ಲಾಕ್‌ಡೌನ್ ಕೊಂದು ಹಾಕಿದ ಜೀವಗಳಿಗೊಂದು ಶ್ರದ್ಧಾಂಜಲಿ

Update: 2021-03-24 10:04 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಕೊರೋನ ಈ ದೇಶಕ್ಕೆ ಕಾಲಿಟ್ಟ ದಿನದಿಂದ ಮಾಧ್ಯಮಗಳು ಕೊರೋನ ಸೋಂಕಿನಿಂದ ಮೃತಪಟ್ಟವರ ಸಂಖ್ಯೆಯನ್ನು ಮುಖಪುಟಗಳಲ್ಲಿ ಛಾಪಿಸುತ್ತಾ ಬಂದಿವೆ. ಯಾರೇ ಮೃತರಾಗಿರಲಿ, ಅವರಲ್ಲಿ ಸೋಂಕಿದ್ದರೆ ಸಾಕು ‘ಕೊರೋನಕ್ಕೆ ಇನ್ನೊಂದು ಬಲಿ’ ಎಂದು ಷರಾ ಬರೆಯುತ್ತಿದ್ದವು. ಕೊರೋನಕ್ಕೆ ಇಷ್ಟು ಲಕ್ಷ ಜನರು ಬಲಿಯಾಗಿದ್ದಾರೆ ಎಂದು ಸರಕಾರ ಹೇಳುತ್ತಿದೆಯಾದರೂ, ನೇರ ಕೊರೋನದಿಂದ ಮೃತಪಟ್ಟವರ ಸಂಖ್ಯೆ ಶೇ. 2ರಷ್ಟು ಮಾತ್ರ. ಮೃತರಾದವರಲ್ಲಿ ಕೊರೋನ ಸೋಂಕಿತ್ತು ಎನ್ನುವುದು ನಿಜ. ಆದರೆ ಮೃತರಾಗಲು ಕಾರಣ ಕೊರೋನ ಅಲ್ಲ. ಕೊರೋನ ಕಾಲದಲ್ಲಿ ಆರೋಗ್ಯ ವಲಯದಲ್ಲಾದ ಅಸ್ತವ್ಯಸ್ತದಿಂದ ಮೃತಪಟ್ಟವರೇ ಅಧಿಕ. ಸೂಕ್ತ ಸಮಯದಲ್ಲಿ ಔಷಧಿ ಸಿಗದೆ ಮೃತಪಟ್ಟು, ಕೊರೋನ ಸಾವಿನ ಪಟ್ಟಿಯಲ್ಲಿ ಸೇರಿಕೊಂಡು ಬಿಟ್ಟ ರೋಗಿಗಳೇ ಅಧಿಕ. ಕಿಡ್ನಿ ಸಮಸ್ಯೆ ಹೊಂದಿದವರು, ಕ್ಯಾನ್ಸರ್ ಪೇಷಂಟ್‌ಗಳು, ಕ್ಷಯ ರೋಗಿಗಳು, ಹೃದ್ರೋಗಿಗಳು ಕೊರೋನ ವೈರಸ್‌ನ ಕಾರಣದಿಂದ ಸೂಕ್ತ ಔಷಧಿ ಸಿಗದೆ, ಬಲವಂತದ ಕ್ವಾರಂಟೈನ್‌ಗೆ ಒಳಗಾಗಿ ಮೃತರಾಗಿ, ಕೊನೆಗೆ ಮಾಧ್ಯಮಗಳಲ್ಲಿ ‘ಕೊರೋನ ರಣ ಕೇಕೆ’ಗೆ ಬಲಿಯಾದವರ ಸಾಲಿಗೆ ಸೇರಿ ಬಿಟ್ಟರು. ಕೊರೋನಕ್ಕೆ ನಿಜಕ್ಕೂ ಬಲಿಯಾದವರ ಸಂಖ್ಯೆ ಎಷ್ಟು ಎನ್ನುವುದು ಸ್ಪಷ್ಟವವಾಗಿಲ್ಲ.

ಇದೇ ಸಂದರ್ಭದಲ್ಲಿ ‘ಲಾಕ್‌ಡೌನ್’ ಕೊರೋನಕ್ಕಿಂತಲೂ ಭೀಕರವಾಗಿ ಕಾಡಿ, ಹಲವರನ್ನು ಬಲಿತೆಗೆದುಕೊಂಡ ವಿಷಯ ಈಗಲೂ ಮಾಧ್ಯಮಗಳಿಗೆ ಚರ್ಚೆಯ ವಿಷಯವಾಗಿಲ್ಲ. ಲಾಕ್‌ಡೌನ್ ಸಂದರ್ಭದಲ್ಲಿ ನಡೆದ ಸಾವು ನೋವುಗಳು ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿತ್ತು ಎನ್ನುವುದನ್ನು ಧ್ವನಿಯೆತ್ತಿ ಮಾತನಾಡುವವರ ಸಂಖ್ಯೆ ತೀರ ಸಣ್ಣದು. ಯಾಕೆಂದರೆ, ಕೊರೋನ ಎನ್ನುವ ಭೂತವನ್ನು ಅವರ ಮುಂದಿಟ್ಟು ಬಾಯಿ ಮುಚ್ಚಿಸಲಾಗಿದೆ. ಲಾಕ್‌ಡೌನ್‌ನಿಂದಾಗಿ ಸಂಭವಿಸಿದ ಸಾವುಗಳ ಬಗ್ಗೆ ಅಧಿಕೃತ ಅಂಕಿಅಂಶ ಇಲ್ಲ. 2020ರ ಎಪ್ರಿಲ್-ಜುಲೈ ನಡುವಿನ ಅವಧಿಯಲ್ಲಿ ಮಾಧ್ಯಮಗಳ ವರದಿಯನ್ನು ಆಧರಿಸಿದ ಅಂಕಿಅಂಶಗಳ ಪ್ರಕಾರ, ಲಾಕ್‌ಡೌನ್‌ನ ನೇರ ಕಾರಣದಿಂದಾಗಿ ಕನಿಷ್ಠ 989 ಮರಣಗಳು ಸಂಭವಿಸಿವೆ. ಇದು ಕೇವಲ ಅಂದಾಜು ಮಾಡಿದ ಅಂಕಿಅಂಶ. ಯಾಕೆಂದರೆ ಮಾಧ್ಯಮದ ವರದಿಗಳು ಒಟ್ಟಾರೆ ಸಾವಿನ ಸಮಗ್ರ ನಿರೂಪಣೆಯಲ್ಲಿ ಸಂಪೂರ್ಣ ವಿಫಲವಾಗಿವೆೆ.

ಲಾಕ್‌ಡೌನ್, ಮಾಧ್ಯಮಗಳ ಕೈ ಬಾಯಿಗಳನ್ನೂ ಕಟ್ಟಿಸಿತ್ತು ಎನ್ನುವ ಅಂಶವನ್ನು ನಾವು ಗಮನಿಸಬೇಕು. ತಮ್ಮ ಮಿತಿಯಲ್ಲಿ ಲಾಕ್‌ಡೌನ್‌ನ ಸಾವು ನೋವುಗಳನ್ನು ಮಾಧ್ಯಮಗಳು ವರದಿ ಮಾಡಿವೆ. ಲಾಕ್‌ಡೌನ್‌ನಿಂದ ಆರೋಗ್ಯಕ್ಕೆ ಸಂಬಂಧಿಸಿ ಆಗಿರುವ ನೇರ ಪರಿಣಾಮವೆಂದರೆ ಕೊರೋನೇತರ ರೋಗಿಗಳಿಗೆ ಸಕಾಲಿಕ ವೈದ್ಯಕೀಯ ನೆರವು ಲಭಿಸದಿರುವುದು. ಸಾರಿಗೆ ವ್ಯವಸ್ಥೆಗೆ ಇದ್ದ ನಿರ್ಬಂಧ ಅಥವಾ ಆಸ್ಪತ್ರೆಗಳನ್ನು ತಲುಪಲು ಆ್ಯಂಬುಲೆನ್ಸ್‌ಗಳ ಕೊರತೆ, ನೆಗೆಟಿವ್ ಕೋವಿಡ್-19 ವರದಿ ಇಲ್ಲದೆ ರೋಗಿಗಳನ್ನು ದಾಖಲು ಮಾಡಿಕೊಳ್ಳಲು ಆಸ್ಪತ್ರೆಯವರ ನಿರಾಕರಣೆ, ಕೊರೋನ ಹಾಟ್‌ಸ್ಪಾಟ್ ಪ್ರದೇಶಗಳಿಂದ (ಕೊರೋನ ಸೋಂಕು ಹೆಚ್ಚಿರುವ) ಬರುವ ಜನರನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳಲು ನಿರಾಕರಣೆ, ಆರೋಗ್ಯ ಸಂಬಂಧದ ಇತರ ಕಾಯಿಲೆಯಿಂದ ಬಳಲುತ್ತಿರುವವರಿಗೆ ಸಕಾಲಿಕ ವೈದ್ಯಕೀಯ ನೆರವಿನ ಕೊರತೆ- ಈ ಕಾರಣಗಳಿಂದ ಕನಿಷ್ಠ 100ಕ್ಕೂ ಅಧಿಕ ಸಾವು ಸಂಭವಿಸಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿವೆ. ಉದಾಹರಣೆಗೆ: ಅನೀಮಿಯ ರೋಗದಿಂದ ಬಳಲುತ್ತಿದ್ದ ಪುಣೆಯ 34 ವರ್ಷದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆತನಿಗೆ ರಕ್ತದ ಅಗತ್ಯವಿತ್ತು. ಆದರೆ ಲಾಕ್‌ಡೌನ್‌ನಿಂದಾಗಿ ರಕ್ತನಿಧಿ(ಬ್ಲಡ್‌ಬ್ಯಾಂಕ್)ಯಲ್ಲಿ ರಕ್ತದ ಕೊರತೆಯಿತ್ತು. ಅಲ್ಲದೆ ಕೊರೋನ ಸೋಂಕಿತರಲ್ಲದ ರೋಗಿಗಳ ಆರೈಕೆಗೆ ಆಸ್ಪತ್ರೆಯಲ್ಲಿ ಸಿಬ್ಬಂದಿಯ ಕೊರತೆಯಿತ್ತು. ಆದ್ದರಿಂದ ಆತ ಸಾವನ್ನಪ್ಪ ಬೇಕಾಯಿತು. ಸೂಕ್ತ ಚಿಕಿತ್ಸೆ, ಔಷಧಿಗಳು ಸಿಗದೇ ಮೃತರಾದ ವೃದ್ಧರ ಸಂಖ್ಯೆಯನ್ನು ಮಾಧ್ಯಮಗಳು ಉಲ್ಲೇಖಿಸಿಯೇ ಇಲ್ಲ.

ಅಂತಹ ಸಾವುಗಳು ಸದ್ದಿಲ್ಲದೆ ಮಣ್ಣೊಳಗೆ ದಫನವಾಗಿವೆ. ತಾಯಂದಿರ ಮರಣ ಪ್ರಮಾಣವೂ ಲಾಕ್‌ಡೌನ್ ಸಂದರ್ಭ ಹೆಚ್ಚಾಗಿರುವುದು ಬೆಳಕಿಗೆ ಬಂದಿದೆ. ಸಕಾಲಿಕ ಆರೈಕೆಯ ಕೊರತೆಯಿಂದ ಇಂತಹ ಕನಿಷ್ಠ 10 ಪ್ರಕರಣ ನಡೆದಿರುವುದಾಗಿ ಮಾಧ್ಯಮ ವರದಿ ತಿಳಿಸಿದೆ. ಹಿಮೊಗ್ಲೊಬಿನ್ ಕೊರತೆಯಿಂದ ಬಳಲುತ್ತಿದ್ದ ಬೆಂಗಳೂರಿನ 28 ವರ್ಷದ ಮಹಿಳೆಗೆ ಚಿಕಿತ್ಸೆ ನೀಡಲು 7 ಆಸ್ಪತ್ರೆಗಳು ನಿರಾಕರಿಸಿದವು. ಎಲ್ಲಾ ಆಸ್ಪತ್ರೆಗಳಲ್ಲೂ ಆಕೆಗೆ ಸ್ವಲ್ಪ ಕಾಯುವಂತೆ ತಿಳಿಸಲಾಯಿತು. ಬಳಿಕ ಫಾರ್ಮ್ ತುಂಬಲು ಹೇಳಿದರು. ಆ ಬಳಿಕ, ಆಸ್ಪತ್ರೆಗೆ ದಾಖಲು ಮಾಡಿಕೊಳ್ಳಲು ಸಾಧ್ಯವಾಗದು ಎಂದು ಉತ್ತರಿಸಿದರು. ಹೀಗೆ 7 ಆಸ್ಪತ್ರೆಯಲ್ಲಿ ಸುತ್ತಾಡಿದಾಗ ಮಹಿಳೆ ಕೊನೆಯುಸಿರೆಳೆದಳು. ಹಲವು ಪ್ರಕರಣಗಳಲ್ಲಿ, ಆಸ್ಪತ್ರೆಯವರು ದಾಖಲಾತಿ ಮತ್ತು ಚಿಕಿತ್ಸೆ ನಿರಾಕರಿಸಲು ತಾರತಮ್ಯ ಭಾವನೆಯೂ ಕಾರಣವಾಗಿದೆ. ಮುಸ್ಲಿಮ್ ಆಗಿರುವುದಕ್ಕೆ ಅಥವಾ ಮುಸ್ಲಿಮರು ಹೆಚ್ಚಿರುವ ಪ್ರದೇಶದ ನಿವಾಸಿಯಾಗಿರುವುದಕ್ಕೆ ಚಿಕಿತ್ಸೆ ನಿರಾಕರಿಸಿರುವುದನ್ನು ಮಾಧ್ಯಮ ವರದಿಯಲ್ಲಿ ತಿಳಿಸಲಾಗಿದೆ.

ಕರುಳಿನ ಸೋಂಕಿಗೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದ ಮೀರತ್‌ನ 22 ವರ್ಷದ ಮುಸ್ಲಿಮ್ ಮಹಿಳೆಗೆ ತುರ್ತು ಚಿಕಿತ್ಸೆ ನಿರಾಕರಿಸಲಾಯಿತು. ವಿಳಾಸ ಬರೆದುಕೊಂಡ ಸ್ವಾಗತಕಾರಿಣಿಗೆ ಮಹಿಳೆ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿರುವ ಮವಾನಾ ಪ್ರದೇಶದ ನಿವಾಸಿ ಎಂದು ತಿಳಿದು ಬಂದ ಕಾರಣ ದಾಖಲಾತಿ ನಿರಾಕರಿಸಲಾಯಿತು. ದಾಖಲಾತಿ ನಿರಾಕರಣೆ ಮತ್ತು ಚಿಕಿತ್ಸೆ ವಿಳಂಬವಾದ್ದರಿಂದ ಆಕೆ ಸಾವನ್ನಪ್ಪಿದಳು. ಲಾಕ್‌ಡೌನ್‌ನಿಂದ ಮಾನಸಿಕ ಆರೋಗ್ಯದ ಮೇಲೆಯೂ ವ್ಯಾಪಕ ಪರಿಣಾಮ ಉಂಟಾಗಿದೆ. ಸೋಂಕಿನ ಭೀತಿ, ಖಿನ್ನತೆ, ಏಕಾಂತತೆಯ ಭಾವನೆ, ಚಲನವಲನದ ಮೇಲಿದ್ದ ನಿರ್ಬಂಧದ ಕಾರಣ ಕನಿಷ್ಠ 140 ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಲಾಕ್‌ಡೌನ್ ಘೋಷಣೆಯ ತರಾತುರಿ ಹಾಗೂ ಅದರ ಕಠಿಣ ಪಾಲನೆ ಜನತೆಯ ಆತಂಕ ಮತ್ತು ಭೀತಿಯನ್ನು ಬಿಗಡಾಯಿಸಿತು. ಆರೋಗ್ಯಕ್ಕೆ ಸಂಬಂಧಿಸಿದ ಮಾಹಿತಿಯ ಕೊರತೆ, ಉದ್ವೇಗ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗೆ ನೆರವಿನ ಕೊರತೆ, ಲಾಕ್‌ಡೌನ್ ಸಂದರ್ಭ ಅಸಮರ್ಪಕ ನೆರವು - ಇವೆಲ್ಲಾ ಸೇರಿ ಹತಾಶೆ ಮತ್ತು ಸಾವಿನ ಪ್ರಕರಣ ಹೆಚ್ಚಲು ಕಾರಣವಾಗಿದೆ.

ಅಂದ ಹಾಗೆ, ವಲಸೆ ಕಾರ್ಮಿಕರ ಸಾವುನೋವುಗಳನ್ನು ಪ್ರತ್ಯೇಕವಾಗಿ ಚರ್ಚೆ ಮಾಡಬೇಕಾಗಿದೆ. ಈಗಲೂ ಸರಕಾರದ ಬಳಿ ವಲಸೆ ಕಾರ್ಮಿಕರ ಸಾವುಗಳ ಬಗ್ಗೆ ಯಾವುದೇ ಅಧಿಕೃತ ಅಂಕಿ ಅಂಶಗಳಿಲ್ಲ. ಅದಕ್ಕಾಗಿ ಸರಕಾರಕ್ಕೆ ಯಾವ ಪಶ್ಚಾತ್ತಾಪವೂ ಇದ್ದಂತಿಲ್ಲ. ಊರಿಗೆ ಮರಳುತ್ತಿದ್ದ ವಲಸೆ ಕಾರ್ಮಿಕರು ರೈಲಿನಡಿಗೆ ಬಿದ್ದು ಮೃತಪಟ್ಟಿರುವುದರಿಂದ ಹಿಡಿದು, ಪ್ರಯಾಣದ ವೇಳೆ ಹಸಿವಿನಿಂದ, ಅನಾರೋಗ್ಯದಿಂದ ಸತ್ತವರ ಸಂಖ್ಯೆ ಇನ್ನೂ ಮಾಧ್ಯಮಗಳಿಗೆ ಅಧಿಕೃತವಾಗಿ ದೊರಕಿಲ್ಲ. ಲಾಕ್‌ಡೌನ್‌ನ ದುಷ್ಪರಿಣಾಮಗಳನ್ನು ವಲಸೆ ಕಾರ್ಮಿಕರು ಇನ್ನೂ ಉಣ್ಣುತ್ತಿದ್ದಾರೆ. ಸಾವಿನ ಕಂತು ಬೆಳೆಯುತ್ತಿದೆ. ಸಾರ್ವಜನಿಕ ಆರೋಗ್ಯದ ಹೆಸರಿನಲ್ಲಿ , ಆದರೆ ಸೂಕ್ತ ಸಿದ್ಧತೆ ಮತ್ತು ನೆರವಿನ ವ್ಯವಸ್ಥೆಯಿಲ್ಲದೆ ಕೈಗೊಳ್ಳುವ ಕಾರ್ಯನೀತಿ ನಿರ್ಧಾರಗಳು ಯಾವ ರೀತಿ ಆರೋಗ್ಯಕ್ಷೇತ್ರದಲ್ಲಿ ಮತ್ತೊಂದು ಸಮಸ್ಯೆಗೆ ಕಾರಣವಾಗುತ್ತವೆೆ ಎಂಬುದಕ್ಕೆ ಭಾರತದ ಲಾಕ್‌ಡೌನ್ ಹಾಗೂ ಅದರ ವಿನಾಶಕಾರಿ ಪರಿಣಾಮ, ದುರಂತ ಉದಾಹರಣೆಯಾಗಿದೆ. ಆರೋಗ್ಯಕ್ಷೇತ್ರಕ್ಕೆ ಸಂಬಂಧಿಸಿದ ವಿಷಯಗಳು ಸಾಮಾಜಿಕ, ಆರ್ಥಿಕ ಹಿತಚಿಂತನೆ ಮತ್ತು ನೆರವಿನ ಜತೆಗೆ ಆಳವಾದ ಸಂಬಂಧ ಹೊಂದಿವೆೆ ಎಂದು ಅರಿತುಕೊಳ್ಳದಿದ್ದರೆ, ಲಾಕ್‌ಡೌನ್‌ನಂತಹ ಕಾರ್ಯನೀತಿ ಕ್ರಮಗಳು ಒಳಿತಿಗಿಂತ ಹೆಚ್ಚು ಹಾನಿ ಎಸಗುತ್ತವೆ ಎಂಬುದಕ್ಕೂ ಇದು ಉದಾಹರಣೆಯಾಗಿದೆ. ಲಾಕ್‌ಡೌನ್‌ಗೆ ಒಂದು ವರ್ಷ ಸಂದಿರುವ ಈ ಸಂದರ್ಭದಲ್ಲಿ, ಲಾಕ್‌ಡೌನ್ ಕಾರಣದಿಂದ ಮೃತರಾಗಿರುವ ಅಸಂಖ್ಯ ಜನರ ಕುಟುಂಬಗಳ ಜೊತೆಗೆ ಪ್ರಧಾನಿ ಕ್ಷಮೆಯಾಚನೆ ಮಾಡಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News