ಹಿಂದಿ ಸಾಹಿತ್ಯ ಅಕಾಡಮಿ ಪ್ರಶಸ್ತಿಯ ಅಂತಿಮ ಪಟ್ಟಿಯಲ್ಲಿ ಕೇಂದ್ರ ಸಚಿವ ರಮೇಶ್‌ ಪೋಖ್ರಿಯಾಲ್‌ ಹೆಸರು

Update: 2021-03-19 17:09 GMT

ಕೇಂದ್ರ ಸಚಿವ ರಮೇಶ್‌ ಪೋಖ್ರಿಯಾಲ್‌ ನಿಶಾಂಕ್‌ ರ ಹೆಸರು ಹಿಂದಿ ಸಾಹಿತ್ಯ ಅಕಾಡಮಿಯ ಪ್ರಶಸ್ತಿ ಪುರಸ್ಕೃತರ ಅಂತಿಮ ಪಟ್ಟಿಯಲ್ಲಿ ಕಂಡು ಬಂದಿದ್ದು, ಇದು ಹಿಂದಿ ಸಾಹಿತ್ಯ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. 2019ರಲ್ಲಿ ನಕಲಿ ಪದವಿ ಸರ್ಟಿಫಿಕೇಟ್‌ ಗಳನ್ನು ಹೊಂದಿದ್ದಾರೆಂದು ಪೋಖ್ರಿಯಾಲ್‌ ವಿರುದ್ಧ ರಾಷ್ಟ್ರಪತಿಗೆ ಅರ್ಜಿ ಸಲ್ಲಿಸಲಾಗಿತ್ತು. 

ಅಂತಿಮ ಪಟ್ಟಿಯಲ್ಲಿ ಪೋಖ್ರಿಯಾಲ್‌ ಹೆಸರಿದ್ದರೂ, ಪ್ರಶಸ್ತಿಯು ಖ್ಯಾತ ಹಿಂದಿ ಕವಯತ್ರಿಯಾಗಿರುವ ಅನಾಮಿಕರವರ ʼಟೋಕ್ರಿ ಮೇ ದಿಗಂತ್‌ʼ ಎಂಬ ಕವಿತೆ ಸಂಕಲನಕ್ಕೆ ದೊರಕಿತ್ತು. ಈ ಕವಿತಾ ಸಂಕಲನವು ೨೦೧೪ರಲ್ಲಿ ಪ್ರಕಟಗೊಂಡಿತ್ತು. ವಿಪರ್ಯಾಸವೆಂದರೆ ಅನಾಮಿಕರವರ ಪ್ರಶಸ್ತಿ ವಿಜೇತ ಕೃತಿ ಸೇರಿದಂತೆ ರಮೇಶ್‌ ಪೋಖ್ರಿಯಾಲ್‌ ರ ಕೃತಿಯೂ ಸಾಹಿತ್ಯ ಅಕಾಡಮಿಯ ಗ್ರಂಥಾಲಯದಲ್ಲಿ ಲಭ್ಯವಿಲ್ಲ ಎಂದು national herald ವರದಿ ತಿಳಿಸಿದೆ.

75ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದೇನೆ ಎನ್ನುವ ರಮೇಶ್‌ ಪೋಖ್ರಿಯಾಲ್‌ ನಿಶಾಂಕ್‌, ಇದುವರೆಗೂ ಸಾಹಿತ್ಯದ ಖ್ಯಾತ ನಾಮರೊಂದಿಗೆ ಗುರುತಿಸಿಕೊಂಡಿಲ್ಲ. ಅಲ್ಲದೇ, ಪ್ರತಿಷ್ಠಿತ ಪ್ರಶಸ್ತಿ ಗಳಿಸುವಂತಹ ಬರಹಗಳು ಅವರಿಂದ ಮೂಡಿ ಬಂದಿಲ್ಲ ಎಂದು ವರದಿ ಉಲ್ಲೇಖಿಸಿದೆ. ಕೆಲವು ಮ್ಯಾಗಝಿನ್‌ ಗಳಲ್ಲಿ ಅವರ ಬರಹಗಳು ಪ್ರಕಟವಾಗಿದ್ದು, ಸದ್ಯ ಅಕಾಡಮಿ ಪ್ರಶಸ್ತಿಯ ಕೊನೆಯ ಪಟ್ಟಿಯಲ್ಲಿ ಅವರ ಹೆಸರಿರುವುದು ಹಿಂದಿ ಸಾಹಿತ್ಯ ಲೋಕವನ್ನು ಅಚ್ಚರಿಗೀಡಾಗಿಸಿದೆ ಎನ್ನಲಾಗಿದೆ. 

ಅಮೆಝಾನ್ ನಲ್ಲಿ ಪೋಖ್ರಿಯಾಲ್‌ ರ ಪುಸ್ತಕ ʼಭಾರತೀಯ ಸಂಸ್ಕೃತಿ ಸಭ್ಯತಾ ಐವಮ್‌ ಪರಂಪರʼ ದ ಕುರಿತಾದಂತೆ ಟಿಪ್ಟಣಿಯಿದ್ದು, ಅದರಲ್ಲಿ "ಈ ಸಂಗ್ರಹವು ಮುತ್ತುಗಳ ಸಾಗರವಾಗಿದ್ದು, ಅದನ್ನು ಒಂದಾಗಿ ಸಂಯೋಜಿಸಲಾಗುವುದಿಲ್ಲ. ಈ ಪುಸ್ತಕದಲ್ಲಿ ಈ ಕೆಲವು ಮುತ್ತುಗಳನ್ನು ಹಾರದಂತಹ ಪುಸ್ತಕದಲ್ಲಿ ನೇಯಲಾಗಿದೆ" ಎಂದು ಬರೆಯಲಾಗಿದೆ. ಆದರೆ ಈ ಪುಸ್ತಕ ಇದುವರೆಗೂ ಯಾವುದೇ ಮಳಿಗೆಗಳಲ್ಲಿ ಮತ್ತು ಆನ್‌ ಲೈನ್‌ ನಲ್ಲಿ ಮಾರಾಟಕ್ಕೆ ಲಭ್ಯವಿಲ್ಲ ಎಂದು ತಿಳಿದು ಬಂದಿದೆ.

ಈ ಕುರಿತಾದಂತೆ ಮಾತನಾಡಲು ಪ್ರಶಸ್ತಿಯ ಆಯ್ಕೆ ಸಮಿತಿ ಸದಸ್ಯ ರಾಮ್‌ ವಚನ್‌ ರಾಯ್‌ ರನ್ನು ಸಂಪರ್ಕಿಸಿದಾಗ ಅವರು ಅರ್ಧದಲ್ಲೇ ಕರೆ ಕಟ್‌ ಮಾಡಿದ್ದಾರೆಂದು ವರದಿ ತಿಳಿಸಿದೆ. ಯಾವ ಮಾನದಂಡದ ಮೇಲೆ ರಮೇಶ್‌ ಪೋಖ್ರಿಯಾಲ್‌ ರನ್ನು ಆಯ್ಕೆ ಮಾಡಿದ್ದೀರಿ ಎಂದು ಕೇಳಿದಾಗ, ನಾನೊಂದು ಕಾರ್ಯಕ್ರಮದಲ್ಲಿದ್ದೇನೆ ಎಂದಷ್ಟೇ ಹೇಳಿ ಮಾತು ಮುಗಿಸಿದ್ದಾರೆಂದು ವರದಿ ಉಲ್ಲೇಖಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News