ಕೃಷಿ ಕಾಯ್ದೆಯ ಬಿಸಿ: ಹರ್ಯಾಣದಲ್ಲಿ ಅವಿಶ್ವಾಸ ನಿರ್ಣಯ ಎದುರಿಸಲಿರುವ ಬಿಜೆಪಿ ಸರಕಾರ

Update: 2021-03-10 06:50 GMT

ನವದೆಹಲಿ: ಹರ್ಯಾಣದಲ್ಲಿ ಆಡಳಿತಾರೂಢ ಬಿಜೆಪಿ ಇಂದು ವಿಧಾನಸಭೆಯಲ್ಲಿ ಅವಿಶ್ವಾಸ ನಿರ್ಣಯವನ್ನು ಎದುರಿಸಲಿದೆ ಎಂದು NDTV.COM ವರದಿ ಮಾಡಿದೆ. ಸರ್ಕಾರವನ್ನು ಬೆಂಬಲಿಸುತ್ತಿರುವ ಇಬ್ಬರು ಸ್ವತಂತ್ರ ಶಾಸಕರು ಬೆಂಬಲವನ್ನು ಹಿಂತೆಗೆದುಕೊಂಡಿದ್ದಾರೆ ಎಂದು ಪ್ರತಿಪಕ್ಷ ಕಾಂಗ್ರೆಸ್ ಹೇಳಿಕೊಂಡಿದೆ.

ಸದ್ಯದ ಈ ನಡೆಯು ಕೇಂದ್ರದ ಹೊಸ ಕೃಷಿ ಕಾನೂನುಗಳ ಬಗ್ಗೆ ರಾಜ್ಯದ ಜನತೆಗೆ ಮತ್ತು ರೈತರಿಗಿರುವ ವ್ಯಾಪಕ ಅಸಮಾಧಾನದ ನಡುವೆ ಸರ್ಕಾರವನ್ನು ಮುಜುಗರಕ್ಕೀಡುಮಾಡುವ ಯೋಜನೆಯಾಗಿ ಕಂಡುಬರುತ್ತಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ದುಶ್ಯಂತ್ ಚೌಟಾಲಾ ಅವರ ಜನನಾಯಕ್ ಜನತಾ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿಯು ನಮ್ಮ ಸರ್ಕಾರಕ್ಕೆ ಯಾವುದೇ ಬೆದರಿಕೆ ಇಲ್ಲ ಎಂದು ಹೇಳಿಕೊಂಡಿದೆ.

ಕಾಂಗ್ರೆಸ್ ಜೆಜೆಪಿಯ ಮೇಲೆ ಒತ್ತಡ ಹೇರುವ ಸಾಧ್ಯತೆಯಿದ್ದು, ಜೆಜೆಪಿ ಮತ್ತು ಬಿಜೆಪಿಯ ಯಾವ ಶಾಸಕರೂ ರೈತರ ಉದ್ದೇಶವನ್ನು ಬೆಂಬಲಿಸುವುದಿಲ್ಲ ಎಂಬುದನ್ನು ಜನರಿಗೆ ಈಗಾಗಲೇ ಬಹಿರಂಗಪಡಿಸಲು ಪ್ರಾರಂಭಿಸಿದ್ದಾರೆ ಎಂದು ವರದಿಗಳು ತಿಳಿಸಿವೆ. ಈ ನಡುವೆ ಜೆಜೆಪಿ ಸದಸ್ಯರು ತಮ್ಮ ಕ್ಷೇತ್ರಗಳಲ್ಲಿ ರೈತರಿಂದ ಬಹಿಷ್ಕಾರಕ್ಕೆ ಒಳಗಾಗುತ್ತಿದ್ದಾರೆ ಎಂಬುವುದನ್ನು ಸಾರ್ವಜನಿಕವಾಗಿಯೇ ಒಪ್ಪಿಕೊಂಡಿದ್ದಾರೆ.

90 ಸದಸ್ಯರ ಹರ್ಯಾಣ ವಿಧಾನಸಭೆಯಲ್ಲಿ ಬಿಜೆಪಿಗೆ 40 ಸ್ಥಾನಗಳಿವೆ. ಐದು ಸ್ವತಂತ್ರ ಶಾಸಕರಲ್ಲಿ 10 ಜೆಜೆಪಿ ಶಾಸಕರ ಬೆಂಬಲವೂ ಇದೆ. ಕಾಂಗ್ರೆಸ್ 31 ಸ್ಥಾನಗಳನ್ನು ಹೊಂದಿದೆ. ವಿಧಾನಸಭೆಯಲ್ಲಿ ಎರಡು ಸ್ಥಾನಗಳು ಖಾಲಿ ಇದ್ದು, ಬಹುಮತವು 45 ಸ್ಥಾನಗಳಲ್ಲಿದೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News