ತಮಿಳುನಾಡು ಚುನಾವಣೆ : ಸಚಿವನ ವಿರುದ್ಧವೇ ದೂರು ನೀಡಿದ ಅಧಿಕಾರಿ

Update: 2021-03-13 04:01 GMT
ಕಡಂಬೂರು ಸಿ ರಾಜು

ತೂತುಕುಡಿ : ಚುನಾವಣಾ ಕರ್ತವ್ಯಕ್ಕೆ ನಿಯೋಜಿತರಾಗಿದ್ದ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯೊಬ್ಬರಿಗೆ ಜಿಲ್ಲೆಯಲ್ಲಿ ಶುಕ್ರವಾರ ಬೆದರಿಕೆ ಒಡ್ಡಿದ ಆರೋಪದಲ್ಲಿ ಎಐಎಡಿಎಂಕೆ ಸಚಿವ ಕಡಂಬೂರು ಸಿ ರಾಜು ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ. ಆದರೆ ಸಚಿವರು ಆರೋಪಗಳನ್ನು ಬಲವಾಗಿ ಅಲ್ಲಗಳೆದಿದ್ದಾರೆ.

ನಳತ್ತಿಂಪುತೂರು ಠಾಣೆಯಲ್ಲಿ ರಾಜ್ಯ ಹೆದ್ದಾರಿ ಇಲಾಖೆಯ ಕಿರಿಯ ಎಂಜಿನಿಯರ್ ಮತ್ತು ಫ್ಲೈಯಿಂಗ್ ಸ್ಕ್ವಾಡ್ ಸದಸ್ಯ ಮಾರಿಮುತ್ತು ಈ ದೂರು ನೀಡಿದ್ದಾರೆ. ತಾವು ಉದುಪಟ್ಟಿ ತಿರುವಿನ ಬಳಿ ರಾಜು ಅವರ ವಾಹನ ತಪಾಸಣೆ ಮಾಡಲು ಮುಂದಾದಾಗ, ಸಚಿವರು ಕರ್ತವ್ಯಕ್ಕೆ ಅಡ್ಡಿಪಡಿಸಿದರು; ವಾಹನ ತಪಾಸಣೆಗೆ ಸಹಕರಿಸದೇ, ಬೆದರಿಕೆ ಹಾಕಿ ನಿಂದಿಸಿದರು ಎಂದು ದೂರಿನಲ್ಲಿ ಮಾರಿಮುತ್ತು ವಿವರಿಸಿದ್ದಾರೆ.

ಆದರೆ ಆರೋಪವನ್ನು ಸಚಿವರು ನಿರಾಕರಿಸಿದ್ದಾರೆ. "ಅಧಿಕಾರಗಳು ನನ್ನ ವಾಹನ ಹಾಗೂ ಬೆಂಬಲಿಗರ ಎರಡು ವಾಹನಗಳನ್ನು ತಪಾಸಣೆ ಮಾಡಿದರು. ಕೋವಿಲ್‌ಪಟ್ಟಿಯಲ್ಲಿ ತುರ್ತಾಗಿ ಸಭೆಗೆ ತೆರಳಬೇಕಿದ್ದರಿಂದ ನನ್ನ ವಾಹನ ತಪಾಸಣೆ ಮಾಡಿದ ಬಳಿಕ ಬೆಂಬಲಿಗರ ವಾಹನ ಬಿಟ್ಟುಬಿಡುವಂತೆ ಕೋರಿದೆ. ಅದರೆ ಹಾಗೆ ಮಾಡದೇ ನಾನು ಕಾಯುವಂತೆ ಮಾಡಿದರು. ಎರಡೂ ವಾಹನಗಳ ತಪಾಸಣೆ ಮುಗಿಯುವವರೆಗೆ ನಾನು ಕಾದಿದ್ದೇನೆ" ಎಂದು ಹೇಳಿದ್ದಾರೆ. ಅಧಿಕಾರಿಯ ದೂರಿನಲ್ಲಿ ಯಾವುದೇ ಸತ್ಯಾಂಶ ಇಲ್ಲ. ಇದು ಒಂದು ಪಿತೂರಿ ಎಂದು ಅವರು ಪ್ರತ್ಯಾರೋಪ ಮಾಡಿದ್ದಾರೆ.

ಮಾದರಿ ನೀತಿಸಂಹಿತೆಯಂತೆ ಸಚಿವರ ವಿರುದ್ಧ ದೂರು ದಾಖಲಿಸಲು ಚುನಾವಣಾ ಅಧಿಕಾರಿ ಶಂಕರನಾರಾಯಣನ್ ಅನುಮತಿ ನೀಡಿದ ಬಳಿಕವೇ ದೂರು ನೀಡಲಾಗಿದೆ ಎಂದು ಮಾರಿಮುತ್ತು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News