ಶ್ರೀಧರನ್ ಬಿಜೆಪಿಯ ಕೇರಳ ಸಿಎಂ ಅಭ್ಯರ್ಥಿ ಎಂದು ದೃಢಪಡಿಸಿದ್ದ ಕೇಂದ್ರ ಸಚಿವರಿಂದ ಯೂ ಟರ್ನ್!

Update: 2021-03-04 16:53 GMT

ಕೋಲ್ಕತಾ: ಕೇರಳ ವಿಧಾನಸಭೆಯ ಚುನಾವಣೆಯಲ್ಲಿ 'ಮೆಟ್ರೋ ಮ್ಯಾನ್' ಖ್ಯಾತಿಯ ಇ.ಶ್ರೀಧರನ್ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಎಂದು ದೃಢಪಡಿಸಿದ ಕೆಲವೇ ಗಂಟೆಗಳ ಬಳಿಕ ಕೇಂದ್ರ ಸಚಿವ ವಿ.ಮುರಳೀಧರನ್  ತನ್ನ ಹೇಳಿಕೆ ತಪ್ಪಾಗಿದೆ ಎಂದು ಹೇಳಿ ಯೂಟರ್ನ್ ತೆಗೆದುಕೊಂಡರು.

ಕೇರಳದಲ್ಲಿ ಬಿಜೆಪಿ ಶ್ರೀಧರನ್ ರನ್ನು ತನ್ನ ಚುನಾವಣಾ ಪ್ರಚಾರದ ವೇಳೆ ಪ್ರಮುಖವಾಗಿ  ಬಿಂಬಿಸಲಿದೆ ಎಂಬ ವದಂತಿಯ ನಡುವೆ ದಿಲ್ಲಿ ಮೆಟ್ರೋ ಯೋಜನೆಯ ಹಿಂದಿದ್ದ ಶ್ರೀಧರನ್ ಪಕ್ಷದ ಸಿಎಂ ಅಭ್ಯರ್ಥಿ ಎಂದು ಗುರುವಾರ ಮುರಳೀಧರನ್ ಖಚಿತಪಡಿಸಿದ್ದರು.

"ಇ.ಶ್ರೀಧರನ್ ರೊಂದಿಗೆ ಕೇರಳ ಬಿಜೆಪಿ ಹೋರಾಟ ನಡೆಸಲಿದ್ದು, ಅವರು ನಮ್ಮ ಮುಖ್ಯಮಂತ್ರಿ ಅಭ್ಯರ್ಥಿ.  ನಾವು ಸಿಪಿಎಂ ಹಾಗೂ ಕಾಂಗ್ರೆಸ್ ಪಕ್ಷಗಳನ್ನು ಸೋಲಿಸಿ ಕೇರಳದ ಜನತೆಗೆ ಭ್ರಷ್ಟಾಚಾರ ರಹಿತ, ಅಭಿವೃದ್ದಿ ಆಧರಿತ ಆಡಳಿತ ನೀಡುತ್ತೇವೆ'' ಎಂದು ಮುರಳೀಧರನ್ ಟ್ವೀಟಿಸಿದ್ದರು.

ಕೆಲವೇ ಗಂಟೆಗಳ ಬಳಿಕ ಮುರಳೀಧರನ್ ತನ್ನ ಮಾತನ್ನು ಹಿಂಪಡೆದಿದ್ದು, ಟ್ವೀಟನ್ನು ಅಳಿಸಿದ್ದಾರೆ.

ನಾನು ಏನು ಹೇಳಲು ಬಯಸುತ್ತೇನೆಂದರೆ ಪಕ್ಷ ಈ ಘೋಷಣೆ ಮಾಡಿದೆ ಎನ್ನುವುದು ಮಾಧ್ಯಮ ವರದಿಯಿಂದ ತಿಳಿದುಕೊಂಡೆ. ಬಳಿಕ ನಾನು ಪಕ್ಷದ ಅಧ್ಯಕ್ಷರನ್ನು ಸಂಪರ್ಕಿಸಿದಾಗ   ತಾನು ಅಂತಹ ಯಾವುದೇ ಘೋಷಣೆ ಮಾಡಿಲ್ಲ ಎಂದು ಅವರು ಹೇಳಿದರು ಎಂದು ಮುರಳೀಧರನ್ ಸ್ಪಷ್ಟನೆ ನೀಡಿದರು.

 ‘ಮೆಟ್ರೊ ಮ್ಯಾನ್’ ಶ್ರೀಧರನ್ ಅವರನ್ನು ಎನ್ ಡಿಎ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಬೇಕೆಂದು ಪಕ್ಷದ ರಾಷ್ಟ್ರ ನಾಯಕತ್ವಕ್ಕೆ ಮನವಿ ಮಾಡುವೆ ಎಂದು ಕೇರಳ ಬಿಜೆಪಿ ಅಧ್ಯಕ್ಷ ಕೆ.ಸುರೇಂದ್ರನ್ ನೀಡಿರುವ ಹೇಳಿಕೆಯ ಬಳಿಕ ಮುರಳೀಧರನ್ ಅವರು ಶ್ರೀಧರನ್ ಕೇರಳ ಸಿಎಂ ಅಭ್ಯರ್ಥಿ ಎಂದು ಘೋಷಿಸಿದ್ದರು  ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News