'ಹಂತಕ' ಪುಟಿನ್ `ಬೆಲೆ ತೆರುತ್ತಾರೆ' ಎಂದು ಬೈಡನ್ ಹೇಳಿದ ಬೆನ್ನಿಗೇ ರಾಯಭಾರಿಯನ್ನು ವಾಪಸ್ ಕರೆಸಿದ ರಶ್ಯ

Update: 2021-03-18 18:48 GMT
ಜೋ ಬೈಡನ್/ ವ್ಲಾದಿಮಿರ್ ಪುಟಿನ್ (Photo: PTI)

ವಾಶಿಂಗ್ಟನ್: ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಓರ್ವ ಕೊಲೆಗಾರ ಎಂಬುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಬಣ್ಣಿಸಿದ ಬಳಿಕ, ರಶ್ಯ ಬುಧವಾರ ತನ್ನ ಅವೆುರಿಕ ರಾಯಭಾರಿಯನ್ನು ಸಮಾಲೋಚನೆಗಾಗಿ ಮಾಸ್ಕೋಗೆ ಕರೆಸಿಕೊಂಡಿದೆ. ಇದರೊಂದಿಗೆ ರಶ್ಯ ಮತ್ತು ಅವೆುರಿಕ ದೇಶಗಳ ನಡುವೆ ಹೊಸ ರಾಜತಾಂತ್ರಿಕ ಬಿಕ್ಕಟ್ಟೊಂದು ತೆರೆದುಕೊಂಡಿದೆ.

‘‘ವ್ಲಾದಿಮಿರ್ ಪುಟಿನ್ ಓರ್ವ ಕೊಲೆಗಾರ. ರಶ್ಯ ಚುನಾವಣೆಯಲ್ಲಿ ಹಸ್ತಕ್ಷೇಪ ನಡೆಸಿರುವುದಕ್ಕೆ ಅವರು ಬೆಲೆ ತೆರಬೇಕಾಗುತ್ತದೆ’’ ಎಂಬುದಾಗಿ ಜೋ ಬೈಡನ್ ‘ಎಬಿಸಿ ನ್ಯೂಸ್’ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು.

2020 ನವೆಂಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ಪುಟಿನ್, ಬೈಡನ್‌ರನ್ನು ಸೋಲಿಸಲು ಹಾಗೂ ಅವರ ಎದುರಾಳಿ ಹಾಗೂ ನಿಕಟಪೂರ್ವ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರನ್ನು ಗೆಲ್ಲಿಸಲು ಪ್ರಯತ್ನಿಸಿದ್ದರು ಎಂಬ ಅಮೆರಿಕ ಗುಪ್ತಚರ ವರದಿಯ ಬಗ್ಗೆ ಸಂದರ್ಶನಲ್ಲಿ ಬೈಡನ್‌ರನ್ನು ಪ್ರಶ್ನಿಸಲಾಯಿತು.

‘‘ಚುನಾವಣೆಯಲ್ಲಿ ನಡೆಸಿರುವ ಹಸ್ತಕ್ಷೇಪಕ್ಕಾಗಿ ಅವರು ಬೆಲೆ ತೆರುತ್ತಾರೆ’’ ಎಂದು 78 ವರ್ಷದ ಬೈಡನ್ ಉತ್ತರಿಸಿದ್ದರು.

ರಶ್ಯದ ಪ್ರತಿಪಕ್ಷ ನಾಯಕ ಅಲೆಕ್ಸಿ ನವಾಲ್ನಿ ಹಾಗೂ ಇತರ ಎದುರಾಳಿಗಳಿಗೆ ವಿಷಪ್ರಾಶನ ಮಾಡಲು ತನ್ನ ಗುಪ್ತಚರ ಸಿಬ್ಬಂದಿಗೆ ಆದೇಶ ನೀಡಿರುವ ಆರೋಪವನ್ನು ಪುಟಿನ್ ಎದುರಿಸುತ್ತಿದ್ದಾರೆ.

ಪುಟಿನ್ ಓರ್ವ ಹಂತಕ ಎಂಬುದಾಗಿ ನೀವು ಭಾವಿಸಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಬೈಡನ್, ‘‘ಹೌದು’’ ಎಂದು ಹೇಳಿದ್ದರು.

ಇದಕ್ಕೆ ತಕ್ಷಣದ ಪ್ರತಿಕ್ರಿಯೆ ನೀಡಿರುವ ರಶ್ಯ, ತನ್ನ ಅಮೆರಿಕ ರಾಯಭಾರಿಯನ್ನು ಕರೆಸಿಕೊಂಡಿದೆ. ಆದರೆ, ಉಭಯ ದೇಶಗಳ ಸಂಬಂಧಕ್ಕೆ ಹೆಚ್ಚಿನ ಹಾನಿಯಾಗುವುದನ್ನು ತಡೆಯಲು ಬಯಸಿರುವುದಾಗಿ ಹೇಳಿದೆ.

‘‘ಅಮೆರಿಕದಲ್ಲಿರುವ ರಶ್ಯ ರಾಯಭಾರಿ ಅನಾತೊಲಿ ಆಂಟೊನೊವ್‌ರನ್ನು ಸಮಾಲೋಚನೆಗಾಗಿ ಮಾಸ್ಕೋಗೆ ಕರೆಸಲಾಗಿದೆ. ಮುಂದೆ ಏನು ಮಾಡಬೇಕು ಹಾಗೂ ಅಮೆರಿಕ ಜೊತೆಗಿನ ಸಂಬಂಧವನ್ನು ಹೇಗೆ ನಿಭಾಯಿಸಬೇಕು ಎನ್ನುವುದನ್ನು ಮುಂದಕ್ಕೆ ನಿರ್ಧರಿಸಲಾಗುತ್ತದೆ’’ ಎಙಂದು ರಶ್ಯದ ವಿದೇಶ ಸಚಿವಾಲಯ ತಿಳಿಸಿದೆ.

ಜನರು ತಮ್ಮನ್ನೇ ಇನ್ನೊಬ್ಬರಲ್ಲಿ ನೋಡುತ್ತಾರೆ

► ಬೈಡನ್ ಹೇಳಿಕೆಗೆ ಪುಟಿನ್ ಪ್ರತಿಕ್ರಿಯೆ

ಮಾಸ್ಕೋ : ತನ್ನನ್ನು ಹಂತಕ ಎಂದು ಕರೆದ ಅಮೆರಿಕ ಅಧ್ಯಕ್ಷ ಜೋ ಬೈಡನ್‌ರನ್ನು ಗುರುವಾರ ಅಪಹಾಸ್ಯಗೈದ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಜನರು ತಮ್ಮಲ್ಲಿರುವ ಗುಣ ಲಕ್ಷಣಗಳನ್ನೇ ಇನ್ನೊಬ್ಬರಲ್ಲಿ ನೋಡುತ್ತಾರೆ ಎಂದು ಹೇಳಿದ್ದಾರೆ.

 ಕ್ರೈಮಿಯ ಪ್ರದೇಶವನ್ನು ರಶ್ಯದ ತೆಕ್ಕೆಗೆ ತೆಗೆದುಕೊಂಡು ಏಳು ವರ್ಷಗಳು ತುಂಬಿದ ಸಂದರ್ಭದಲ್ಲಿ ಮಾತನಾಡಿದ ಪುಟಿನ್, ‘‘ನಾವು ನಮ್ಮ ಗುಣಗಳನ್ನೇ ಇನ್ನೊಬ್ಬರಲ್ಲಿ ನೋಡ ಬಯಸುತ್ತೇವೆ ಹಾಗೂ ಅವರು ಕೂಡ ನಮ್ಮ ಹಾಗೆಯೇ ಎಂದು ಭಾವಿಸುತ್ತೇವೆ’’ ಎಂದು ಬೈಡನ್‌ರ ‘ಕೊಲೆಗಾರ’ ಹೇಳಿಕೆಯನ್ನು ಉಲ್ಲೇಖಿಸುತ್ತಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News