ಜಾಗತೀಕರಣ ರೋಗಕ್ಕೆ ತಾಯಿ ಗುಣ ಮದ್ದಾಗಬಲ್ಲದು: ಹಿರಿಯ ವಿಮರ್ಶಕಿ ಡಾ.ಎಂ.ಎಸ್.ಆಶಾದೇವಿ

Update: 2021-03-21 17:52 GMT

ಬೆಂಗಳೂರು, ಮಾ. 21: ಇವತ್ತು ಮನುಷ್ಯನನ್ನೇ ತಿನ್ನುತ್ತಿರುವ ಜಾಗತೀಕರಣ ಎಂಬ ರೋಗಕ್ಕೆ ತಾಯಿ ಗುಣ ಮದ್ದಾಗಬಲ್ಲದೆಂದು ಹಿರಿಯ ವಿಮರ್ಶಕಿ ಡಾ.ಎಂ.ಎಸ್.ಆಶಾದೇವಿ ಅಭಿಪ್ರಾಯಿಸಿದ್ದಾರೆ.

ರವಿವಾರ ಅಂಕಿರ ಪ್ರಕಾಶನದ ವತಿಯಿಂದ ನಗರದಲ್ಲಿ ಆಯೋಜಿಸಿದ್ದ ಹಿರಿಯ ಕವಿ ಎಚ್.ಎಸ್. ಶಿವಪ್ರಕಾಶ್ ಅವರ ‘ಯಾವ ಶಹರು ಯಾವ ಬೆಳಕು’ ಹಾಗೂ ವಿಕ್ರಮ ಹತ್ವಾರ ಅವರ ‘ಮೆಟ್ರೊ ಝೆನ್’ ಕವಿತೆಗಳ ಕೃತಿಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ತಾಯಿಗುಣ ಎಂಬುದು ಕೇವಲ ಮಹಿಳೆಗೆ ಸಂಬಂಧಿಸಿದಲ್ಲ. ಹೆಣ್ಣು-ಗಂಡೆಂಬ ಭೇದವಿಲ್ಲದೆ ಪ್ರತಿಯೊಬ್ಬರು ಸಂಪಾದನೆ ಮಾಡಿಕೊಳ್ಳಬೇಕಾದ ಸಂಜೀವಿನಿಯ ಗುಣವಾಗಿದೆ ಎಂದು ತಿಳಿಸಿದರು.

ಹಿರಿಯ ಕವಿ ಎಚ್.ಎಸ್.ಪ್ರಕಾಶ್‍ಗೆ ಬಸವಣ್ಣ, ಅಲ್ಲಮ, ಅಕ್ಕಮಹಾದೇವಿ ಸೇರಿದಂತೆ ದೇಶಾದ್ಯಂತವಿರುವ ಅನುಭಾವಿಕರ ಪರಂಪರೆಯ ಬಗ್ಗೆ ಅರಿವು, ಜ್ಞಾನವನ್ನು ಸಂವೇಧನೆಯಾಗಿಸಿಕೊಂಡಿದ್ದಾರೆ. ಹೀಗಾಗಿ ಅವರ ಕಾವ್ಯ ಸಮುದಾಯದ ಭಾಷೆಯಾಗಿ ರೂಪಿತಗೊಂಡಿದೆ ಎಂದು ಅವರು ತಿಳಿಸಿದರು.

ಕನ್ನಡ ಸಾಹಿತ್ಯದಲ್ಲಿ ಎಚ್.ಎಸ್.ಶಿವಪ್ರಕಾಶ ಅವರ ಕಾವ್ಯವನ್ನು ಚೌಕಟ್ಟಿಗೆ ಸೀಮಿತಗೊಳಿಸಲಾಗಿದೆ. ಆವರ ಕಾವ್ಯದ ಅರ್ಥಲೋಕವನ್ನು ಸೂಕ್ತವಾಗಿ ಗುರುತಿಸಲಾಗಿಲ್ಲ. ಅವರ ಕಾವ್ಯವು ಅನುಭಾವ ಹಾಗೂ ಸಾಮಾಜಿಕ ಹೊಣೆಗಾರಿಕೆಗಳು ಹೀಗೆ ಎರಡು ಪ್ರಮುಖ ಗುಣಗಳನ್ನು ಒಳಗೊಂಡಿದೆ. ಮತ್ತು ಇವರ ಕಾವ್ಯಗಳಲ್ಲಿ ಮಾತೃ ಮನೋಭೂಮಿಕೆಯೇ ಮುಖ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಕೃತಿಕಾರ ಎಚ್.ಎಸ್.ಶಿವಪ್ರಕಾಶ್ ಮಾತನಾಡಿ, ಮಾನವೀಯ ಮೌಲ್ಯಗಳು ಇರದಿದ್ದರೆ ಕಾವ್ಯ ಅಥವಾ ಸಾಹಿತ್ಯ ರಚನೆಗೆ ಅರ್ಥವೇ ಇಲ್ಲ. ಯಾವುದೇ ಕಾವ್ಯವು ವರ್ತಮಾನದ ತಲ್ಲಣಗಳಿಗೆ ಸ್ಪಂದಿಸುತ್ತಲೇ ಇರುತ್ತದೆ. ಏಕೆಂದರೆ, ಅದರ ಜೀವಾಳವೇ ಮಾನವೀಯ ಅಂಶ. ಅದು ಎಲ್ಲ ಕಾಲಕ್ಕೂ ಅನ್ವಯವಾಗುತ್ತದೆ ಎಂದು ತಿಳಿಸಿದ್ದಾರೆ.

ಪ್ರಸ್ತುತ ಹಾಗೂ ಸಮಕಾಲೀನ ಪರಿಕಲ್ಪನೆ ಎಂಬುದು ಬೇರೆ ಬೇರೆಯೇ. ಕವಿಯು ಎಂದಿಗೂ ಪ್ರಸ್ತುತವಾಗಿ ಸ್ಪಂದಿಸಬೇಕು. ಸಮಕಾಲೀನತೆಯಲ್ಲಿ ಪ್ರಸ್ತುತ ಇದೆ. ಪ್ರತಿ ಕ್ಷಣವೂ ಪ್ರಸ್ತುತವಾಗುತ್ತೆ. ಹೀಗಾಗಿ, ಯಾವನೇ ಒಬ್ಬ ಕವಿ ಸಮಕಾಲೀನವಾಗಿಲ್ಲವೆಂದು ಹೇಳುವುದು ಸರಿಯಲ್ಲ. ಮಹಿಳಾ ಸಾಹಿತ್ಯ ಹಾಗೂ ದಲಿತ ಸಾಹಿತ್ಯವು ಕನ್ನಡದಲ್ಲಿ ಬರದಿದ್ದರೆ ಕನ್ನಡ ಸಾಹಿತ್ಯದ ದಿಕ್ಕು ಗುರುತಿಸುವಷ್ಟು ಬದಲಾಗುತ್ತಿರಲಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಈ ವೇಳೆ ಲೇಖಕ ಚ.ಹ.ರಘುನಾಥ. ಕವಿ ವಿಕ್ರಮ ಹತ್ವಾರ ಸಂವಾದದಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News