ಬೆಂಗಳೂರು ಎಸಿಪಿ ಕಚೇರಿಯ ಕುರ್ಚಿ ಕದ್ದ ಜಪಾನಿ ಯುವಕ !

Update: 2021-03-05 05:32 GMT

ಬೆಂಗಳೂರು: ಬೆಂಗಳೂರು : ತನ್ನಿಂದ 2019ರ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ 'ಲಂಚಕ್ಕೆ ಬೇಡಿಕೆಯಿಟ್ಟಿದ್ದ' ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಈಡೇರಿಸುವ ಉದ್ದೇಶದಿಂದ ಕಳೆದ ಶನಿವಾರ ಬೆಂಗಳೂರಿನ ಜೆ ಸಿ ನಗರ ಪೊಲೀಸ್ ಠಾಣೆಯಲ್ಲಿನ ಎಸಿಪಿ ಅವರ ಕುರ್ಚಿಯನ್ನೇ ಕದ್ದೊಯ್ದಿದ್ದ 31 ವರ್ಷದ ಜಪಾನ್ ನಾಗರಿಕನೊಬ್ಬನನ್ನು ದಿಗ್ಬಂಧನ ಕೇಂದ್ರಕ್ಕೆ ಕಳುಹಿಸಲಾಗಿದ್ದು ಆತನನ್ನು ಮುಂದೆ ಆತನ ದೇಶಕ್ಕೆ ಗಡೀಪಾರುಗೊಳಿಸಲಾಗುವುದು ಎಂದು ತಿಳಿದು ಬಂದಿದೆ.

ಹಿರೊತೊಶಿ ಟನಕ ಎಂಬ ಹೆಸರಿನ ಈ ವ್ಯಕ್ತಿಯನ್ನು ನೆಲಮಂಗಲದಲ್ಲಿರುವ ದಿಗ್ಬಂಧನ ಕೇಂದ್ರಕ್ಕೆ ಕಳುಹಿಸಲಾಗಿರುವುದನ್ನು ಬೆಂಗಳೂರು ಉತ್ತರ ಡಿಸಿಪಿ ಧರ್ಮೇಂದ್ರ ಕುಮಾರ್ ದೃಢೀಕರಿಸಿದ್ದಾರೆ. ಆತ ದೇಶದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದಾನೆಂಬ ಕುರಿತು ವರದಿಯನ್ನು ವಿದೇಶೀಯರ ಪ್ರಾದೇಶಿಕ ನೋಂದಣಿ ಕಚೇರಿಗೆ ಸಲ್ಲಿಸಲಾಗಿದೆ. ಆತ ಅಪರಾಧಗೈದಿದ್ದಾನೆ ಹಾಗೂ  ಅಪರಾಧಗೈಯ್ಯುವ ಬೆದರಿಕೆಯೊಡ್ಡಿದ್ದಾನೆ. ಪೊಲೀಸರ ಹೇಳಿಕೆಗಳನ್ನು ಹಾಗೂ ಆತನ ಹೇಳಿಕೆಗಳನ್ನು ಆಲಿಸಿದ ನಂತರ ಆತನನ್ನು ದಿಗ್ಬಂಧನ ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದು ಕುಮಾರ್ ತಿಳಿಸಿದ್ದಾರೆ ಎಂದು indianexpress.com ವರದಿ ಮಾಡಿದೆ.

ಇಂಗ್ಲಿಷ್ ಕಲಿಯುವ ಉದ್ದೇಶದಿಂದ ಈ ಜಪಾನ್ ನಾಗರಿಕ 2019ರಲ್ಲಿ ಬೆಂಗಳೂರಿಗೆ ಆಗಮಿಸಿದ್ದ. ಕರ್ನಾಟಕ ಮಾನವ ಹಕ್ಕುಗಳ ಆಯೋಗದ ಮುಂದಿರುವ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ತನಗೆ ಹೋರಾಡಬೇಕಿರುವುದರಿಂದ ಹಾಗೂ ಅದಕ್ಕಾಗಿ ತಾನು ಭಾರತದಲ್ಲಿಯೇ ಉಳಿಯಬೇಕಿರುವುದರಿಂದ ಪೊಲೀಸರು ಕುರ್ಚಿ ಕದ್ದ ಪ್ರಕರಣದಲ್ಲಿ ತನ್ನ ಮೇಲೆ ಪ್ರಕರಣ ದಾಖಲಿಸಿ ಬಂಧಿಸಬೇಕೆಂದು ತಾನು ಬಯಸಿದ್ದಾಗಿ ಆತ ಹೇಳಿಕೊಂಡಿದ್ದಾನೆ. ಆತನ ವೀಸಾ ಅವಧಿ ಫೆಬ್ರವರಿ 28ಕ್ಕೆ ಮುಕ್ತಾಯಗೊಂಡಿತ್ತು.

ಆತನ ಪ್ರಕಾರ ಆತ ಬೆಂಗಳೂರಿನ ಇಂಗ್ಲಿಷ್ ಕೋಚಿಂಗ್ ಸೆಂಟರ್ ಒಂದಕ್ಕೆ ಸೇರಿದ ನಂತರ ಅದರ ಪ್ರಾಂಶುಪಾಲ ಕೇಂದ್ರದ ಪ್ರಚಾರ ಕಾರ್ಯದಲ್ಲೂ ಭಾಗವಹಿಸುವಂತೆ ಹೇಳಿದ್ದು ತಾನು ಅಂತೆಯೇ ಕೆಲಸ ಮಾಡಿದ್ದರೂ ತನಗೆ ವೇತನ ನೀಡಲಾಗಿರಲಿಲ್ಲ.  ಈ ಕುರಿತು ನವೆಂಬರ್ 13, 2019ರಂದು ಮತ್ತೆ ಬೇಡಿಕೆಯಿಟ್ಟಾಗ ದೊಡ್ಡ ಜಗಳವೇ ನಡೆದು ತಾನು ಪ್ರಾಂಶುಪಾಲರನ್ನು ದೂಡಿದ್ದಾಗಿ ಆತ ಹೇಳಿದ್ದಾನೆ.

"ನೀನು ಮತ್ತೆ ನನ್ನನ್ನು ಮುಟ್ಟಿದರೆ ನೀನು ಬೆಂಗಳೂರಿನಲ್ಲಿ ಉಳಿಯಲು ಸಾಧ್ಯವಿಲ್ಲ'' ಎಂದು ಪ್ರಾಂಶುಪಾಲ ಹೇಳಿದಾಗ ಸಿಟ್ಟಿಗೆದ್ದ ಟನಕ ಆತನ ಮೇಲೆ ಹಲ್ಲೆಗೈದಿದ್ದಾಗಿ ಹೇಳಿಕೊಂಡಿದ್ದಾನೆ.

ಕೋಚಿಂಗ್ ಕೇಂದ್ರದ ಮಾಲಕ ಪೊಲೀಸ್ ದೂರು ನೀಡಿದ ನಂತರ ಪೊಲೀಸರು ಆತನಿಗೆ ಕ್ಷಮಾಪಣೆ ಪತ್ರ ಬರೆಯಲು ಸೂಚಿಸಿದ್ದರು.  ಮುಂದೆ ತನ್ನನ್ನು ದಿಢೀರನೇ ಬಂಧಿಸಿದ್ದರು ಎಂದು ಆತ ಹೇಳಿದ್ದಾನೆ.

ಈ ಪ್ರಕರಣವನ್ನು ಹೈಕೋರ್ಟ್ ನವೆಂಬರ್ 2, 2020ರಂದು ವಜಾಗೊಳಿಸಿತ್ತು ಹಾಗೂ ಆತನಿಗೆ ಫೆಬ್ರವರಿ 28ರೊಳಗೆ ಭಾರತ ಬಿಟ್ಟು ತೆರಳುವಂತೆ ಸೂಚಿಸಲಾಗಿತ್ತು.

ಆತ ಜಪಾನ್ ದೇಶದ ಯಯ್ಝು ನಗರದವನಾಗಿದ್ದು ಮನಃಶಾಸ್ತ್ರ ಪದವೀಧರನಾಗಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News