ದಾಭೋಲ್ಕರ್, ಪನ್ಸಾರೆ ಕೊಲೆ ಪ್ರಕರಣಗಳ ತನಿಖೆ ವಿಳಂಬಕ್ಕೆ ಬಾಂಬೆ ಹೈಕೋರ್ಟ್ ಅಸಮಾಧಾನ

Update: 2021-03-12 18:44 GMT

ಮುಂಬೈ, ಮಾ.12: ವಿಚಾರವಾದಿಗಳಾದ ನರೇಂದ್ರ ದಾಬೋಲ್ಕರ್ ಹಾಗೂ ಗೋವಿಂದ್ ಪನ್ಸಾರೆ ಅವರು ಕ್ರಮವಾಗಿ 2013 ಹಾಗೂ 2015ರಲ್ಲಿ ಹತ್ಯೆಯಾಗಿದ್ದು, ಈ ಎರಡೂ ಕೊಲೆ ಪ್ರಕರಣಗಳ ತನಿಖೆಯನ್ನು ಪೂರ್ಣಗೊಳಿಸಲು ತನಿಖಾ ಸಂಸ್ಥೆಗಳಿಗೆ ಇನ್ನೂ ಎಷ್ಟು ವರ್ಷಗಳು ಬೇಕಾದೀತು ಎಂದು ಖಾರವಾಗಿ ಪ್ರಶ್ನಿಸಿದೆ.

ನ್ಯಾಯಾಧೀಶರಾದ ಎಸ್‌ಎಸ್.ಶಿಂಧೆ ಹಾಗೂ ಮನೀಶ್ ಪಿತಾಳೆ ಅವರನ್ನೊಳಗೊಂಡ ಬಾಂಬೆ ಹೈಕೋರ್ಟ್‌ನ ವಿಭಾಗೀಯ ಪೀಠ ಪನ್ಸಾರೆ ಹಾಗೂ ದಾಭೋಲ್ಕರ್ ಕುಟುಂಬಗಳ ಸದಸ್ಯರು ಸಲ್ಲಿಸಿದ ಅರ್ಜಿಗಳ ವಿಚಾರಣೆಯ ಸಂದರ್ಭ ಈ ಹತ್ಯೆ ಪ್ರಕರಣಗಳ ತನಿಖೆ ವಿಳಂಬವಾಗುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತು.

ದಾಬೋಲ್ ಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐ ಹಾಗೂ ಪನ್ಸಾರೆ ಹತ್ಯೆ ಪ್ರಕರಣವನ್ನು ಮಹಾರಾಷ್ಟ ರಾಜ್ಯದ ಅಪರಾಧ ತನಿಖಾ ಇಲಾಖೆ (ಸಿಐಡಿ) ನಡೆಸುತ್ತಿದೆ.

ಸಂತ್ರಸ್ತ ಕುಟುಂಬಗಳ ಪರವಾಗಿ ವಾದಿಸಿದ ನ್ಯಾಯವಾದಿ ಅಭಯ್ ನಾವ್‌ಗೆ ಅವರು, ಕರ್ನಾಟಕದಲ್ಲಿ 2017ರಲ್ಲಿ ನಡೆದ ಪತ್ರಕರ್ತೆ ಗೌರಿ ಲಂಕೇಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯವು ಈಗಾಗಲೇ ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ದಾಖಲಿಸಿದೆ ಎಂದರು.

ದಾಬೋಲ್ಕರ್ ಹಾಗೂ ಪನ್ಸಾರೆ ಕೊಲೆ ಪ್ರಕರಣದ ತನಿಖೆ ನಿಧಾನಗತಿಯಲ್ಲಿ ಸಾಗುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ನ್ಯಾಯಪೀಠವು, ‘‘ಇಂತಹ ಸೂಕ್ಷ್ಮ ಪ್ರಕರಣಗಳಲ್ಲಿ, ತನಿಖೆಯು ಯಾವಾಗ ಪೂರ್ಣಗೊಳ್ಳುತ್ತದೆ ಎಂಬುದನ್ನು ತಿಳಿಯುವ ಹಕ್ಕನ್ನು ದೇಶದ ಜನತೆ ಹೊಂದಿದ್ದಾರೆ. ಈ ಕೊಲೆ ಘಟನೆಗಳು 2013 ಹಾಗೂ 2015ರಲ್ಲಿ ನಡೆದಿವೆ. ಈಗ ನಾವು 2021ನೇ ಇಸವಿಯಲ್ಲಿದ್ದೇವೆ. ಇದು (ತನಿಖೆ) ಹೀಗೆ ಎಷ್ಟು ಸಮಯ ಸಾಗಲಿದೆ? ಎಂದು ಪ್ರಶ್ನಿಸಿದರು.

ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆಯನ್ನು ಪ್ರಸ್ತಾವಿಸಿದ ನ್ಯಾಯಪೀಠವು ‘‘ಕರ್ನಾಟಕದಲ್ಲಿ ನಡೆದಂತಹ ಇದೇ ರೀತಿಯ ಘಟನೆಯ ನ್ಯಾಯಾಂಗ ವಿಚಾರಣೆಯು ಈಗಾಗಲೇ ಆರಂಭಗೊಂಡಿದೆ. ಆದರೆ ಮಹಾರಾಷ್ಟ್ರದಲ್ಲಿ ತನಿಖೆ ಯಾವಾಗ ಪೂರ್ಣಗೊಳ್ಳುವುದೆಂಬ ಬಗ್ಗೆ ಸ್ಪಷ್ಟವಾಗಿ ತಿಳಿದುಬರುತ್ತಿಲ್ಲ’’ ಎಂದರು.

ಸಿಬಿಐ ಪರವಾಗಿ ವಾದಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಅನಿಲ್ ಸಿಂಗ್ ಅವರು ಮಾತನಾಡಿ, “ತನಿಖೆಯ ಪ್ರಗತಿಯ ವರದಿಗಳನ್ನು ತನಿಖಾ ಸಂಸ್ಥೆಗಳು ಈಗಾಗಲೇ ಸಲ್ಲಿಸಿವೆ. ಆದರೂ, ಕೊಲೆಗೆ ಬಳಸಲಾದ ಆಯುಧವನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ’’ ಎಂದು ತಿಳಿಸಿದರು.
ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯವು, ‘‘ನಾವು ಸಂಸ್ಥೆಗಳ ಕಾರ್ಯದಕ್ಷತೆಯನ್ನು ಸಂದೇಹಿಸುತ್ತಿಲ್ಲ. ಆದರೆ ಈ ಪ್ರಕರಣಗಳ ತನಿಖೆಯು ತಾರ್ಕಿಕ ನಿರ್ಣಯವನ್ನು ತಲುಪುವ ಅಗತ್ಯವಿದೆ’’ ಎಂದಿತು.

ಮುಂದಿನ ಆಲಿಕೆಯನ್ನು ಮಾರ್ಚ್ 30ಕ್ಕೆ ಮುಂದೂಡಿದ ನ್ಯಾಯಪೀಠವು, ತನಿಖೆ ಪೂರ್ತಿಯಾಗಲು ಇನ್ನೂ ಹೆಚ್ಚು ಸಮಯ ಬೇಕಾಗುತ್ತದೆ ಎಂಬ ಬಗ್ಗೆ ಸ್ಪಷ್ಟ ಹಾಗೂ ದೃಢವಾದ ಸೂಚನೆಗಳನ್ನು ಪಡೆದುಕೊಳ್ಳುವಂತೆ ಸಿಬಿಐ ಹಾಗೂ ಸಿಐಡಿ ನ್ಯಾಯವಾದಿಗಳಿಗೆ ತಿಳಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News