ಮೂರು ತಿಂಗಳಲ್ಲಿ ಶೇ.1ಕ್ಕೂ ಕಡಿಮೆ ಕೋವಿಡ್ ಸ್ಯಾಂಪಲ್‌ಗಳ ವಂಶವಾಹಿ ಅನುಕ್ರಮಣಿಕೆ ಪರೀಕ್ಷೆ

Update: 2021-03-25 14:43 GMT

ಹೊಸದಿಲ್ಲಿ, ಮಾ.25: ಈ ವರ್ಷದ ಜನವರಿಯಿಂದ ಮಾರ್ಚ್ 18ರ ನಡುವಿನ ಅವಧಿಯಲ್ಲಿ ದೇಶದಲ್ಲಿಯ ಒಟ್ಟು ಕೊರೋನವೈರಸ್ ಪಾಸಿಟಿವ್ ಸ್ಯಾಂಪಲ್‌ಗಳ ಪೈಕಿ ಶೇ.1ಕ್ಕೂ ಕಡಿಮೆ,ಅಂದರೆ 7,664 ಸ್ಯಾಂಪಲ್‌ಗಳನ್ನು ಮಾತ್ರ ಜಿನೋಮ್ ಸೀಕ್ವೆನ್ಸಿಂಗ್ ಅಥವಾ ವಂಶವಾಹಿ ಅನುಕ್ರಮಣಿಕೆ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಡೌನ್ ಟು ಅರ್ತ್ ತನ್ನ ವರದಿಯಲ್ಲಿ ತಿಳಿಸಿದೆ.

ವಂಶವಾಹಿ ಅನುಕ್ರಮಣಿಕೆಯು ಕಾಲಕ್ರಮೇಣ ವೈರಸ್‌ನ ಸ್ವರೂಪದಲ್ಲಿ ಪತ್ತೆಯಾಗುವ ವಂಶವಾಹಿ ಮಾಹಿತಿಯನ್ನು ಓದುವ ಮತ್ತು ವ್ಯಾಖ್ಯಾನಿಸುವ ತಂತ್ರಜ್ಞಾನವಾಗಿದೆ. ಈ ವೈಜ್ಞಾನಿಕ ಪದ್ಧತಿಯು ಕೊರೋನವೈರಸ್‌ನ ರೂಪಾಂತರಿ ಪ್ರಭೇದಗಳ ಪರಿಣಾಮವನ್ನು ತಿಳಿದುಕೊಳ್ಳಲು ಮತ್ತು ಪ್ರಕರಣಗಳ ಅಥವಾ ಸಾವುಗಳ ಸಂಖ್ಯೆಯಲ್ಲಿ ಏರಿಕೆಗೆ ಕಾರಣವಾಗಿರುವ ಪ್ರಭೇದಗಳನ್ನು ಗುರುತಿಸುವಲ್ಲಿ ಮಹತ್ವದ ಸಾಧನವಾಗಿದೆ.

ಇಂಡಿಯನ್ ಸಾರ್ಸ್-ಕೋವ್-2 ಜಿನೊಮಿಕ್ಸ್ ಕನ್ಸಾರ್ಟಿಯಂ ಡಿ.30ರಿಂದ ತನ್ನ ವಂಶವಾಹಿ ಅನುಕ್ರಮಣಿಕೆ ಪರೀಕ್ಷೆಗಳನ್ನು ಹೆಚ್ಚಿಸಲಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಪ್ರಕಟಿಸಿತ್ತು. ಪ್ರತಿ ರಾಜ್ಯದಿಂದ ಶೇ.5ರಷ್ಟು ಕೋವಿಡ್ ಪಾಸಿಟಿವ್ ಸ್ಯಾಂಪಲ್‌ಗಳು ಮತ್ತು ಅಂತರರಾಷ್ಟ್ರೀಯ ಪ್ರಯಾಣಿಕರಿಂದ ಎಲ್ಲ ಪಾಸಿಟಿವ್ ಸ್ಯಾಂಪಲ್‌ಗಳ ಶೇ.100ರಷ್ಟನ್ನು ವಂಶವಾಹಿ ಅನುಕ್ರಮಣಿಕೆ ಪರೀಕ್ಷೆಗೊಳಪಡಿಸಲು ಯೋಜಿಸಲಾಗಿತ್ತು. ಕೊರೋನವೈರಸ್ ಕಣ್ಗಾವಲಿನ ಭಾಗವಾಗಿ ಸಂಭಾವ್ಯ ವೈರಸ್ ಆಸ್ಫೋಟನೆ ಮತ್ತು ಸಂಬಂಧಿತ ಪ್ರಭೇದಗಳನ್ನು ಗುರುತಿಸುವುದು ಇದರ ಉದ್ದೇಶವಾಗಿದೆ ಎಂದು ಕೇಂದ್ರ ಸರಕಾರವು ಮಾ.19ರಂದು ಸಂಸತ್ತಿನಲ್ಲಿ ತಿಳಿಸಿತ್ತು. ಆದರೆ ವಂಶವಾಹಿ ಅನುಕ್ರಮಣಿಕೆ ಪರೀಕ್ಷೆ ಅತ್ಯಂತ ನಿಧಾನಗತಿಯಲ್ಲಿ ನಡೆಯುತ್ತಿದೆ.

ಡಿಸೆಂಬರ್ ಮತ್ತು ಮಾರ್ಚ್ ನಡುವೆ ಭಾರತದಲ್ಲಿ 10,22,335 ಹೊಸ ಕೊರೋನವೈರಸ್ ಪ್ರಕರಣಗಳು ವರದಿಯಾಗಿವೆ. ಶೇ.5ರಂತೆ ವಂಶವಾಹಿ ಅನುಕ್ರಮಣಿಕೆ ಪರೀಕ್ಷೆಗಾಗಿ ಸಂಗ್ರಹಿತ ಸ್ಯಾಂಪಲ್ ಪ್ರಕರಣಗಳ ಸಂಖ್ಯೆ ಈ ಅವಧಿಯಲ್ಲಿ 51,117 ಆಗಿರಬೇಕಿತ್ತು ಎಂದು ಡೌನ್ ಟು ಅರ್ತ್ ಹೇಳಿದೆ.

ಆದರೆ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ ಭೂಷಣ ಮತ್ತು ನೀತಿ ಆಯೋಗದ ಸದಸ್ಯ (ಆರೋಗ್ಯ) ವಿನೋದ ಪಾಲ್ ಸೇರಿದಂತೆ ಆರೋಗ್ಯ ಸಚಿವಾಲಯದ ಅಧಿಕಾರಿಗಳು ಈ ಅವಧಿಯಲ್ಲಿ ವಂಶವಾಹಿ ಅನುಕ್ರಮಣಿಕೆಗೆ ಒಳಪಡಿಸಲಾದ ಸ್ಯಾಂಪಲ್‌ಗಳ ಸಂಖ್ಯೆಯನ್ನು ನಿರ್ದಿಷ್ಟಪಡಿಸಲು ನಿರಾಕರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News