇಮಕ್ಕೆ ತಮಿಳಿಗರು ಮರುಳಾಗುವುದಿಲ್ಲ ಎಂದು ಹೇಳುವ ಮೂಲಕ ಭಾಷಾ ಚರ್ಚೆಯೊಂದನ್ನು ಹುಟ್ಟು ಹಾಕಿದ್ದಾರೆ.

ಮಕ್ಕಳ್ ನೀಧಿ ಮೈಯಂ (ಎಂಎನ್‌ಎಂ) ಪಕ್ಷದ ಸ್ಥಾಪಕರೂ ಆಗಿರುವ ಕಮಲ್ ರಾಜ್ಯ ವಿಧಾನಸಭಾ ಚುನಾವಣೆಯ ದಿನಾಂಕ ಘೋಷಣೆಯಾದ ಬಳಿಕ ಬುಧವಾರ ತನ್ನ ಮೊದಲ ಬಹಿರಂಗ ಸಭೆಯಲ್ಲಿ ತನ್ನ ಪಕ್ಷದ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದರು. ‘ವಿಶೇಷವಾಗಿ ಚುನಾವಣೆಗಳ ಪ್ರಕಟಣೆಯ ಬಳಿಕ ಮೋದಿಯವರ ಈ ದಿಢೀರ್ ತಮಿಳು ಪ್ರೇಮದ ಹಿಂದಿನ ಕಾರಣ ನಮಗೆ ಗೊತ್ತಾಗುವುದಿಲ್ಲವೇ? ತಾವು ತಮಿಳಿನಲ್ಲಿ ಒಂದೆರಡು ಸಾಲುಗಳನ್ನು ಹೇಳಿಬಿಟ್ಟರೆ ನಾವೆಲ್ಲ ಅವರಿಗೇ ಮತಗಳನ್ನು ಹಾಕುತ್ತೇವೆ ಎಂದು ಅವರು ತಿಳಿದಿದ್ದಾರೆ. ತಮಿಳಿಗರು ಮಾರಾಟಕ್ಕಿಲ್ಲ,ಅವರ ಮತಗಳೂ ಮಾರಾಟಕ್ಕಿಲ್ಲ ’ ಎಂದು ಕಮಲ್ ನುಡಿದರು.

234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಗೆ ಎ.6ರಂದು ಏಕಹಂತದಲ್ಲಿ ಮತದಾನ ನಡೆಯಲಿದ್ದು,ಆಡಳಿತಾರೂಢ ಎಐಎಡಿಎಂಕೆ ಮತ್ತು ಡಿಎಂಕೆ-ಕಾಂಗ್ರೆಸ್ ಮೈತ್ರಿಕೂಟದ ನಡುವೆ ನೇರ ಹಣಾಹಣಿ ನಡೆಯುವ ಸಾಧ್ಯತೆಯಿದೆ. ಎಐಎಡಿಎಂಕೆ ಬಿಜೆಪಿ ಮತ್ತು ಇತರ ಕೆಲವು ಸಣ್ಣ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿದೆ. ತನ್ನನ್ನು ತೃತೀಯ ರಂಗದ ನಾಯಕನೆಂದು ಕರೆದುಕೊಳ್ಳುತ್ತಿರುವ ಕಮಲ್,ತನ್ನ ಪಕ್ಷವನ್ನು ಗೆಲ್ಲಿಸುವಂತೆ ಜನರನ್ನು ಕೋರಿಕೊಂಡಿದ್ದಾರೆ.

ಮಹಿಳೆಯರು, ಯುವಜನರು ಮತ್ತು ಕ್ರೀಡಾ ಅಭಿವೃದ್ಧಿಗಾಗಿ ತನ್ನ ಏಳು ಅಂಶಗಳ ಪ್ರಣಾಳಿಕೆಯನ್ನು ಎಂಎನ್‌ಎಂ ಬಿಡುಗಡೆಗೊಳಿಸಿದೆ.

ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ, ತೊಂದರೆಯಲ್ಲಿರುವ ಮಹಿಳೆಯರ ತುರ್ತು ರಾತ್ರಿ ವಾಸ್ತವ್ಯಕ್ಕಾಗಿ ಪ್ರತಿ ಜಿಲ್ಲೆಯಲ್ಲಿ ಉಚಿತ ಹಾಸ್ಟೆಲ್‌ಗಳ ಸ್ಥಾಪನೆ,ಮಹಿಳೆಯರಿಗಾಗಿ ಮಹಿಳೆಯರಿಂದಲೇ ನಡೆಸಲಾಗುವ ಬ್ಯಾಂಕುಗಳ ಸ್ಥಾಪನೆ, 50 ಲಕ್ಷ ಯುವಜನರಿಗೆ ಉದ್ಯೋಗ, ಕುಟುಂಬಗಳಿಗೆ ನಿಶ್ಚಿತ ಆದಾಯ ಗಳಿಕೆ ಇತ್ಯಾದಿ ಭರವಸೆಗಳನ್ನು ಪ್ರಣಾಳಿಕೆಯಲ್ಲಿ ನೀಡಲಾಗಿದೆ.

ಮುಂಬರುವ ವಿಧಾನಸಭಾ ಚುನಾವಣೆಗಾಗಿ ಕಮಲ್ ನಟ-ರಾಜಕಾರಣಿ ಶರತ್‌ಕುಮಾರ್ ಅವರ ಆಲ್ ಇಂಡಿಯಾ ಸಮತ್ವ ಮಕ್ಕಳ್ ಕಚ್ಚಿ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ. ಹಲವಾರು ಪಕ್ಷಗಳೊಂದಿಗೆ ಮೈತ್ರಿಗಾಗಿ ಚರ್ಚೆಗಳು ನಡೆಯುತ್ತಿವೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News