ಸಬಲರ ಅಭಿವೃದ್ಧಿಗೆ ನಿಗಮ: ಇದೆಂತಹ ಸಾಮಾಜಿಕ ನ್ಯಾಯ?

Update: 2021-03-11 05:39 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಅಭಿವೃದ್ಧಿ ಎನ್ನುವುದರ ಮಾನದಂಡ ಎಲ್ಲ ರೀತಿಯಲ್ಲೂ ಬದಲಾಗಿದೆ. ಉಳ್ಳವರು ಇನ್ನಷ್ಟು ಶ್ರೀಮಂತರಾಗುವುದನ್ನೇ ಅಭಿವೃದ್ಧಿ ಎಂದು ದೇಶ ಬಹುತೇಕ ಒಪ್ಪಿಕೊಂಡಂತಿದೆ. ಎಲ್ಲ ಸಾರ್ವಜನಿಕ ಸೊತ್ತುಗಳು ಬೆರಳೆಣಿಕೆಯ ಖಾಸಗಿ ಉದ್ಯಮಿಗಳ ಪಾಲಾಗುತ್ತಿರುವುದು ಇದರ ಭಾಗವೇ ಆಗಿದೆ. ಮೇಲ್ ಜಾತಿಯ ಬಡವರಿಗೆ(ಮಾಸಿಕವಾಗಿ 65 ಸಾವಿರ ರೂಪಾಯಿ ದುಡಿಯುವವರು) ಶೇಕಡ 10 ಮೀಸಲಾತಿ ನೀಡಿರುವುದು ಇದೇ ಉದ್ದೇಶದಿಂದ. ಒಂದೆಡೆ ದಲಿತ, ಹಿಂದುಳಿದವರ್ಗವನ್ನು ಮೇಲೆತ್ತುವಲ್ಲಿ ಮೀಸಲಾತಿ ಭಾಗಶಃ ವಿಫಲವಾಗಿದೆ. ಮೀಸಲಾತಿಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸಿ, ತಳಸ್ತರದ ಜನರೆಡೆಗೆ ತಲುಪಿಸುವ ಹೊಣೆಗಾರಿಕೆ ಸರಕಾರದ್ದಾಗಿತ್ತು. ಆದರೆ, ಅದನ್ನು ಕೈ ಬಿಟ್ಟು ಮರಾಠಾ, ಜಾಟ್, ಬ್ರಾಹ್ಮಣ, ಪಟೇಲರಂತಹ ಮೇಲ್‌ಜಾತಿಗೆ ಮೀಸಲಾತಿಯನ್ನು ಹಂಚುವ ಬಗ್ಗೆ ಸರಕಾರ ಯೋಚಿಸುತ್ತಿದೆ. ಒಂದೆಡೆ ಖಾಸಗೀಕರಣ ಮೀಸಲಾತಿಯನ್ನು ದುರ್ಬಲಗೊಳಿಸುತ್ತಿದ್ದರೆ, ಮಗದೊಂದೆಡೆ ಮೇಲ್‌ಜಾತಿಯ ಜನರು ಮೀಸಲಾತಿಯನ್ನು ತಮ್ಮದಾಗಿಸಿಕೊಂಡು ಇನ್ನಷ್ಟು ಬಲಿಷ್ಠರಾಗಿ ದುರ್ಬಲ ಸಮುದಾಯಗಳನ್ನು ದಮನಿಸುತ್ತಿದ್ದಾರೆ.

 ಹೀಗೆ ಉಳ್ಳವರನ್ನು ಇನ್ನಷ್ಟು ಮೇಲೆತ್ತುವ ಯೋಜನೆಯನ್ನು ಜಾರಿಗೊಳಿಸುವಲ್ಲಿ ಕರ್ನಾಟಕ ಸರಕಾರವೂ ಹಿಂದೆ ಬಿದ್ದಿಲ್ಲ. ಕೆಲವು ತಿಂಗಳ ಹಿಂದೆಯಷ್ಟೇ ರಾಜ್ಯದಲ್ಲಿ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯನ್ನು ಸ್ಥಾಪಿಸಿದ್ದ ಸರಕಾರ, ಜೊತೆ ಜೊತೆಗೇ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮವನ್ನೂ ಸ್ಥಾಪಿಸಿತು. ಇದೀಗ ಸೋಮವಾರ ಮಂಡಿಸಿದ ಬಜೆಟ್‌ನಲ್ಲಿ ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿದೆ. ಇಂತಹದೊಂದು ನಿಗಮವನ್ನು ಸ್ಥಾಪಿಸುವುದಕ್ಕಾಗಿ ಆಯಾ ಜಾತಿಗಳಿಂದ ಯಾವುದೇ ಒತ್ತಾಯ, ಬೇಡಿಕೆಗಳು ಬರದೇ ಇದ್ದರೂ ಸರಕಾರ ಈ ನಿಗಮಗಳನ್ನು ಸ್ಥಾಪಿಸಿ ಕೋಟಿಟ್ಟಲೆ ಹಣವನ್ನು ಅವುಗಳಿಗೆ ಒದಗಿಸಲು ಮುಂದಾಗಿದೆ. ಇದೇ ಸಂದರ್ಭದಲ್ಲಿ ಕುರುಬ, ಬಿಲ್ಲವ, ಮೊಗವೀರ ಮೊದಲಾದ ಸಮುದಾಯಗಳ ಮುಖಂಡರು ಸರಕಾರದ ನಿರ್ಧಾರವನ್ನು ನುಂಗಲೂ ಆಗದೆ, ಉಗುಳಲೂ ಆಗದಂತಹ ಸ್ಥಿತಿಯಲ್ಲಿದ್ದಾರೆ. ಅವರನ್ನೆಲ್ಲ ‘ಹಿಂದುತ್ವ’ದ ಹೆಸರಿನಲ್ಲಿ ಆರೆಸ್ಸೆಸ್ ಬಾಯಿ ಮುಚ್ಚಿಸಿದೆ.

ಈ ನಿಗಮ, ಮಂಡಳಿಗಳನ್ನು ಪ್ರಶ್ನಿಸಿದರೆ ಎಲ್ಲಿ ವರಿಷ್ಠರ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆಯೋ ಎಂದು ಹೆದರಿ ದುರ್ಬಲ ಸಮುದಾಯದ ಮುಖಂಡರು ವೌನಕ್ಕೆ ಶರಣಾಗಿದ್ದಾರೆ. ಈ ರಾಜ್ಯದಲ್ಲಿ ಕನ್ನಡ ಭಾಷೆಯ ಅಭಿವೃದ್ಧಿಗಾಗಿ ಪ್ರಾಧಿಕಾರವಿದೆ. ಹಾಗೆಯೇ ಬೇರೆ ಬೇರೆ ಕ್ಷೇತ್ರಗಳ ಅಭಿವೃದ್ಧಿಗೆ ನಿಗಮ, ಮಂಡಳಿಗಳೂ ಇವೆ. ಕರ್ನಾಟಕದ ಸಮಗ್ರ ಅಭಿವೃದ್ಧಿಯ ಭಾಗವಾಗಿ ಈ ನಿಗಮ, ಪ್ರಾಧಿಕಾರಗಳನ್ನು ರಚಿಸಲಾಗಿದೆ. ಕೆಲವು ನಿರ್ಲಕ್ಷಿತ ಕ್ಷೇತ್ರಗಳನ್ನು ವಿಶೇಷ ಆದ್ಯತೆಯಿಂದ ಗುರುತಿಸಿ ಅದಕ್ಕಾಗಿ ಪ್ರತ್ಯೇಕವಾಗಿ ಕೆಲಸ ಮಾಡಲು ಈ ಪ್ರಾಧಿಕಾರ, ನಿಗಮ, ಮಂಡಳಿಗಳನ್ನು ರಚಿಸಲಾಗುತ್ತದೆ. ಮೀಸಲಾತಿ ತನ್ನ ಗುರಿಯನ್ನು ತಲುಪಲು ಸಾಧ್ಯವಾಗದೇ ಇದ್ದಾಗ, ಒಳ ಮೀಸಲಾತಿಯನ್ನು ಘೋಷಿಸುವುದೂ ಇದೇ ಕಾರಣಕ್ಕೆ.

ಮನೆಯಲ್ಲಿ ಹತ್ತು ಮಕ್ಕಳು ಇದ್ದಾರೆ ಎಂದಿಟ್ಟುಕೊಳ್ಳೋಣ. ಅವರಲ್ಲಿ ಒಬ್ಬ ಕ್ಷಯ ಪೀಡಿತ. ಇನ್ನೊಬ್ಬ ಅಂಗವಿಕಲ. ತಂದೆ ತಾಯಿಗಳು ಎಲ್ಲರನ್ನೂ ಸಮಾನವಾಗಿ ಕಾಣಬೇಕು ನಿಜ. ಆದರೆ ಕುಟುಂಬದೊಳಗೆ ಆ ಸಮಾನತೆ ಜಾರಿಗೆ ಬರಬೇಕಾದರೆ ಕ್ಷಯ ಪೀಡಿತ ಮತ್ತು ಅಂಗವಿಕಲನಿಗೆ ತಂದೆ ತಾಯಿಗಳು ವಿಶೇಷ ಆಸ್ಥೆಯನ್ನು ತೋರಿಸಬೇಕು. ಎಲ್ಲರಿಗೂ ಒಂದು ತುತ್ತು ಬಡಿಸುವಾಗ, ಕ್ಷಯ ಪೀಡಿತನಿಗೆ ಆತನ ರೋಗ ನಿವಾರಣೆಯಾಗುವವರೆಗೆ ಎರಡು ತುತ್ತು ಬಡಿಸಬೇಕಾಗುತ್ತದೆ. ಆದರೆ ಸದ್ಯಕ್ಕೆ ಕರ್ನಾಟಕದಲ್ಲಿ ನಡೆಯುತ್ತಿರುವುದೇನು? ಕ್ಷಯ ಪೀಡಿತನಿಗೆ ಎರಡು ತುತ್ತು ಕೊಡುತ್ತಿರುವುದನ್ನು ಉಳಿದ ಆರೋಗ್ಯವಂತ ಮಕ್ಕಳು ಅಸಹನೆಯಿಂದ ನೋಡುತ್ತಿದ್ದಾರೆ ಎನ್ನುವ ಕಾರಣಕ್ಕೆ ಅವರಿಗೂ ಎರಡು ತುತ್ತು ಉಣಿಸಲು ಸರಕಾರ ಮುಂದಾಗಿದೆ. ಅಂಗವಿಕಲನಿಗೆ ನೀಡುವ ಸೌಕರ್ಯಗಳನ್ನು ಕುಟುಂಬದ ಬಲಿಷ್ಠ ಸದಸ್ಯನಿಗೂ ನೀಡಿ ಆತನನ್ನು ಖುಷಿ ಪಡಿಸಲು ಯತ್ನಿಸುತ್ತಿದೆ. ಇದು ನಿಧಾನಕ್ಕೆ ಕ್ಷಯ ಪೀಡಿತ ಮತ್ತು ಅಂಗವಿಕಲನ ಆರೈಕೆಯ ಮೇಲೆ ದುಷ್ಪರಿಣಾಮ ಬೀರ ತೊಡಗುತ್ತದೆ.

ನಶಿಸುವ ಹಂತದಲ್ಲಿರುವ ಕೊರಗ ಸಮುದಾಯವನ್ನು, ಈ ನೆಲದಲ್ಲಿರುವ ವಿವಿಧ ಬುಡಕಟ್ಟು ಸಮುದಾಯಗಳನ್ನು ವಿವಿಧ ಮಂಡಳಿ, ನಿಗಮಗಳನ್ನು ಸ್ಥಾಪಿಸಿ ಅವರಿಗೆ ನೆರವು ನೀಡುವುದು ಸರಕಾರದ ಕರ್ತವ್ಯ. ದುರ್ಬಲಜಾತಿಗಳಿಗೆ ಮೀಸಲಾತಿಯನ್ನ್ನು ಇದೇ ಹಿನ್ನೆಲೆಯಲ್ಲಿ ಸಂವಿಧಾನ ನೀಡಿದೆ. ಇಷ್ಟಾದರೂ ಸರಕಾರ ದುರ್ಬಲ ಸಮುದಾಯಕ್ಕೆ ಆರ್ಥಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಅವರ ಜನಸಂಖ್ಯೆಗೆ ಅನುಗುಣವಾಗಿ ಪ್ರಾತಿನಿಧ್ಯವನ್ನು ನೀಡಲು ವಿಫಲವಾಗಿದೆ. ಇಂತಹ ಸಂದರ್ಭದಲ್ಲಿ ಸರಕಾರ ವೀರಶೈವರಿಗೆ, ಒಕ್ಕಲಿಗರಿಗೆ ಅಭಿವೃದ್ಧಿ ನಿಗಮ, ಮಂಡಳಿಗಳನ್ನು ಸ್ಥಾಪಿಸಿ ಸುಮಾರು ಒಂದು ಸಾವಿರ ಕೋಟಿ ರೂಪಾಯಿಯನ್ನು ಅವರಿಗಾಗಿ ಮೀಸಲಿರಿಸಿದೆ. ಒಕ್ಕಲಿಗರು, ವೀರಶೈವ ಲಿಂಗಾಯತರೂ ಕರ್ನಾಟಕದ ಭಾಗವೇ ಆಗಿದ್ದಾರೆ. ಅವರ ಅಭಿವೃದ್ಧಿಯೂ ಕರ್ನಾಟಕದ ಅಭಿವೃದ್ಧಿಯೇ ಆಗಿದೆ. ಆದರೆ ಇಲ್ಲೊಂದು ಪ್ರಶ್ನೆ ಎದುರಾಗಿದೆ. ಕರ್ನಾಟಕದಲ್ಲಿ ಈ ಎರಡು ಸಮುದಾಯ ಅಭಿವೃದ್ಧಿಯಲ್ಲಿ ಯಾವ ರೀತಿ ಹಿಂದೆ ಬಿದ್ದಿದೆ? ಈ ನಿಗಮ, ಮಂಡಳಿಗಳನ್ನು ಸ್ಥಾಪಿಸುವುದಕ್ಕೆ ಸರಕಾರದ ಮುಂದಿರುವ ಸಕಾರಣಗಳು ಯಾವುವು? ಬಹುಶಃ ಸಾಮಾಜಿಕವಾಗಿ ತೀರ ದುರ್ಬಲ ಸಮುದಾಯಗಳನ್ನೆಲ್ಲ ಮೇಲೆತ್ತಿ ಆಗಿರುವುದರಿಂದ, ಈಗ ಬ್ರಾಹ್ಮಣ, ಒಕ್ಕಲಿಗ ಮತ್ತು ವೀರಶೈವ ಲಿಂಗಾಯತ ಸಮುದಾಯದ ಅಭಿವೃದ್ಧಿಗೆ ವಿಶೇಷ ಯೋಜನೆಗಳನ್ನು ರೂಪಿಸಲು ಸರಕಾರ ಹೊರಟಿದೆಯೇ?

ಸದ್ಯ, ರಾಜಕೀಯವಾಗಿ ಬ್ರಾಹ್ಮಣ, ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಗಳೇ ಅತ್ಯಧಿಕ ಪ್ರಾತಿನಿಧ್ಯಗಳನ್ನು ಪಡೆದಿವೆ. ಶಿಕ್ಷಣ, ಉದ್ಯಮ ಕ್ಷೇತ್ರಗಳಲ್ಲೂ ಈ ಸಮುದಾಯವೇ ಮುಂದಿವೆ. ಅಧಿಕಾರಶಾಹಿಯೊಳಗೂ ಈ ಮೂರು ಸಮುದಾಯಗಳ ಜನರೇ ಬಹುಸಂಖ್ಯಾತರಾಗಿದ್ದಾರೆ. ಹೀಗಿರುವಾಗ, ಇವರ ಅಭಿವೃದ್ಧಿಗಾಗಿ ವಿಶೇಷ ನಿಗಮ, ಪ್ರಾಧಿಕಾರವನ್ನು ಸ್ಥಾಪಿಸಲು ಸರಕಾರಕ್ಕೆ ಪ್ರೇರಣೆ ಏನು? ಒಂದು ನಿರ್ದಿಷ್ಟ ಸಮುದಾಯ, ಜಾತಿಗಳ ಏಳಿಗೆಗಾಗಿ ವಿಶೇಷ ಕಾರ್ಯಕ್ರಮಗಳನ್ನು, ಯೋಜನೆಗಳನ್ನು ರೂಪಿಸಬೇಕಾದರೆ ಆ ಜಾತಿ, ಸಮುದಾಯಗಳ ಸ್ಥಿತಿಗತಿಯ ಕುರಿತಂತೆ ಒಂದು ಅಧ್ಯಯನ ನಡೆಸಬೇಕು. ಅವುಗಳು ಸಾಮಾಜಿಕ, ರಾಜಕೀಯ, ಆರ್ಥಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಎಷ್ಟರ ಮಟ್ಟಿಗೆ ಹಿಂದುಳಿದಿವೆ ಎನ್ನುವುದರ ಕುರಿತಂತೆ ವರದಿಯೊಂದನ್ನು ತರಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಬ್ರಾಹ್ಮಣ, ಒಕ್ಕಲಿಗ, ವೀರಶೈವ ಲಿಂಗಾಯತ ಸಮುದಾಯದ ಹಿಂದುಳಿವಿಕೆಯ ಕುರಿತಂತೆ ಸರಕಾರ ಯಾವುದಾದರೊಂದು ವರದಿಯನ್ನು ತರಿಸಿಕೊಂಡಿದೆಯೇ? ಅಥವಾ ಆಯಾ ಜಾತಿಗಳು ಇಂತಹದೊಂದು ಬೇಡಿಕೆಯನ್ನಾದರೂ ಸರಕಾರದ ಮುಂದಿಟ್ಟಿವೆಯೆ? ಅದೇನೂ ನಡೆಯದೆ ಸರಕಾರವೇ ಅತಿ ಆಸಕ್ತಿಯಿಂದ ಈ ಪ್ರಬಲ ಜಾತಿಗಳ ಅಭಿವೃದ್ಧಿಗೆ ಪ್ರಾಧಿಕಾರ, ಮಂಡಳಿಗಳನ್ನು ರಚಿಸುತ್ತದೆ ಎಂದಾದರೆ, ಸಾಮಾಜಿಕ ನ್ಯಾಯಕ್ಕೆ ಏನು ಅರ್ಥ ಉಳಿಯಿತು?

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿದಾಗ, ಸ್ವತಃ ಆ ಸಮುದಾಯದ ಸ್ವಾಮೀಜಿಗಳೇ ಆಕ್ಷೇಪ ವ್ಯಕ್ತಪಡಿಸಿದ್ದರು. ಹಲವರು ಇದರ ವಿರುದ್ಧ ಮಾತನಾಡಿದ್ದರು. ಜಾತಿಗೊಂದು ನಿಗಮ ಅಗತ್ಯವಿಲ್ಲ ಎನ್ನುವುದನ್ನು ಲಿಂಗಾಯತ ಸಮುದಾಯದ ಮುಖಂಡರೇ ಅಭಿಪ್ರಾಯ ಪಟ್ಟಿದ್ದರು. ಆದರೆ ಒಕ್ಕಲಿಗ ಸಮುದಾಯಕ್ಕಾಗಿ ಅಭಿವೃದ್ಧಿ ನಿಗಮ ಸ್ಥಾಪನೆಯ ವಿರುದ್ಧ ಯಾರೂ ಧ್ವನಿಯೆತ್ತಿಲ್ಲ. ಬದಲಿಗೆ ಎಲ್ಲಾ ಮುಖಂಡರೂ ಸ್ವಾಗತಿಸಿದ್ದಾರೆ. ದುರ್ಬಲ ಸಮುದಾಯದ ನಾಯಕರಿಗೆ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಬೇಕು ಎಂದೂ ಅನ್ನಿಸಿಲ್ಲ. ಬಿಜೆಪಿ ಸರಕಾರದೊಳಗಿರುವ ಹಿಂದುಳಿದ ವರ್ಗದ ನಾಯಕರ ಬಾಯಿಗೆ ‘ಹಿಂದುತ್ವ’ದ ಬಟ್ಟೆಯನ್ನು ತುರುಕಿಸಲಾಗಿದೆ. ದುರ್ಬಲ ಸಮುದಾಯದ ಈ ವೌನ, ಮುಂದಿನ ದಿನಗಳಲ್ಲಿ ದುರ್ಬಲರ ಏಳಿಗೆಗಾಗಿ ಇರುವ ಎಲ್ಲ ಯೋಜನೆಗಳನ್ನು ಕಿತ್ತು ಅದನ್ನು ಪ್ರಬಲ ಸಮುದಾಯಗಳಿಗೆ ನೀಡಲು ಸರಕಾರಕ್ಕೆ ಧೈರ್ಯವನ್ನು ನೀಡುವುದರಲ್ಲಿ ಅನುಮಾನವಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News