ಸಂದರ್ಶಕರಿಂದ ಸತತ ʼಗುದ್ದುʼ: ಟೆಕ್ಸಸ್‌ ಮ್ಯೂಸಿಯಂನಿಂದ ಟ್ರಂಪ್‌ ಪ್ರತಿಮೆ ತೆರವು!

Update: 2021-03-20 08:07 GMT
Photo: Twitter

ಟೆಕ್ಸಾಸ್: ಅಮೆರಿಕಾದ ಟೆಕ್ಸಾಸ್‍ನ ಸ್ಯಾನ್ ಆಂಟೋನಿಯೋದಲ್ಲಿರುವ ಲೂಯಿಸ್ ಟುಸ್ಸಾಡ್ಸ್ ಮೇಣದ ಪ್ರತಿಮೆಗಳ ಮ್ಯೂಸಿಯಂನಿಂದ ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮೇಣದ ಪ್ರತಿಮೆಯನ್ನು ತೆಗೆದು ಹಾಕಲಾಗಿದೆ. ಈ ಮ್ಯೂಸಿಯಂಗೆ ಭೇಟಿ ನೀಡುವ ಸಂದರ್ಶಕರು ಟ್ರಂಪ್ ಪ್ರತಿಮೆಗೆ ಹಲವಾರು ಬಾರಿ ಗುದ್ದಿದ್ದಾರೆನ್ನಲಾಗಿದ್ದು ಇನ್ನು ಕೆಲವರು ಪ್ರತಿಮೆಗೆ ಗೀರಿ ಹಾನಿಗೊಳಿಸಿದ್ದರಿಂದ ಮ್ಯೂಸಿಯಂ ಆಡಳಿತ ಈ ಪ್ರತಿಮೆಯನ್ನು ತೆಗೆಯುವುದೇ ಲೇಸು ಎಂದು ನಿರ್ಧರಿಸಿತ್ತು ಎಂದು ವರದಿಗಳು ತಿಳಿಸಿವೆ.

ಕಳೆದ ವರ್ಷ ಅಮೆರಿಕಾ ಅಧ್ಯಕ್ಷೀಯ ಚುನಾವಣೆಯ ಪ್ರಚಾರ ಕಾರ್ಯ ಭರದಿಂದ ನಡೆಯುತ್ತಿರುವಾಗ ಈ ಮ್ಯೂಸಿಯಂಗೆ ಭೇಟಿ ನೀಡುತ್ತಿದ್ದ ಜನರು ಟ್ರಂಪ್ ಪ್ರತಿಮೆಗೆ ಪಂಚ್ ಮಾಡಿ ತಮ್ಮ ಆಕ್ರೋಶ ಹೊರಗೆಡಹುತ್ತಿದ್ದರೆನ್ನಲಾಗಿದೆ.

ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹಾಗೂ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜೊಂಗ್ ಉನ್ ಅವರ ಮೇಣದ ಪ್ರತಿಮೆಗಳ ನಡುವೆ ಟ್ರಂಪ್ ಅವರ ಪ್ರತಿಮೆ ಈ ಹಿಂದೆ ಈ ಮ್ಯೂಸಿಯಂನಲ್ಲಿತ್ತು.

ಮತ್ತೆ ಟ್ರಂಪ್ ಪ್ರತಿಮೆಯನ್ನು ಮ್ಯೂಸಿಯಂನಲ್ಲಿ ಇಡುವ ಸಾಧ್ಯತೆ ಕಡಿಮೆ ಎಂದು ಅಲ್ಲಿನ ಅಧಿಕಾರಿಗಳು ಹೇಳಿದ್ದಾರೆ. ಈಗಾಗಲೇ ಅಮೆರಿಕಾದ ಅಧ್ಯಕ್ಷ ಜೋ ಬೈಡೆನ್ ಅವರ ಪ್ರತಿಮೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ ಎಂದೂ ಅವರು ತಿಳಿಸಿದ್ದಾರೆ.

ಅಮೆರಿಕಾದ ಮಾಜಿ ಅಧ್ಯಕ್ಷರುಗಳಾದ ಜಾರ್ಜ್ ಡಬ್ಲ್ಯು ಬುಷ್ ಹಾಗೂ ಬರಾಕ್ ಒಬಾಮ ಅವರ ಪ್ರತಿಮೆಗಳಿಗೂ ಈ ಹಿಂದೆ ಹಾನಿಗೈಯ್ಯಲಾಗಿತ್ತು.

ಬರ್ಲಿನ್‍ನ ಮ್ಯಾಡೆಮ್ ಟುಸ್ಸಾಡ್ಸ್ ಮ್ಯೂಸಿಯಂ ಕಳೆದ ವರ್ಷದ ಅಕ್ಟೋಬರ್ ತಿಂಗಳಲ್ಲಿ ಟ್ರಂಪ್ ಅವರ ಪ್ರತಿಮೆಯನ್ನು  ಕಸದ ಬುಟ್ಟಿಗೆ  ಹಾಕಿತ್ತು. ಜತೆಗೆ ಬುಟ್ಟಿಯಲ್ಲಿ ʼಡಂಪ್ ಟ್ರಂಪ್ ಮೇಕ್ ಅಮೆರಿಕಾ ಗ್ರೇಟ್ ಅಗೇನ್ʼ ಎಂದೂ ಬರೆಯಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News