ಪರೀಕ್ಷೆಯಲ್ಲಿ ಒಂದೇ ರೀತಿಯ ತಪ್ಪುಗಳನ್ನು ಮಾಡಿದ 10 ಟಾಪರ್ ಗಳು!

Update: 2021-03-05 09:58 GMT
ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್

ಭೋಪಾಲ್ : ರೈತರ ಕಲ್ಯಾಣ ಮತ್ತು ಕೃಷಿ ಇಲಾಖೆಗೆ ಕೃಷಿ ಅಧಿಕಾರಿಗಳ ನೇಮಕಾತಿಗಾಗಿ ನಡೆದ ಪರೀಕ್ಷೆಯಲ್ಲಿ ನಡೆದಿದೆಯೆಂದು ಆರೋಪಿಸಲಾಗಿರುವ ಅವ್ಯವಹಾರ ಕುರಿತಂತೆ ತನಿಖೆಗೆ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಆದೇಶಿಸಿದ್ದಾರೆ.

ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳ ಪೈಕಿ ಟಾಪ್ 10 ಅಭ್ಯರ್ಥಿಗಳು ತಮ್ಮ ಉತ್ತರ ಪತ್ರಿಕೆಗಳಲ್ಲಿ ಒಂದೇ ರೀತಿಯ ತಪ್ಪುಗಳನ್ನು ಮಾಡಿದ್ದಾರಲ್ಲದೆ ಪ್ರಶ್ನೆಪತ್ರಿಕೆಯ ವಿವಿಧ ವಿಭಾಗಗಳಲ್ಲಿ ಸಮಾನ ಅಂಕಗಳನ್ನು ಪಡೆದಿದ್ದಾರೆಂಬ ಆರೋಪ ಕೇಳಿ ಬಂದಿದೆ.

ವ್ಯಾಪಂ ಎಂದೇ ಕರೆಯಲ್ಪಡುವ ಪರೀಕ್ಷಾ ಮಂಡಳಿಯು ಫೆಬ್ರವರಿ 10 ಹಾಗೂ 11ರಂದು ಪರೀಕ್ಷೆ ನಡೆಸಿತ್ತು. ಈ ಪರೀಕ್ಷೆಗೆ ಹಾಜರಾಗಿದ್ದ ಹಲವು ಅಭ್ಯರ್ಥಿಗಳು ಹಲವು  ವಿಚಾರಗಳತ್ತ ಬೆಳಕು ಚೆಲ್ಲಿದ್ದು ಟಾಪ್ 10 ಅಭ್ಯರ್ಥಿಗಳು ಒಂದೇ ಪ್ರಾಂತ್ಯದವರಾಗಿದ್ದಾರೆ ಹಾಗೂ ಗ್ವಾಲಿಯರ್‍ನ ಅದೇ ಕಾಲೇಜಿನಲ್ಲಿ ಕಲಿತವರು ಎಂದೂ ಆರೋಪಿಸಲಾಗಿದೆ. ಅಷ್ಟೇ ಅಲ್ಲದೆ ಈ ಹತ್ತು ಮಂದಿಯ ಪೈಕಿ ಒಂಬತ್ತು ಮಂದಿ ಒಂದೇ ಜಾತಿಯವರಾಗಿದ್ದು ಎಲ್ಲಾ ಹತ್ತು ಮಂದಿಯೂ ತಮ್ಮ ನಾಲ್ಕು ವರ್ಷದ ಬಿಎಸ್ಸಿ (ಕೃಷಿ) ಪದವಿ ಪಡೆಯವಲು ಐದು ಅಥವಾ ಹೆಚ್ಚು ವರ್ಷಗಳನ್ನು ತೆಗೆದುಕೊಂಡಿದ್ದಾರೆಂಬ ಆರೋಪಿಸಲಾಗಿದೆ.

ಫೆಬ್ರವರಿ 17ರಂದು ಪರೀಕ್ಷಾ ಮಂಡಳಿಯು ಉತ್ತರ ಪತ್ರಿಕೆಗಳನ್ನು ಅಪ್‍ಲೋಡ್ ಮಾಡಿದ ನಂತರ ಅವ್ಯವಹಾರ ಆರೋಪಗಳು ಕೇಳಿ ಬಂದಿವೆ.

ಪರೀಕ್ಷೆ ಏರ್ಪಡಿಸಲು ಹೊರಗುತ್ತಿಗೆ ನೀಡಲಾಗಿದ್ದ ಎನ್‍ಎಸ್‍ಇಐಟಿ ಎಂಬ ಕಂಪೆನಿ ಕುರಿತಂತೆಯೂ ಹಲವು ಅಭ್ಯರ್ಥಿಗಳು ಸಂಶಯ ವ್ಯಕ್ತಪಡಿಸಿದ್ದಾರಲ್ಲದೆ ಉತ್ತರ ಪ್ರದೇಶದಲ್ಲಿ  2017ರಲ್ಲಿ ಎಸ್ಸೈ ನೇಮಕಾತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾದ ನಂತರ ಅಲ್ಲಿ ಈ ಕಂಪೆನಿಯನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿತ್ತು ಎಂಬುದನ್ನು ಎತ್ತಿ ತೋರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News