ಸ್ಕಾರ್ಪಿಯೊ ಮಾಲಕನ ಸಾವನ್ನು ಹತ್ಯೆ ಪ್ರಕರಣವಾಗಿ ದಾಖಲಿಸಿದ ಎಟಿಎಸ್

Update: 2021-03-07 18:30 GMT

ಹೊಸದಿಲ್ಲಿ, ಮಾ. 7: ಉದ್ಯಮಿ ಮುಕೇಶ್ ಅಂಬಾನಿ ಅವರ ಮುಂಬೈಯಲ್ಲಿರುವ ನಿವಾಸದ ಸಮೀಪ ಜೆಲಿಟಿನ್ ಕಡ್ಡಿಗಳನ್ನು ತುಂಬಿದ್ದ ಪರಿತ್ಯಕ್ತ ಸ್ಥಿತಿಯಲ್ಲಿ ಇದ್ದ ಸ್ಕಾರ್ಪಿಯೋ ವಾಹನದ ಮಾಲಕ ಮನ್ಸುಖ್ ಹಿರೇನ್ ಅವರ ನಿಗೂಢ ಸಾವಿನ ಕುರಿತಂತೆ ಈಗ ಎಟಿಎಸ್ ಕೊಲೆ ಪ್ರಕರಣ ದಾಖಲಿಸಿದೆ.

ಈ ಪ್ರಕರಣವನ್ನು ‘ಆಕಸ್ಮಿಕ ಸಾವು’ ಎಂಬ ನೆಲೆಯಲ್ಲಿ ತನಿಖೆ ನಡೆಸಲಾಗುತ್ತಿತ್ತು. ಆದರೆ, ಮನ್ಸುಖ್ ಹಿರೇನ್ ಅವರ ಪತ್ನಿ ದೂರು ನೀಡಿದ ಹಿನ್ನೆಲೆಯಲ್ಲಿ ಇದನ್ನು ಕೊಲೆ ಪ್ರಕರಣವಾಗಿ ಬದಲಾಯಿಸಲಾಗಿದೆ. ಅನಾಮಿಕ ವ್ಯಕ್ತಿಗಳು ವಿರುದ್ಧ ಪಿತೂರಿ, ಹತ್ಯೆ ಹಾಗೂ ಸಾಕ್ಷ ನಾಶದ ಪ್ರಯತ್ನದ ಆರೋಪವನ್ನು ಅವರು ಹೊರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮನ್ಸುಖ್ ಹಿರೇನ್ ಅವರ ಮೃತದೇಹ ಕಳೆದ ವಾರ ಥಾಣೆ ಸಮೀಪದ ಕ್ರೀಕ್ನಲ್ಲಿ ಪತ್ತೆಯಾಗಿತ್ತು. ಈಗ ಈ ಪ್ರಕರಣದ ತನಿಖೆಯನ್ನು ಮುಂಬೈ ಪೊಲೀಸರಿಂದ ಎಟಿಎಸ್ಗೆ ವರ್ಗಾಯಿಸಲಾಗಿದೆ.

‘‘ಅವರ ಮುಖದ ಎಡ ಭಾಗ, ಮೂಗಿನ ಹೊಳ್ಳೆಯ ಮೇಲ್ಬಾಗ, ಬಲ ಕೆನ್ನೆಯಿಂದ ಗಲ್ಲದವರೆಗೆ ಹಾಗೂ ಬಲ ಕಣ್ಣಿನ ಮೇಲೆ ಸಣ್ಣ ತರಚಿದ ಗಾಯ ಇದೆ’’ ಎಂದು ಮರಣೋತ್ತರ ವರದಿ ಶನಿವಾರ ಬಹಿರಂಗಗೊಳಿಸಿತ್ತು. ಪಕ್ಕೆಲುಬುಗಳು, ಮೃದ್ವಸ್ಥಿ, ಶ್ವಾಸಕೋಶ ಹಾಗೂ ಹೃದಯಾವರಣಕ್ಕೆ ಯಾವುದೇ ಹಾನಿಯಾಗಿರುವುದು ಕಂಡು ಬಂದಿಲ್ಲ ಎಂದು ಅದು ಹೇಳಿತ್ತು. ಆದರೆ, ಸಾವಿಗೆ ಕಾರಣ ತಿಳಿಸುವುದನ್ನು ಕಾಯ್ದಿರಿಸಿತ್ತು.

ಅವರು ಪೊಲೀಸರ ಕಿರುಕುಳದಿಂದ ರಕ್ಷಣೆ ಕೋರಿ ಮುಖ್ಯಮಂತ್ರಿ, ರಾಜ್ಯ ಗೃಹ ಸಚಿವ, ಥಾಣೆ ಹಾಗೂ ಮುಂಬೈ ಪೊಲೀಸ್ ಆಯುಕ್ತರಿಗೆ ಮಾರ್ಚ್ 2ರಂದು ಪತ್ರ ಬರೆದಿರುವುದು ಈಗ ಬೆಳಕಿಗೆ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News