ಹೆಚ್ಚುವರಿ ಶುಲ್ಕಕ್ಕೆ ಒತ್ತಡ ಹೇರಿದರೆ ಶಿಕ್ಷಣ ಇಲಾಖೆ ಪರಮಾಧಿಕಾರ ಚಲಾಯಿಸಬೇಕಾದೀತು: ಸುರೇಶ್ ಕುಮಾರ್ ಎಚ್ಚರಿಕೆ

Update: 2021-03-19 09:20 GMT

ಬೆಂಗಳೂರು, ಮಾ.19: ಹೆಚ್ಚುವರಿ ಶಾಲಾ ಶುಲ್ಕ ಪಾವತಿಸಲು ಅಸಹಾಯಕರಾದ ವಿದ್ಯಾರ್ಥಿಗಳನ್ನು ಪರೀಕ್ಷೆಯಿಂದ ಹೊರಗಿಟ್ಟಂತಹ ಪ್ರಕರಣಗಳು ದುರದೃಷ್ಟಕರವಾಗಿದ್ದು, ಇಂತಹ ಪ್ರಕರಣಗಳು ಮರುಕಳಿಸದಂತೆ ಖಾಸಗಿ ಶಾಲೆಗಳು ಕ್ರಮ ವಹಿಸಬೇಕು. ಪದೇಪದೇ ಈ ರೀತಿಯ ಪ್ರಕರಣಗಳು ಮರುಕಳಿಸಿದರೆ ಇಲಾಖೆ ತನ್ನ ಪರಮಾಧಿಕಾರವನ್ನು ಚಲಾಯಿಸಬೇಕಾಗುತ್ತದೆಂಬುದನ್ನು ಶಾಲಾಡಳಿತ ಮಂಡಳಿಗಳು ತಿಳಿದುಕೊಳ್ಳಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಎಚ್ಚರಿಸಿದ್ದಾರೆ.

ಬೆಂಗಳೂರಿನ ರಾಯಲ್ ಕನ್ಕಾರ್ಡ್ ಶಾಲೆಯಲ್ಲಿ ಹೆಚ್ಚುವರಿ ಶುಲ್ಕ ಪಾವತಿಸಲು ಅಸಹಾಯಕರಾದ  ವಿದ್ಯಾರ್ಥಿಗಳನ್ನು ಪರೀಕ್ಷೆಯಿಂದ ಹೊರಗಿಟ್ಟಂತಹ ಮತ್ತು ಶ್ರೀರಂಗಪಟ್ಟಣ ತಾಲೂಕಿನ ಕೆಂಬ್ರಿಡ್ಜ್ ಪಬ್ಲಿಕ್ ಸ್ಕೂಲ್ ನಲ್ಲಿ ಶುಲ್ಕದ ವಿಚಾರದಲ್ಲಿ ನಡೆದ ಪ್ರಕರಣಗಳು ದುರದೃಷ್ಟಕರ. ಸಾಮಾಜಿಕ ಸಂಕಷ್ಟದ ಪರಿಸ್ಥಿತಿಯಲ್ಲಿ ನಡೆಯುತ್ತಿರುವ ಇಂತಹ  ಪ್ರಕರಣಗಳು ನಮ್ಮ ವಿದ್ಯಾರ್ಥಿಗಳ ಆತ್ಮವಿಶ್ವಾಸವನ್ನು ಕುಂದಿಸುವುದರೊಂದಿಗೆ ರಾಷ್ಟ್ರದ ಭವಿಷ್ಯದ ಹಿತದೃಷ್ಟಿಯಿಂದಲೂ ಒಳ್ಳೆಯ ಬೆಳವಣಿಗೆಯಲ್ಲ ಎಂದವರು ಪ್ರಕಟನೆಯಲ್ಲಿ ಅಭಿಪ್ರಾಯಿಸಿದ್ದಾರೆ.   

ಶಾಲಾಡಳಿತ ಮಂಡಳಿಗಳು ಮತ್ತು ಪೋಷಕರ ನಡುವಿನ ಇಂತಹ ಸಂಘರ್ಷಗಳು ಮಕ್ಕಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದರಿಂದ ನಮ್ಮ ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಇಂತಹ ಪ್ರಕರಣಗಳಿಗೆ ಎಡೆಯಾಗದಂತೆ ವರ್ತಿಸಬೇಕಾದ ಅಗತ್ಯವನ್ನು ನಾನು ಪದೇ ಪದೇ  ಹೇಳಿದ್ದೇನೆ. ಈ ಮೊದಲು ಬೆಂಗಳೂರಿನ ಕೋರಮಂಗಲದ ಖಾಸಗಿ ಶಾಲೆಯಲ್ಲೂ ವಿದ್ಯಾರ್ಥಿಯೊಬ್ಬನನ್ನು ಇದೇ ರೀತಿ ನಡೆಸಿಕೊಂಡಿದ್ದರಿಂದ ಆತ ಆತ್ಮಹತ್ಯೆ ಯತ್ನಕ್ಕೂ ಕೈಹಾಕಿದ್ದನ್ನು ನಾವೆಲ್ಲ ಯೋಚಿಸಬೇಕಾಗಿದೆ ಮತ್ತು ಅದೆಷ್ಟು ಆಘಾತಕಾರಿ ಎನ್ನುವುದನ್ನು ಗಮನದಲ್ಲಿರಿಸಿಕೊಳ್ಳಬೇಕಾಗಿದೆ ಎಂದು ಅವರು ಹೇಳಿದ್ದಾರೆ.

ರಾಜ್ಯ ಹೈಕೋರ್ಟ್ ಸಹ ಈ ಅತಿಸೂಕ್ಷ್ಮವಾದ ವಿಷಯವನ್ನು ಬಹಳ ನಾಜೂಕಿನಿಂದ ನಿರ್ವಹಿಸಬೇಕಾದ ಅಂಶವನ್ನು ಒತ್ತಿ ಹೇಳಿರುವುದನ್ನು ನಾವು ಗಮನಿಸಬೇಕಾಗಿದೆ. ನಾಡಿನ ಎಲ್ಲ ಖಾಸಗಿ ಶಾಲಾ ಆಡಳಿತ ಮಂಡಳಿಗಳು ನಮ್ಮ ಮಕ್ಕಳ  ಹಿತವನ್ನು ಗಮನದಲ್ಲಿಟ್ಟುಕೊಂಡು ತೀವ್ರ ಸಂವೇದನೆಯಿಂದ ವರ್ತಿಸಬೇಕು. ಇಂತಹ ಪ್ರಕರಣಗಳು ಮರುಕಳಿಸದಂತೆ ನಾವು ಕೊರೋನಾ ವಿಷಮ ಕಾಲಘಟ್ಟದ ಸಂದರ್ಭದಲ್ಲಿ ನಮ್ಮ ಸಾಮಾಜಿಕ ಜವಾಬ್ದಾರಿಯನ್ನು ಅರಿತುಕೊಂಡು ನಡೆಯಬೇಕಾದ ಅಗತ್ಯ ಹೆಚ್ಚಾಗಿದೆ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News