“ಪ್ರತಿಭಟನಾಕಾರರು ಸಾಯುವವರೆಗೆ ಗುಂಡು ಹಾರಿಸಲು ಆದೇಶ ನೀಡಲಾಗಿತ್ತು”

Update: 2021-03-10 17:08 GMT

 ಯಾಂಗನ್ (ಮ್ಯಾನ್ಮಾರ್), ಮಾ. 10: ಪ್ರತಿಭಟನಕಾರರು ಸಾಯುವವರೆಗೆ ಗುಂಡು ಹೊಡೆಯಿರಿ ಎಂಬುದಾಗಿ ನನಗೆ ಸೇನೆಯಿಂದ ಆದೇಶ ಬಂದಿತ್ತು ಎಂಬುದಾಗಿ ಮ್ಯಾನ್ಮಾರ್‌ನಿಮದ ತಪ್ಪಿಸಿಕೊಂಡು ಭಾರತಕ್ಕೆ ಪಲಾಯನಗೈದಿರುವ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಆದರೆ, ಹಾಗೆ ಮಾಡಲು ನಾನು ನಿರಾಕರಿಸಿದೆ ಎಂದು ಅವರು ಹೇಳಿದ್ದಾರೆ

ಫೆಬ್ರವರಿ 27ರಂದು ಮ್ಯಾನ್ಮಾರ್‌ನ ಖಾಮ್‌ಪತ್ ಪಟ್ಟಣದಲ್ಲಿ ಪ್ರತಿಭಟನಕಾರರನ್ನು ಚದುರಿಸುವುದಕ್ಕಾಗಿ ಅವರಿಗೆ ಈ ಆದೇಶ ನೀಡಲಾಗಿತ್ತು.

‘‘ಮರುದಿನ, ಅಧಿಕಾರಿಯೊಬ್ಬರು ನನಗೆ ಕರೆ ಮಾಡಿ, ಗುಂಡು ಹಾರಿಸಲು ಸಿದ್ಧವೇ ಎಂದು ಕೇಳಿದರು’’ ಎಂದು ಅವರು ನುಡಿದರು. ಗುಂಡು ಹಾರಿಸಲು ಮತ್ತೆ ನಿರಾಕರಿಸಿದ 27 ವರ್ಷದ ಅಧಿಕಾರಿ ತನ್ನ ಹುದ್ದೆಗೆ ರಾಜೀನಾಮೆ ನೀಡಿದರು.

ಅವರು ಮಾರ್ಚ್ 1ರಂದು ತನ್ನ ಮನೆ ಮತ್ತು ಕುಟುಂಬವನ್ನು ತೊರೆದು ಮೂರು ದಿನಗಳ ಕಾಲ ಪ್ರಯಾಣಿಸಿದರು. ಜನರು ತನ್ನನ್ನು ಪತ್ತೆಹಚ್ಚುವುದನ್ನು ತಪ್ಪಿಸಿಕೊಳ್ಳುವುದಕ್ಕಾಗಿ ಅವರು ಹೆಚ್ಚಾಗಿ ರಾತ್ರಿಯಲ್ಲಿ ಪ್ರಯಾಣಿಸಿದರು. ಅಂತಿಮವಾಗಿ ಅವರು ಭಾರತದ ಮಿರೆರಾಮ್ ರಾಜ್ಯವನ್ನು ತಲುಪಿದರು ಎಂದು ‘ರಾಯ್ಟರ್ಸ್’ ಸುದ್ದಿ ಸಂಸ್ಥೆ ವರದಿ ಮಾಡಿದೆ.

ನಾನು ಮತ್ತು ನನ್ನ ಆರು ಸಹೋದ್ಯೋಗಿಗಳು ಫೆಬ್ರವರಿ 27ರಂದು ಗುಂಡು ಹಾರಿಸಲು ಮೇಲಿನ ಅಧಿಕಾರಿ ನೀಡಿದ ಆದೇಶವನ್ನು ಉಲ್ಲಂಘಿಸಿದೆವು ಎಂದು ಅವರು ಹೇಳಿದರು.

‘‘ಶಾಂತಿಯುತವಾಗಿ ಪ್ರತಿಭಟಿಸುತ್ತಿರುವ ನಮ್ಮದೇ ಜನರ ಮೇಲೆ ಗುಂಡು ಹಾರಿಸುವ ಧೈರ್ಯ ನಮ್ಮಲ್ಲಿರಲಿಲ್ಲ’’ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News