ಶೇ.10ರಷ್ಟು ಮೀಸಲಾತಿ ಸಂವಿಧಾನದ ಆಶಯಕ್ಕೆ ಧಕ್ಕೆ: ನಿವೃತ್ತ ನ್ಯಾ.ನಾಗಮೋಹನ್ ದಾಸ್

Update: 2021-03-14 16:25 GMT

ಬೆಂಗಳೂರು, ಮಾ. 14: ಕೇಂದ್ರ ಸರಕಾರ ಸಾಮಾನ್ಯ ವರ್ಗದ ಆರ್ಥಿಕವಾಗಿ ಹಿಂದುಳಿದ ಬಡವರಿಗೆ ಶೇ.10ರಷ್ಟು ಮೀಸಲಾತಿ ನೀಡಿರುವುದರಿಂದ ಸಂವಿಧಾನದ ಆಶಯಕ್ಕೆ ಧಕ್ಕೆ ಉಂಟಾಗಿದೆ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಬೇಸರ ವ್ಯಕ್ತಪಡಿಸಿದ್ದಾರೆ.

ರವಿವಾರ ಇಲ್ಲಿನ ವಸಂತನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನ ಸಭಾಂಗಣದಲ್ಲಿ ಕರ್ನಾಟಕ ಪ್ರಜಾ ಪರಿವರ್ತನಾ ವೇದಿಕೆ ವತಿಯಿಂದ ಆಯೋಜಿಸಿದ್ದ, ‘ಮೀಸಲಾತಿ ವಿವಾದ ಮತ್ತು ವಾಸ್ತವ ಸ್ಥಿತಿಗತಿಗಳು’ ಕುರಿತ ರಾಜ್ಯಮಟ್ಟದ ವಿಚಾರ ಸಂಕಿರಣವನ್ನುದ್ದೇಶಿಸಿ ಅವರು ಮಾತನಾಡಿದರು.

2019ನೆ ವಾರ್ಷಿಕ ಸಾಲಿನಲ್ಲಿ ಕೇಂದ್ರ ಸರಕಾರ ಸಾಮಾನ್ಯ ವರ್ಗದ ಬಡವರಿಗೆ ಶೇ.10ರಷ್ಟು ಮೀಸಲಾತಿ ಪ್ರಕಟಿಸಿ, ಇದು ಆರ್ಥಿಕ ಮನದಂಡದ ಮೇಲೆ ಕೊಟ್ಟಿದೆ ಎಂದಿದೆ. ಆದರೆ, ಇದರಿಂದ ದೇಶದ ಸಂವಿಧಾನದ ಸಾಮಾಜಿಕ ನ್ಯಾಯಾದ ಆಶಾಯಕ್ಕೆ ಧಕ್ಕೆ ಬಂದಿದೆ. ಅಲ್ಲದೆ, ನನಗೆ ಬಡವರ ಬಗ್ಗೆ ವಿರೋಧವಿಲ್ಲ ಎಂದು ನುಡಿದರು.

ದೇಶಕ್ಕೆ ಸ್ವಾತಂತ್ರ್ಯ ದೊರೆತ 1947ನೆ ಸಾಲಿನಲ್ಲಿ ಭಾರತದಲ್ಲಿ ಬಡತನ ರೇಖೆ ಶೇ.70ರಷ್ಟಿತ್ತು. ತದನಂತರ, ಅದನ್ನು ಹಂತ ಹಂತವಾಗಿ ಅಂದಿನ ಸರಕಾರಗಳು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಶೇ.21ಕ್ಕೆ ಇಳಿಸಿವೆ. ಹೀಗೆ, ಸರಕಾರಗಳಿಗೆ ಕಾಳಜಿಯಿದ್ದರೆ, ಕಾರ್ಯಕ್ರಮ, ಯೋಜನೆಗಳನ್ನು ತರಬೇಕೇ ಹೊರತು, ಸಾಮಾಜಿಕ ನ್ಯಾಯ, ಮೀಸಲಾತಿಯನ್ನು ಬಡತನ ನಿರ್ಮೂಲನಾ ಕಾರ್ಯಕ್ರಮದಂತೆ ಪರಿವರ್ತನೆ ಮಾಡುವುದಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ವರದಿ ನೋಡಿ: ಒಳ ಮೀಸಲಾತಿ ಸಂಬಂಧ ನಿವೃತ್ತ ನ್ಯಾ.ಎ.ಜೆ.ಸದಾಶಿವ ಅವರು ವರದಿ ಸಲ್ಲಿಸಿ 9 ವರ್ಷಗಳೇ ಕಳೆದಿವೆ. ಅದೇ ರೀತಿ, ಜಾತಿ ಅಧ್ಯಯನ ನಡೆಸಿ ಹಿಂದುಳಿದ ವರ್ಗಗಳ ಆಯೋಗದ ಕಾಂತರಾಜು, ನಾನು ಸಹ ಸೇರಿದಂತೆ ಹಲವರು ವರದಿಗಳನ್ನು ಸರಕಾರಕ್ಕೆ ಸಲ್ಲಿಸಿದ್ದೇವೆ. ಇದಕ್ಕಾಗಿ ಕೋಟಿಗಟ್ಟಲೆ ವೆಚ್ಚವಾಗಿದೆ. ಹೀಗಿರುವಾಗ, ಸರಕಾರ ಅದನ್ನು ನೋಡಬೇಕು. ಜತೆಗೆ, ಸಾರ್ವಜನಿಕರ ಚರ್ಚೆಗೆ ಬಿಡಬೇಕು. ಅದು ಆಗದಿದ್ದರೂ, ತಿರಸ್ಕರಿಸಬಹುದು. ಆ ಅಧಿಕಾರ ಸರಕಾರಕ್ಕಿದೆ. ಆದರೆ, ಏನು ಮಾಡದೆ ತಟಸ್ಥವಾಗಿಡುವುದು ಸರಕಾರಕ್ಕೆ ಶೋಭೆ ತರಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಎಲ್ಲಿಯವರೆಗೆ ಜಾತಿ ಆಧಾರಿತ ಅಸಮಾನತೆ, ದೌರ್ಜನ್ಯ, ದಬ್ಬಾಳಿಕೆ, ಬೌದ್ಧಿಕ ದಿವಾಳಿತನ ಇರುವುದೋ, ಅಲ್ಲಿಯವರೆಗೆ ಸಮಾನತೆಗಾಗಿ ಹಂಬಲ, ವಿಮೋಚನೆಗಾಗಿ ಹೋರಾಟ, ಜ್ಞಾನ ಮತ್ತು ಶಾಂತಿಗಾಗಿ ಹುಡುಕಾಟ ಇದ್ದೇ ಇರುತ್ತದೆ ಎಂದ ಅವರು, ಸಂವಿಧಾನದ ಕಾರಣದಿಂದ ಅಸ್ಪೃಶ್ಯರು, ಹಿಂದುಳಿದವರು, ಬುಡಕಟ್ಟು ಜನರು, ಮಹಿಳೆಯರು ಹಾಗೂ ಇತರೆ ಅವಕಾಶವಂಚಿತ ವರ್ಗಗಳಿಗೆ ಇಂದು ಉನ್ನತ ಸ್ಥಾನಗಳು ದೊರಕಿವೆ. ಈ ಅವಕಾಶದಿಂದಲೇ ಇಂದು ದೇಶದಲ್ಲಿ ದಲಿತ ರಾಷ್ಟ್ರಪತಿಗಳು ಹಾಗೂ ಹಿಂದುಳಿದ ವರ್ಗಕ್ಕೆ ಸೇರಿದ ಪ್ರಧಾನಮಂತ್ರಿ ಇರಲು ಸಾಧ್ಯವಾಗಿದೆ ಎಂದು ಹೇಳಿದರು.

ಪ್ರಜಾ ಪರಿವರ್ತನಾ ವೇದಿಕೆ ಅಧ್ಯಕ್ಷ ಬಿ.ಗೋಪಾಲ್ ಮಾತನಾಡಿ, ಸಾಮಾನ್ಯ ವರ್ಗಕ್ಕೆ ನೀಡಿರುವ ಶೇ. 10ರಷ್ಟು ಸಂಬಂಧ ಯಾವುದೇ ಹೋರಾಟ ನಡೆಯದೆ ಇದ್ದರೂ, ಪ್ರಧಾನಿ ಮೋದಿ ಅವರು ಮೀಸಲಾತಿ ಪ್ರಕಟಿಸಿದ್ದಾರೆ. ಆದರೆ, ಈ ಹಿಂದಿನ ಮೀಸಲಾತಿಗಳನ್ನು ಗಮನಿಸಿದರೆ, ಬಹುದೊಡ್ಡ ಹೋರಾಟಗಳು ನೆನಪಿಗೆ ಬರುತ್ತದೆ. ಇನ್ನು, ಎಸ್ಸಿ-ಎಸ್ಟಿ ಕೋಟಾದಡಿ ಆಯ್ಕೆಯಾದ ಜನಪ್ರತಿನಿಧಿಗಳು ಯಾವುದೇ ಸಮಸ್ಯೆಗಳಿಗೆ ಸ್ಪಂದಿಸದೆ, ಧ್ವನಿಗೂಡಿಸದೆ, ಸುಮ್ಮನಾಗಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಉರಲಿಂಗ ಪೆದ್ದಿ ಮಠದ ಜ್ಞಾನ ಪ್ರಕಾಶ್ ಸ್ವಾಮೀಜಿ, ರಾಜ್ಯ ಸರಕಾರಿ ಎಸ್ಸಿ, ಎಸ್ಟಿ ನೌಕರರ ಸಮನ್ವಯ ಸಮಿತಿ ಅಧ್ಯಕ್ಷ ಡಿ.ಶಿವಶಂಕರ್, ಚಿಂತಕ ಡಾ.ರೋಷನ್ ಮುಲ್ಲಾ, ಭೀಮ ಸೇನೆ ರಾಜ್ಯಾಧ್ಯಕ್ಷ ಪಂಡಿತ್ ಮುನಿವೆಂಕಟಪ್ಪ, ದಲಿತ ಮುಖಂಡ ಮಾರಪ್ಪ, ಕಾಲೇಜು ಅಧ್ಯಾಪಕರ ಸಂಘದ ಅಧ್ಯಕ್ಷ ಡಾ.ಕೃಷ್ಣಪ್ಪ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

ನರಿಗಳಿಂದ ನ್ಯಾಯ ಕೇಳುವುದು ಸರಿಯೇ?

‘ಒಮ್ಮೆ ಕಾಡಿನೊಳಗೆ ಕಜ್ಜಾಯಕ್ಕಾಗಿ ಕೋತಿಗಳು ಜೋರಾಗಿ ಕಿತ್ತಾಟ ನಡೆಸುತ್ತಿದ್ದವು. ಅದನ್ನು ಕಂಡ ನರಿ, ನಾನು ಸಮಸ್ಯೆ ಬಗೆಹರಿಸಿ, ನ್ಯಾಯ ಒದಗಿಸುತ್ತೇನೆಂದು ಹೇಳಿತು. ಈ ಮಾತನ್ನು ನಂಬಿದ ಕೋತಿಗಳು ಕಜ್ಜಾಯವನ್ನು ನರಿಯ ಮುಂದಿಟ್ಟವು. ಬಳಿಕ ನರಿ ತಕ್ಕಡಿವೊಂದನ್ನು ಹಿಡಿದು ತೂಕ ಹಾಕುವ ನೆಪದಲ್ಲಿ ತಕ್ಕಡಿ ಮೇಲೆ-ಕೆಳಗೆ ಬಂದಾಗ ಒಂದೊಂದೇ ಕಜ್ಜಾಯ ಬಾಯಿಗೆ ಹಾಕಿಕೊಂಡಿತು. ಈ ಸಂದರ್ಭವೇ ಇದೀಗ ಮೀಸಲಾತಿ ಹೋರಾಟಗಳಿಗೆ ಅನ್ವಯವಾಗುತ್ತದೆ. ನಾವು ನರಿಗಳನ್ನು ನಂಬಿ ನ್ಯಾಯ ಕೇಳುವುದು ಸರಿಯೇ?'

-ಶ್ರೀ ಜ್ಞಾನ ಪ್ರಕಾಶ್ ಸ್ವಾಮೀಜಿ, ಉರಿಲಿಂಗ ಪೆದ್ದಿಮಠ ಮೈಸೂರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News