ದೇಶದಲ್ಲಿ ‘ಲಾಕ್‌ಡೌನ್’ ಕೊರೋನ ಹರಡಲು ಕಾರಣವಾಯಿತೇ?

Update: 2021-03-23 06:12 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

‘ಜನತಾ ಕರ್ಫ್ಯೂ’ ಎನ್ನುವ ಸುಂದರ ಪೆಟ್ಟಿಗೆಯಲ್ಲಿ ಸುಮಾರು ಮೂರು ತಿಂಗಳು ಈ ದೇಶವನ್ನು ಕಾಡಿದ ‘ಲಾಕ್‌ಡೌನ್’ಗೆ ಒಂದು ವರ್ಷ ಪೂರ್ತಿಯಾಗಿದೆ. ಆ ದುಃಸ್ವಪ್ನದಿಂದ ಜನರು ಇನ್ನೂ ಚೇತರಿಸಿಕೊಂಡಿಲ್ಲ. ಅಷ್ಟರಲ್ಲೇ ಮತ್ತೆ ಅದೇ ಲಾಕ್‌ಡೌನ್ ಗುಮ್ಮವನ್ನು ತೋರಿಸಿ ಸರಕಾರ ಜನರನ್ನು ನಿಯಂತ್ರಣದಲ್ಲಿಡಲು ಯತ್ನಿಸುತ್ತಿದೆ. ಒಂದು ವರ್ಷದ ಲಾಕ್‌ಡೌನ್‌ನಿಂದಾಗಿ ಈ ದೇಶದ ಜನರು ಕಲಿತುಕೊಂಡ ಪಾಠ, ಕಳೆದುಕೊಂಡ ಬದುಕು ಇತ್ಯಾದಿಗಳಿಗೆ ಲೆಕ್ಕವಿಲ್ಲ. ಸ್ವಾತಂತ್ರೋತ್ತರ ಭಾರತ, ಇಂದಿರಾಗಾಂಧಿಯ ತುರ್ತುಪರಿಸ್ಥಿತಿಯಲ್ಲೂ ಇಂತಹ ಕಠೋರ ಅನುಭವವನ್ನು ಅನುಭವಿಸಿಲ್ಲ. ಶ್ರೀಮಂತರು ಮತ್ತು ಮೇಲ್‌ಮಧ್ಯಮ ವರ್ಗದ ಜನರು ಈ ಸಂದರ್ಭದಲ್ಲಿ ಕೊರೋನಕ್ಕಾಗಿ ಹೆದರಿದರೆ, ಮಧ್ಯಮ ವರ್ಗ ಮತ್ತು ಬಡವರ್ಗ ಪೊಲೀಸರಿಗೆ ಮತ್ತು ಹಸಿವಿಗೆ ಹೆದರುತ್ತಾ ಬದುಕಿದರು. ಕೊರೋನವನ್ನು ಮುಂದಿಟ್ಟುಕೊಂಡು ಆಸ್ಪತ್ರೆಗಳು ಉಳಿದೆಲ್ಲ ರೋಗಿಗಳನ್ನು ಸಾರಾಸಗಟಾಗಿ ನಿರಾಕರಿಸಿದವು. ನಗರಗಳು ವ್ಯಾಪಾರಗಳಿಲ್ಲದೆ ಬಿಕೋ ಎನ್ನುತ್ತಿದ್ದವು. ಕೂಲಿಕಾರ್ಮಿಕರು ಕೆಲಸವಿಲ್ಲದೆ ಬೀದಿಗೆ ಬಿದ್ದರು. ವಲಸೆ ಕಾರ್ಮಿಕರ ಮಾರಣ ಹೋಮ ನಡೆಯಿತು. ಇಂದು ಬಹುತೇಕ ಲಾಕ್‌ಡೌನ್‌ಗಳು ಸಡಿಲಗೊಂಡಿವೆ. ದೊಡ್ಡ ಚಂಡಮಾರುತವೊಂದು ಬೀಸಿ ಎಲ್ಲವನ್ನು ಸರ್ವನಾಶ ಮಾಡಿದ ಬಳಿಕದ ಸ್ಥಿತಿಯಲ್ಲಿ ನಾವು ನಿಂತಿದ್ದೇವೆ. ಇದು ಆತ್ಮವಿಮರ್ಶೆಯ ಸಮಯ. ಕೊರೋನದಿಂದ ತಮ್ಮನ್ನು ತಾವು ಕಾಪಾಡುವ, ಈ ದೇಶವನ್ನು ಕೊರೋನ ಮುಕ್ತವಾಗಿಸುವ ಕಾರಣಕ್ಕಾಗಿ ಲಾಕ್‌ಡೌನ್‌ನ್ನು ಸ್ವೀಕರಿಸಿ, ಅದಕ್ಕಾಗಿ ಮಾಡಿದ ತ್ಯಾಗ ಬಲಿದಾನಗಳು ಸಾರ್ಥಕವಾಗಿದೆಯೇ? ಎನ್ನುವ ಪ್ರಶ್ನೆಯನ್ನು ನಮಗೆ ನಾವೇ ಕೇಳಿಕೊಳ್ಳುವ ಸಂದರ್ಭ ಇದೀಗ ಬಂದಿದೆ.

 ಈ ದೇಶದಲ್ಲಿ ‘ಲಾಕ್‌ಡೌನ್’ ಯಶಸ್ವಿಯಾಗಿದೆಯೇ? ಒಂದು ವೇಳೆ ಲಾಕ್‌ಡೌನ್ ಹೇರದೇ ಇದ್ದಿದ್ದರೆ ದೇಶದ ಸ್ಥಿತಿ ಏನಾಗಿ ಬಿಡುತ್ತಿತ್ತು? ಲಾಕ್‌ಡೌನ್‌ನಿಂದಾಗಿ ಎಷ್ಟರಮಟ್ಟಿಗೆ ಕೊರೋನ ನಿಯಂತ್ರಣಗೊಂಡಿದೆ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದು ಅಷ್ಟು ಸಲೀಸಲ್ಲ. ಯಾಕೆಂದರೆ, ಈ ದೇಶದಲ್ಲಿ ಕೊರೋನ ತೀವ್ರವಾಗಿ ಹರಡುವುದಕ್ಕೆ ಪೂರ್ವ ಯೋಜನೆಯಿಲ್ಲದ ಲಾಕ್‌ಡೌನ್ ಕಾರಣವಾಯಿತು ಎಂದು ತರ್ಕಿಸುವ ಜನರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಮುಖ್ಯವಾಗಿ ಚೀನಾ, ಅಮೆರಿಕದಂತಹ ದೇಶದಲ್ಲಿ ಅದಾಗಲೇ ಹರಡುತ್ತಿದ್ದ ಕೊರೋನ ಭಾರತಕ್ಕೆ ಇನ್ನೂ ಕಾಲಿಟ್ಟಿರಲಿಲ್ಲ. ಡಿಸೆಂಬರ್‌ನಲ್ಲೇ ಈ ವೈರಸ್‌ನ ಕುರಿತಂತೆ ವಿಶ್ವಸಂಸ್ಥೆ ತನ್ನ ಎಚ್ಚರಿಕೆಯನ್ನು ನೀಡಿತ್ತು. ಫೆಬ್ರವರಿ ತಿಂಗಳಲ್ಲಿ ವಿದೇಶಗಳು ಈ ಮಾರಕ ರೋಗಗಳ ಕುರಿತಂತೆ ತೀವ್ರ ಆತಂಕ ವ್ಯಕ್ತಪಡಿಸಿದವು. ಅಲ್ಲಿ ಸಂಭವಿಸುತ್ತಿರುವ ಸಾವು ನೋವುಗಳು ಮಾಧ್ಯಮಗಳಲ್ಲಿ ಅದಾಗಲೇ ವರದಿಯಾಗತೊಡಗಿದ್ದವು. ಅಂದರೆ ಭಾರತಕ್ಕೆ ಮುನ್ನೆಚ್ಚರಿಕೆಯನ್ನು ತೆಗೆದುಕೊಳ್ಳಲು ‘ಕೊರೋನ’ ಸಾಕಷ್ಟು ಅವಕಾಶವನ್ನು ನೀಡಿತ್ತು.

ತಕ್ಷಣ ವಿಮಾನ ನಿಲ್ದಾಣಗಳಿಗೆ ದಿಗ್ಬಂಧನ ವಿಧಿಸಿ, ಅಲ್ಲಿಂದ ಬರುವ ಪ್ರಯಾಣಿಕರನ್ನು ನೇರವಾಗಿ ಕ್ವಾರಂಟೈನ್‌ಗೆ ಒಳಪಡಿಸಿದ್ದಿದ್ದರೆ ದೇಶಾದ್ಯಂತ ಲಾಕ್‌ಡೌನ್ ವಿಧಿಸುವ ಅಗತ್ಯವೇ ಇರಲಿಲ್ಲ. ಆದರೆ ಅದೇ ಸಂದರ್ಭದಲ್ಲಿ ಸರಕಾರ ಟ್ರಂಪ್ ಓಲೈಕೆಯಲ್ಲಿ ಮೈ ಮರೆಯಿತು. ವಿಶ್ವ ಕೊರೋನ ಕುರಿತಂತೆ ಹೋರಾಡುತ್ತಿರುವಾಗ, ಭಾರತವು ಅಹ್ಮದಾಬಾದ್‌ನಲ್ಲಿ ‘ನಮಸ್ತೆ ಟ್ರಂಪ್’ ಕಾರ್ಯಕ್ರಮವನ್ನು ಆಯೋಜಿಸಿತು. ಸಹಸ್ರಾರು ಜನರನ್ನು ಸೇರಿಸಿತು. ಈ ಕಾರಣಕ್ಕಾಗಿಯೇ ವಿಮಾನ ನಿಲ್ದಾಣವನ್ನು ಮುಕ್ತವಾಗಿಟ್ಟಿತು. ವಿದೇಶದಿಂದ ಬರುವ ಯಾತ್ರಿಕರನ್ನು ತಡೆಯುವ, ಪರೀಕ್ಷಿಸುವ ಯಾವುದೇ ಮುಂಜಾಗರೂಕತೆಯನ್ನು ಅದು ತೆಗೆದುಕೊಳ್ಳಲಿಲ್ಲ. ನಮಸ್ತೆ ಟ್ರಂಪ್ ಬೆನ್ನಿಗೇ ದಿಲ್ಲಿಯಲ್ಲಿ ಭೀಕರ ಹಿಂಸಾಚಾರವೊಂದನ್ನು ಆಯೋಜಿಸಿತು. ಅವೆಲ್ಲ ಮುಗಿದ ಬಳಿಕ ಮಾರ್ಚ್ ತಿಂಗಳಲ್ಲಿ ಸರಕಾರ ಒಮ್ಮೆಲೇ ಕೊರೋನ ಕುರಿತು ಎಚ್ಚೆತ್ತುಕೊಂಡಿತು. ಮೊದಲು ಒಂದು ದಿನದ ಜನತಾ ಕರ್ಫ್ಯೂವನ್ನು ಹೇರಿತು. ಅಲ್ಲಿಂದ ಲಾಕ್‌ಡೌನ್‌ನ ಭೀಕರ ಅಧ್ಯಾಯ ತೆರೆದುಕೊಂಡಿತು.

 ಲಾಕ್‌ಡೌನ್‌ನ ಉದ್ದೇಶವೇ ಜನರು ಪರಸ್ಪರ ಸಂಪರ್ಕವನ್ನು ಪಡೆಯದಂತೆ ತಡೆಯುವುದು. ಆದರೆ ಭಾರತದಂತಹ ಜನನಿಬಿಡ ದೇಶದಲ್ಲಿ ಇದು ಅಷ್ಟು ಸುಲಭವೇನೂ ಅಲ್ಲ. ಕರ್ಫ್ಯೂ ಸಡಿಲಿಕೆ ಸಂದರ್ಭದಲ್ಲಿ ಜನರು ಭುಗ್ಗನೆ ನಗರಗಳಲ್ಲಿ ನೆರೆಯುತ್ತಿದ್ದರು. ಅಂತರ ಕಾಯ್ದುಕೊಳ್ಳುವುದಕ್ಕೆ ಸಾಧ್ಯವೇ ಇಲ್ಲ ಎನ್ನುವಂತಹ ಸ್ಥಿತಿ ನಿರ್ಮಾಣವಾಗಿ ಬಿಡುತ್ತಿತ್ತು. ದಿನಸಿಗಳ ಜೊತೆಗೆ ಕೊರೋನ ವೈರಸ್‌ಗಳನ್ನು ಉಚಿತವಾಗಿ ಪಡೆದುಕೊಂಡು ಮನೆ ಸೇರಿ, ‘ಲಾಕ್‌ಡೌನ್’ ಅನುಭವಿಸುತ್ತಿದ್ದರು. ದೀಪ ಹಚ್ಚುವ, ತಟ್ಟೆ ಬಾರಿಸುವ ಸರಕಾರದ ಕ್ರಮಗಳೆಲ್ಲ ಲಾಕ್‌ಡೌನನ್ನು ಇನ್ನಷ್ಟು ಹಾಸ್ಯಾಸ್ಪದಗೊಳಿಸಿತು. ಲಾಕ್‌ಡೌನ್ ಸಂಪೂರ್ಣ ವಿಫಲವಾದದ್ದು ವಲಸೆ ಕಾರ್ಮಿಕರು ಸಾವಿರಾರು ಸಂಖ್ಯೆಯಲ್ಲಿ ಬಸ್‌ನಿಲ್ದಾಣಗಳಲ್ಲಿ ನೆರೆದಾಗ. ಆವರೆಗೆ ಕೊರೋನ ಎನ್ನುವುದು ವಿದೇಶದಿಂದ ಬಂದವರಿಂದಷ್ಟೇ ಹರಡುತ್ತದೆ ಎನ್ನುವ ಧೈರ್ಯವೊಂದಿತ್ತು. ದೇಶದಲ್ಲಿ ಕೊರೋನ ಮೂರನೇ ಹಂತಕ್ಕೆ ತಲುಪಲು ವಲಸೆ ಕಾರ್ಮಿಕರು ಬಸ್ ಮತ್ತು ರೈಲು ನಿಲ್ದಾಣಗಳಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ನೆರೆದದ್ದು ಕಾರಣವಾಯಿತು. ಒಂದೆಡೆ ಲಾಕ್‌ಡೌನ್ ಹೆಸರಲ್ಲಿ ಜನರು ಅಕ್ಷರಶಃ ದಿಗ್ಬಂಧನ ಅನುಭವಿಸುತ್ತಿರುವಾಗಲೇ, ಇನ್ನೊಂದೆಡೆ ಬೇರೆ ಬೇರೆ ಕಾರಣಗಳಿಂದ ಸಾವಿರಾರು ಜನರು ಬೀದಿಗಳಲ್ಲಿ ನೆರೆಯ ತೊಡಗಿದರು.

ಅಷ್ಟೇ ಅಲ್ಲ, ಯಾವುದೇ ಧರ್ಮಗಳು ತಮ್ಮ ಸಮಾರಂಭ, ಸಮಾವೇಶದ ಹೆಸರಿನಲ್ಲಿ ಜನರನ್ನು ಸೇರಿಸುವಲ್ಲಿ ಹಿಂದೆ ಬೀಳಲಿಲ್ಲ. ಸರಕಾರ ಇನ್ನೂ ಲಾಕ್‌ಡೌನ್ ಘೋಷಿಸದ ಸಂದರ್ಭದಲ್ಲಿ ತಬ್ಲೀಗಿ ಸಮಾವೇಶ ಕಾರ್ಯಕ್ರಮಕ್ಕೆ ದೇಶ ವಿದೇಶಗಳಿಂದ ಜನರು ಬಂದರು. ಈ ಸಮಾವೇಶವನ್ನು ತಡೆಯುವ, ವಿದೇಶಗಳಿಂದ ಜನರನ್ನು ಆಗಮಿಸದಂತೆ ನೋಡಿಕೊಳ್ಳುವ ಯಾವುದೇ ಕಾನೂನು ಕ್ರಮ ಸರಕಾರ ತೆಗೆದುಕೊಳ್ಳಲಿಲ್ಲ. ತಬ್ಲೀಗಿ ಸಮಾವೇಶಕ್ಕೆ ಬಂದವರೆಲ್ಲ ಏಕಾಏಕಿ ಲಾಕ್‌ಡೌನ್‌ನ ಚಕ್ರವ್ಯೆಹದೊಳಗೆ ಸಿಲುಕಿಕೊಂಡರು. ಅವರಿಗೆ ತೆರಳುವುದಕ್ಕೆ ಯಾವುದೇ ವಾಹನದ ವ್ಯವಸ್ಥೆಯನ್ನು ಮಾಡದೇ ಸರಕಾರ ದಿಗ್ಬಂಧನದಲ್ಲಿಟ್ಟಿತು. ಇತ್ತ ಗುರುದ್ವಾರದಲ್ಲಿ, ತಿರುಪತಿಯಲ್ಲೂ ಭಕ್ತಾದಿಗಳು ದೊಡ್ಡ ಸಂಖ್ಯೆಯಲ್ಲಿ ಸೇರುತ್ತಿದ್ದರು. ಆದುದರಿಂದಲೇ ಲಾಕ್‌ಡೌನ್ ಒಂದೆಡೆ ಜನಸಾಮಾನ್ಯರ ಬದುಕನ್ನು ಸಂಪೂರ್ಣ ನಾಶ ಮಾಡುತ್ತಲೇ ಮಗದೊಂದೆಡೆ ಕೊರೋನ ವೈರಸ್‌ನ್ನು ಯಾವುದೇ ತಡೆಯಿಲ್ಲದೆ ಹಂಚುತ್ತಾ ಹೋಯಿತು.

ಲಾಕ್‌ಡೌನ್ ಕೊರೋನಾವನ್ನು ನಿಯಂತ್ರಿಸುವ ಬದಲು, ಹೆಚ್ಚಿಸುತ್ತಾ ಹೋಯಿತು. ಲಾಕ್‌ಡೌನ್ ಇಲ್ಲದೇ ಇದ್ದರೂ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಯೇನೂ ಇರುತ್ತಿರಲಿಲ್ಲ ಎಂದು ತಜ್ಞರು ಅಭಿಪ್ರಾಯ ಪಡುವುದು ಇದೇ ಕಾರಣಗಳಿಗಾಗಿ. ನೋಟು ನಿಷೇಧದಿಂದ ತತ್ತರಿಸಿರುವ ಭಾರತದ ಆರ್ಥಿಕತೆಗೆ ಲಾಕ್‌ಡೌನನ್ನು ತಾಳಿಕೊಳ್ಳಲು ಸಾಧ್ಯವಾಗಲಿಲ್ಲ. ಇಂತಹದೊಂದು ವಿಫಲ ಲಾಕ್‌ಡೌನ್‌ನ್ನು ದೇಶದ ಮೇಲೆ ಹೇರುವ ಬದಲು, ಸಿನೆಮಾ ಮಂದಿರ, ಸಾರ್ವಜನಿಕ ಸಮಾವೇಶ, ಶಾಲೆ ಕಾಲೇಜು ಇತ್ಯಾದಿಗಳಿಗಷ್ಟೇ ನಿರ್ಬಂಧ ವಿಧಿಸಿ ಉಳಿದ ವ್ಯವಹಾರಗಳಿಗೆ ಅವಕಾಶ ನೀಡಿದ್ದಿದ್ದರೆ, ಆರ್ಥಿಕತೆ ಸಂಪೂರ್ಣ ನೆಲಕಚ್ಚುವುದು ತಪ್ಪುತ್ತಿತ್ತೇನೋ? ಲಾಕ್‌ಡೌನ್ ಭಾರತದಲ್ಲಿ ಸಂಪೂರ್ಣ ವಿಫಲವಾಗಿರುವುದು ಎಲ್ಲ ರೀತಿಯಲ್ಲಿ ಅರಿವಿಗೆ ಬಂದ ಬಳಿಕವೂ, ಅದೇ ಲಾಕ್‌ಡೌನ್‌ನ್ನು ಮತ್ತೊಮ್ಮೆ ಹೇರುವುದಕ್ಕೆ ಸರಕಾರ ಹುನ್ನಾರ ನಡೆಸುತ್ತಿರುವುದು ಮೂರ್ಖತನದ ಪರಮಾವಧಿಯಾಗಿದೆ. ಇದೇ ಸಂದರ್ಭದಲ್ಲಿ ಲಾಕ್‌ಡೌನ್‌ನಿಂದಾಗಿ ಹೆಚ್ಚಿರುವ ಬಡತನ, ಕ್ಷಯರೋಗದಂತಹ ಮಾರಕ ರೋಗಗಳು ಭಾರತವನ್ನು ಮುಂದಿನ ದಿನಗಳಲ್ಲಿ ಕೊರೋನಕ್ಕಿಂತಲೂ ದೊಡ್ಡ ಸವಾಲಾಗಿ ಕಾಡಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News