ಬೆಂಗಳೂರು: ಬೆಲೆ ಏರಿಕೆ ಖಂಡಿಸಿ ಎಐಎಂಎಸ್‍ಎಸ್ ಪ್ರತಿಭಟನೆ, ಭೂತದಹನ

Update: 2021-03-08 18:30 GMT

ಬೆಂಗಳೂರು, ಮಾ.8: ಕೊರೋನ ಆರ್ಥಿಕ ಸಂಕಷ್ಟದಿಂದ ದೇಶದ ಜನತೆ ಇನ್ನೂ ಚೇತರಿಸಿಕೊಳ್ಳುತ್ತಿರುವಾಗಲೇ ಸರಕಾರದ ಬೆಲೆ ಏರಿಕೆ ಕ್ರಮವು ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಎಂಐಎಂಎಸ್‍ಎಸ್ ಕರ್ನಾಟಕ ರಾಜ್ಯ ಕಾರ್ಯದರ್ಶಿ ಶೋಭಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೋಮವಾರ ಎಐಎಂಎಸ್‍ಎಸ್(ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ) ಬೆಂಗಳೂರು ಜಿಲ್ಲಾ ಸಮಿತಿಯ ವತಿಯಿಂದ ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಹಮ್ಮಿಕೊಂಡಿದ್ದ ಬೆಲೆ ಏರಿಕೆಯ ಭೂತದಹನ ಮಾಡಿ ಅವರು ಮಾತನಾಡಿದರು.

ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಅಡುಗೆ ಎಣ್ಣೆ ಮುಂತಾದ ಅಗತ್ಯ ವಸ್ತುಗಳ ಬೆಲೆ ದಿನೇದಿನೇ ಏರಿಕೆಯಾಗುತ್ತಲೇ ಇದೆ. ಇದರಿಂದ ಅತಿ ಹೆಚ್ಚು ಕಷ್ಟಕ್ಕೆ ಒಳಗಾಗುತ್ತಿರುವವರು ಮಹಿಳೆಯರು, ಅದರಲ್ಲೂ ಮನೆ ಕೆಲಸ ಮಾಡುವ ಹೆಣ್ಣುಮಕ್ಕಳು, ಗಾರ್ಮೆಂಟ್ಸ್ ನೌಕರರು, ದಿನಗೂಲಿ ನೌಕರರು ಜೀವನ ನಡೆಸಲು ದಿನನಿತ್ಯ ಪರದಾಡುವ ಪರಿಸ್ಥಿತಿಯುಂಟಾಗಿದೆ ಎಂದು ಅವರು ತಿಳಿಸಿದ್ದಾರೆ.

ಇದರ ಜೊತೆಗೆ ರೈಲ್ವೆ, ಕೃಷಿ, ಶಿಕ್ಷಣ ಹಾಗೂ ಆರೋಗ್ಯ ಹೀಗೆ ಎಲ್ಲ ಕ್ಷೇತ್ರಗಳನ್ನು ಖಾಸಗೀಕರಣಗೊಳಿಸಲು ಸರಕಾರ ಮುಂದಾಗಿದೆ. ರೈತ ವಿರೋಧಿ, ಜೀವ ವಿರೋಧಿ ಕೃಷಿ ಕಾಯ್ದೆಗಳನ್ನು ಜಾರಿ ಮಾಡಿದೆ. ಬಂಡವಾಳಶಾಹಿ ಹಿತಾಸಕ್ತಿಯನ್ನು ಕಾಪಾಡಲು ಕಾರ್ಪೋರೇಟ್ ಮನೆತನಗಳಿಗೆ ಕೋಟ್ಯಂತರ ರೂಪಾಯಿಗಳ ತೆರಿಗೆ ರಿಯಾಯಿತಿ ನೀಡಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಕೊರೋನ ಸಂಕಷ್ಟದಲ್ಲಿ ಒಂದೆಡೆ ಜನರು ನಿರ್ಗತಿಕರಾದರೆ ಮತ್ತೊಂದೆಡೆ ಮುಕೇಶ್ ಅಂಬಾನಿಯ ಆದಾಯ 2.5 ಲಕ್ಷ ಕೋಟಿ ರೂ. 5.5 ಲಕ್ಷ ಕೋಟಿಗೆ ಏರಿತು. ಹೀಗೆ ಸಾಮಾನ್ಯ ಜನತೆಯನ್ನು ಅತಿ ಹೆಚ್ಚು ಶೋಷಿಸುತ್ತಿದ್ದಾರೆ. ಅಂತರ್‍ರಾಷ್ಟ್ರೀಯ ಮಹಿಳಾ ದಿನದ ಹಿನ್ನೆಲೆಯಲ್ಲಿ ಜನರ ಜ್ವಲಂತ ಸಮಸ್ಯೆಗಳ ವಿರುದ್ಧದ ಹೋರಾಟಕ್ಕೆ ನಾವೆಲ್ಲರೂ ಸಜ್ಜಾಗಬೇಕೆಂದು ಅವರು ಕರೆ ನೀಡಿದ್ದಾರೆ.

ಈ ವೇಳೆ ಎಐಎಂಎಸ್‍ಎಸ್ ಬೆಂಗಳೂರು ಜಿಲ್ಲಾ ಅಧ್ಯಕ್ಷೆ ಹೇಮಾವತಿ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News