300 ರೂ. ಕದ್ದ ಆರೋಪ: ನಾಲ್ವರು ದಲಿತ ಬಾಲಕರ ಕೈಗಳನ್ನು ಕಟ್ಟಿ ಹಾಕಿ 4 ಕಿಮೀ ನಡೆಸಿದ ಗ್ರಾಮಸ್ಥರು

Update: 2021-03-16 09:05 GMT
photo: twitter

ಹೊಸದಿಲ್ಲಿ: ಕಳ್ಳತನದ ಆರೋಪದ ಮೇಲೆ 11ರಿಂದ 13 ವರ್ಷ ಪ್ರಾಯದ ನಾಲ್ಕು ಮಂದಿ ದಲಿತ ಬಾಲಕರ ಕೈಗಳನ್ನು ಕಟ್ಟಿ ಹಾಕಿ ಅವರನ್ನು ನಾಲ್ಕು ಕಿಮೀ ದೂರ ನಡೆಸಿದ ಘಟನೆ ಪಂಜಾಬ್‍ನ ಸಂಗ್ರೂರ್ ಜಿಲ್ಲೆಯಿಂದ ವರದಿಯಾಗಿದೆ. ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರವಷ್ಟೇ ಪ್ರಕರಣ ಬೆಳಕಿಗೆ ಬಂದಿದೆ.

ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿ ನಾಲ್ಕು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಾಲಕರ ಕುಟುಂಬಗಳು ಕೂಡ ರಾಜ್ಯ ಮಕ್ಕಳ ಹಕ್ಕುಗಳ ಆಯೋಗಕ್ಕೆ ದೂರು ನೀಡಿವೆ ಎಂದು ತಿಳಿದು ಬಂದಿದೆ.

ಭಸೌರ್ ಗ್ರಾಮದ ಈ ಬಾಲಕರು ನೆರೆಯ ಬನ್ಭೋರಿ ಗ್ರಾಮದಲ್ಲಿರುವ ಸಮಾಧಿಯಿಂದ 300ರೂ. ಕದ್ದಿದ್ದಾರೆಂದು ಆರೋಪಿಸಲಾಗಿದೆ. ಬನ್ಭೋರಿಯ ಗ್ರಾಮಸ್ಥರು ಈ ಬಗ್ಗೆ ತಿಳಿದು ಭಸೌರ್  ಗ್ರಾಮದ ಸರಪಂಚ ಹಾಗೂ ಇತರ ಸದಸ್ಯರಿಗೆ ತಿಳಿಸಿದ್ದರು. ಭಸೌರ್ ಸರಪಂಚ ಗುರ್ನಾಮ್ ಸಿಂಗ್  ಬನ್ಭೋರಿ ಗ್ರಾಮಕ್ಕೆ ಧಾವಿಸುವ ವೇಳೆಗೆ ಬಾಲಕರನ ಕೈಗಳನ್ನು ಕಟ್ಟಿ ಹಾಕಲಾಗಿತ್ತೆಂದು ಹೇಳಲಾಗಿದೆ.

"ಬಾಲಕರ ಕೈಗಳನ್ನು ನಾವು ಕಟ್ಟಿ ಹಾಕಿಲ್ಲ, ಅವರಿಗೆ ನಡೆಯಲು ಹೇಳಿ ಅವರಿಗೆ ಪಾಠ ಕಲಿಸುವ ಉದ್ದೇಶದಿಂದ ದಂಡ ವಿಧಿಸಿದ್ದೇವೆ ಆದರೆ ಯಾರ ಮೇಲೂ ಹಲ್ಲೆ ನಡೆಸಲಾಗಿಲ್ಲ" ಎಂದು ಸರಪಂಚ ಸಿಂಗ್ ಹೇಳಿದ್ದಾರೆ.

ಆದರೆ ಬನ್ಭೋರಿ ಗ್ರಾಮಸ್ಥರು ತಾವು ಬಾಲಕರ ಕೈ ಕಟ್ಟಿ ಹಾಕಿಲ್ಲ ಎಂದು ಹೇಳುತ್ತಿದ್ದಾರೆ.

ಆದರೆ ಘಟನೆ ಸಂಬಂಧ ಪೊಲೀಸರು ಸರಪಂಚ ಗುರ್ನಾಮ್ ಸಿಂಗ್ ಸಹಿತ ನಾಲ್ಕು ಮಂದಿಯ ವಿರುದ್ಧ ಕೇಸ್  ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News