ಕೊಲ್ಕತ್ತಾದಲ್ಲಿ ಬೆಂಕಿ ಆಕಸ್ಮಿಕ: ಅಗ್ನಿಶಾಮಕ ಸಿಬ್ಬಂದಿ ಸಹಿತ 9 ಮಂದಿ ಸಜೀವ ದಹನ

Update: 2021-03-09 03:42 GMT
Photo source: PTI

ಕೊಲ್ಕತ್ತಾ, ಮಾ.9: ಇಲ್ಲಿನ ಸ್ಟ್ರಾಂಡ್ ರಸ್ತೆಯ ಕಚೇರಿ ಕಟ್ಟಡದಲ್ಲಿ ಸೋಮವಾರ ರಾತ್ರಿ ಸಂಭವಿಸಿದ ಭೀಕರ ಅಗ್ನಿ ಆಕಸ್ಮಿಕದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ, ಪೊಲೀಸ್ ಸೇರಿದಂತೆ ಒಂಭತ್ತು ಮಂದಿ ಸಜೀವ ದಹನವಾಗಿದ್ದಾರೆ.

ಮೃತರಲ್ಲಿ ನಾಲ್ವರು ಅಗ್ನಿಶಾಮಕ ಸಿಬ್ಬಂದಿ, ಒಬ್ಬ ಪೊಲೀಸ್ ಅಧಿಕಾರಿ, ರೈಲ್ವೆ ಅಧಿಕಾರಿ ಹಾಗೂ ಭದ್ರತಾ ಸಿಬ್ಬಂದಿ ಸೇರಿದ್ದಾರೆ. ಏಳು ಮಂದಿಯ ಪೈಕಿ ಐದು ಮಂದಿಯ ಮೃತದೇಹ 12ನೇ ಮಹಡಿಯಲ್ಲಿ ಲಿಫ್ಟ್‌ನಲ್ಲಿ ಪತ್ತೆಯಾಗಿದೆ. ಇವರು ಲಿಫ್ಟ್‌ನ ಒಳಗಿದ್ದಾಗಲೇ ಉಸಿರುಗಟ್ಟಿ, ಸುಟ್ಟಗಾಯಗಳಿಂದ ಮೃತಪಟ್ಟಿರಬೇಕು ಎಂದು ಶಂಕಿಸಲಾಗಿದೆ.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾತ್ರಿ 11ರ ಸುಮಾರಿಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದರು. ಬೆಂಕಿ ಕಾಣಿಸಿಕೊಂಡ ತಕ್ಷಣ ಅಗ್ನಿಶಾಮಕ ಸಚಿವ, ನಗರ ವ್ಯವಹಾರಗಳ ಸಚಿವ, ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದರು. 13ನೇ ಮಹಡಿಯಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದ್ದು, 25ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳ ಮೂಲಕ ನಿಯಂತ್ರಣಕ್ಕೆ ತರುವ ಪ್ರಯತ್ನ ನಡೆಸಲಾಯಿತು.

"ಏಳು ಮಂದಿ ಈಗಾಗಲೇ ಸಾವಿಗೀಡಾಗಿದ್ದಾರೆ. ಇನ್ನೂ ಇಬ್ಬರು ನಾಪತ್ತೆಯಾಗಿದ್ದಾರೆ ಎಂದು ಪೊಲೀಸ್ ಆಯುಕ್ತರು ಹೇಳಿದ್ದಾರೆ. ಬೆಂಕಿ ಆಕಸ್ಮಿಕದ ಸಂದರ್ಭದಲ್ಲಿ ಲಿಫ್ಟ್ ಬಳಸಿದ್ದು, ಹೆಚ್ಚಿನ ದುರಂತಕ್ಕೆ ಕಾರಣ. ಮೃತರ ಕುಟುಂಬಗಳಿಗೆ 10 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು" ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಕಟಿಸಿದರು.

"ಇದು ರೈಲ್ವೆ ಆಸ್ತಿ. ರೈಲ್ವೆ ಇಲಾಖೆ ಘಟನೆಗೆ ಹೊಣೆ. ಕಟ್ಟಡದ ನಕ್ಷೆಯನ್ನು ರೈಲ್ವೇ ಇಲಾಖೆ ಒದಗಿಸಿಲ್ಲ. ದುರಂತದ ವಿಚಾರದಲ್ಲಿ ರಾಜಕೀಯ ತರಲು ಬಯಸುವುದಿಲ್ಲ. ಆದರೆ ರೈಲ್ವೆಯ ಯಾವ ಅಧಿಕಾರಿಯೂ ಸ್ಥಳಕ್ಕೆ ಭೇಟಿ ನೀಡಿಲ್ಲ" ಎಂದು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News