ನುಡಿ, ಗಡಿ ಮೀರಿದ ಮರಾಠಿ-ಕನ್ನಡ ಬಾಂಧವ್ಯ

Update: 2021-03-26 05:30 GMT
ಯಕ್ಷಗಾನದ ಮರಾಠಿ ಕಲಾವಿದ ನಿತಿನ್ ಜಾಧವ್


ದಯಾನಂದ ಸಾಲ್ಯಾನ್

ನೆಲ, ಜಲ, ಗಡಿ, ಭಾಷೆ ಇವೆಲ್ಲವನ್ನು ನೆಪವಾಗಿಟ್ಟುಕೊಂಡು ನಿರಂತರ ಅಖಾಡಕ್ಕಿಳಿಯುವ ಎರಡೂ ಕಡೆಯ ರಾಜಕಾರಣಿಗಳು ಅಲ್ಲಿನ ಸಾಮಾನ್ಯ ಜನರ ಮನದಾಳಕ್ಕೆ ಹೊಕ್ಕು ನೋಡಬೇಕಾಗಿದೆ. ಎಲ್ಲ ಗಡಿಗಳನ್ನು ದಾಟಿ ಸ್ವಚ್ಛಂದವಾಗಿ ಹಾರುವ ನಿರ್ಮಲ ಮನಸ್ಸುಗಳನ್ನು ರಾಜಕಾರಣಿಗಳು ಅರಿತುಕೊಳ್ಳಬೇಕು. ರಾಜಕಾರಣಿಗಳ ರಾಜಕೀಯ ಸಂಚುಗಳನ್ನು ವಿಫಲಗೊಳಿಸಿ, ಈ ಮಹಾನಗರದಲ್ಲಿ ಬದುಕು ಕಟ್ಟಿಕೊಂಡ, ವಲಸೆ ಬಂದ ಕನ್ನಡಿಗರು ಮತ್ತು ಮಣ್ಣಿನ ಮಕ್ಕಳು ‘ಮರಾಠಿ ಮಾನುಸ್’ ಇವರ ನಡುವೆ ಬಾಂಧವ್ಯ ಮತ್ತಷ್ಟು ಗಟ್ಟಿಗೊಳ್ಳುತ್ತಾ ಹೋಗುತ್ತಿರುವುದು ಅಭಿನಂದನೀಯ.

ಮುಂಬೈ ಎಂಬುದೊಂದು ಮಹಾಸಾಗರ ಎಂಬ ಮಾತಿದೆ, ಅದು ತಪ್ಪು!. ಮುಂಬೈ ಮಹಾಸಾಗರ ಅಲ್ಲ, ಅದು ಒಂದು ‘ನದಿ’; ಪ್ರವಾಹದೊಂದಿಗೆ ಬಂದು ಸೇರುವ ಎಲ್ಲವನ್ನೂ ತನ್ನ ತೆಕ್ಕೆಗೆ ಕೊಂಡು ವಿಸ್ತಾರವಾಗುತ್ತಾ ಹರಿಯುತ್ತಿರುವ ನದಿ. ಈ ನದಿಯೆಂಬ ಮುಂಬಾಪುರಿಯ ಮೂಲನಿವಾಸಿಗರು ಕೋಲಿ (ಆಗ್ರಿ) ಜನಾಂಗ. ಮುಂಬಾಪುರಿ ಮುಂಬೈಯಾಗಿ; ಮುಂಬೈ ಬಾಂಬೆಯಾಗುತ್ತಾ ಮತ್ತೆ ಮುಂಬೈಯೇ ಆಗುವವರೆಗಿನ ಸಂಘರ್ಷಪೂರ್ಣ ಹಾಗೂ ರೋಚಕ ಕಥಾನಕವನ್ನು ಕಟ್ಟಿಕೊಂಡು, ಹಲವು ನಿಗೂಢಗಳನ್ನು ಮುಚ್ಚಿಟ್ಟುಕೊಂಡಿರುವ ಈ ನಗರಿ ದೂರದ ಕಣ್ಣಿಗೆ ಕಾಣುವಷ್ಟು ಸರಳವಿಲ್ಲ. ‘ಇದು ಸಾಧ್ಯವೇ?’ ಅನ್ನುವಂತಹ ಎಲ್ಲಾ ಅಸಾಧ್ಯತೆಗಳನ್ನು ‘ಸಾಧ್ಯತೆ’ಯನ್ನಾಗಿಸುವ ಶಕ್ತಿ ಈ ನಗರದ ಆಂತರ್ಯದಲ್ಲಿ ಮಡುಗಟ್ಟಿ ನಿಂತಿದೆ. ಇಲ್ಲಿನ ಸಾಹಿತ್ಯ, ಸಾಂಸ್ಕೃತಿಕ, ಸಾಮಾಜಿಕ ಹೀಗೆ ವಿವಿಧ ಆಯಾಮಗಳಿಂದ ನೋಡಿದಾಗ ಕನ್ನಡ -ಮರಾಠಿ ಕೊಡುಕೊಳ್ಳುವಿಕೆಯ ಸೌಹಾರ್ದ ತೆರೆದುಕೊಳ್ಳುತ್ತದೆ.

ಕೋಟೆ ಪರಿಸರದಲ್ಲಿರುವ ತುಳುವರ ಹೊಟೇಲುಗಳಿಗೆ ಪ್ರವೇಶಿಸಿದರೆ ಅಲ್ಲಿನ ಮೆನು ಕಾರ್ಡ್ ಅಥವಾ ತೂಗುಹಾಕಿರುವ ಫಲಕಗಳಲ್ಲಿನ ವಿಶೇಷ ಮೆನುಗಳ ಹೆಸರುಗಳನ್ನು ವೀಕ್ಷಿಸಿದರೆ ಅಲ್ಲಿ ಕಾಣಸಿಗುವ ಕೆಲವು ಹೆಸರುಗಳು: ಕಾನೆ, ಬೂತಾಯಿ, ಕೋರಿ ರೊಟ್ಟಿ, ಮರುವಯಿ ಸುಕ್ಕ, ನೀರ್‌ದೋಸೆ ಇತ್ಯಾದಿಗಳನ್ನು ಗಮನಿಸಿದರೆ, ಮೀನು ಮಾರುಕಟ್ಟೆಗಳಿಗೆ ಹೋದರೆ ಅಲ್ಲಿ ಕಾನೆ, ಚ್ಯೋಡಿ, ಬೂತಾಯಿ, ಮರುವಯಿ, ನಂಗ್, ಕಲ್ಲೂರು, ತಾಟೆ-ಹೀಗೆ ಯಾವುದೇ ರೀತಿಯಿಂದಲೂ ತಡಕಾಡದೆ ತುಳುವರನ್ನು ಕಂಡಾಗ ಅವರನ್ನು ಕರೆಯುವ ಇಲ್ಲಿನ ಕೋಲಿಗಳು ನಮಗೆ ಅಚ್ಚರಿಗಳಲ್ಲಿ ಅಚ್ಚರಿಯಾಗಿ ಕಂಡುಬರುತ್ತಾರೆ.

ಡೊಂಬಿವಿಲಿ ಪಶ್ಚಿಮ ವಿಭಾಗ ನವರಾತ್ರಿ ಮಂಡಳಿಯ ದೇವಿಯ ಸಿಂಗಾರವನ್ನು ಕಂಡು ಮಲ್ಲಿಗೆದೇವಿ, ಪಿಂಗಾರ ದೇವಿ ಎಂಬ ಮರಾಠಿಗರ ಉದ್ಗಾರವನ್ನು ಕೇಳುವುದು ಒಂದು ‘ಸೋಜಿಗ’. ಅದೇ ಮರಾಠಿಗರು ಇತ್ತೀಚಿನ ಕೆಲ ವರ್ಷಗಳಲ್ಲಿ ನವರಾತ್ರಿ ಸಂದರ್ಭ ‘ಪಿಂಗಾರ’ ಎಂದು ಕೂಗುತ್ತಾ ಹೂ ಮಾರುವ ದೃಶ್ಯ ಕಣ್ಮನ ತಣಿಸುವಂತಹದ್ದು.

ಕನ್ನಡ, ತುಳು ಮತ್ತು ಕೊಂಕಣಿಯಲ್ಲೂ ಯಕ್ಷಗಾನವನ್ನು ನಾವು ಕಂಡವರಿದ್ದೇವೆ. ಆದರೆ ಇತರ ಭಾರತೀಯ ಭಾಷೆಗಳಲ್ಲಿ ಯಕ್ಷಗಾನವನ್ನು ಊಹಿಸುವುದೂ ಅಸಾಧ್ಯ. ಅಸಾಧ್ಯತೆಯನ್ನು ಸಾಧ್ಯತೆಯಾಗಿಸಿ ತೋರಿಸಿದವರು ‘ಯಕ್ಷಕಲಾ ತರಂಗ’ ಎಂಬ ಸಂಸ್ಥೆ, ಅದರ ರೂವಾರಿ ವಿಠ್ಠಲ ಪ್ರಭು, ಪ್ರಸಂಗಕರ್ತ ಎಂ. ಟಿ. ಪೂಜಾರಿ ಹಾಗೂ ಸಂಸ್ಥೆಯ ಕಲಾವಿದರು. ಪ್ರಾರಂಭದಲ್ಲಿ ‘ದೇವಿ ಮಹಾತ್ಮೆ’ ಯಕ್ಷಗಾನವನ್ನು ಮರಾಠಿಯಲ್ಲಿ ಬಯಲಾಟ ರೂಪದಲ್ಲಿ ಪ್ರಸ್ತುತಪಡಿಸಿದರೆ, ಮರಾಠಿಯಲ್ಲಿ ಹಾಡುಸಹಿತ ‘ಪಂಡರಪುರೀಚಿ ಮಹಿಮಾ’ ಎಂಬ ಪ್ರಸಂಗವನ್ನು ಯಶಸ್ವಿಯಾಗಿ ಆಡಿ ತೋರಿಸಿದರು. ಇದು ಮರಾಠಿಗರ ಮನಗೆದ್ದು ಹಲವರ ಪ್ರಶಂಸೆಗೆ ಪಾತ್ರವಾಯಿತು.

ಯಕ್ಷಗಾನದ ಪ್ರೇರಣೆಯಿಂದಲೂ ಮರಾಠಿ ರಂಗಭೂಮಿ ತನ್ನ ಅಸ್ತಿತ್ವವನ್ನು ಕಂಡುಕೊಂಡಿತು ಎಂಬುದು ಇಂದು ಇತಿಹಾಸ. ಘಾಟ್‌ಕೋಪರ್‌ನಲ್ಲಿರುವ ಶ್ರೀ ಗೀತಾಂಬಿಕಾ ಕೃಪಾಪೋಷಿತ ಯಕ್ಷಗಾನ ಮಂಡಳಿಯು ಮಂದಿರದಲ್ಲಿ ಯಕ್ಷಗಾನ ತರಬೇತಿ ಕೊಡುತ್ತಿದ್ದಂತಹ ಸಮಯ ಓರ್ವ ಚಿಕ್ಕ ಬಾಲಕ ಅತೀ ಆಸಕ್ತಿಯಿಂದ ಅಲ್ಲಿ ಬಂದು ತದೇಕಚಿತ್ತದಿಂದ ತಲ್ಲೀನನಾಗಿ ತರಬೇತಿಯನ್ನು ವೀಕ್ಷಿಸುತ್ತಿದ್ದ. ಆತನಿಗೆ ತಾನೂ ಗೆಜ್ಜೆಗಳನ್ನು ಕಾಲಿಗೆ ಕಟ್ಟಿಕೊಳ್ಳಬೇಕು, ತಾನೂ ರಂಗದ ಮೇಲೆ ಕುಣಿಯ ಬೇಕು ಎಂಬ ಬಯಕೆ. ಬಾಲಕನ ಮನದಿಚ್ಛೆ ಅರಿತ ಮಂಡಳಿಯ ಭಾಸ್ಕರ ಬಂಗಾಡಿ, ರಾಜ ತುಂಬೆ, ಪ್ರಭಾಕರ ಕುಂದರ್ ಮೊದಲಾದವರ ಸಹಕಾರದಿಂದ ಹೆಜ್ಜೆ ಕಲಿತ. ದಿಗಣ ಹಾಕಿ ಸೈ ಅನ್ನಿಸಿಕೊಂಡ; ಪುಂಡುವೇಷಕ್ಕೆ ತಯಾರಾದ. ಆದರೆ ಭಾಷೆ! ಮರಾಠಿ ಶಾಲೆಯಲ್ಲಿ ಕಲಿಯುತ್ತಿದ್ದ ಆ ಪುಟ್ಟ ಪೋರನಿಗೆ ಕನ್ನಡ ಶಾಲೆಯ ಯಶೋಧಾ ಟೀಚರ್ ಅ ಆ ಇ ಈ ಅಕ್ಷರಗಳ ನಂಟನ್ನು ಕಟ್ಟಿಕೊಟ್ಟರು. ಯಕ್ಷ ಗುರುಗಳು, ಸಹ ಕಲಾವಿದ ಗೋವಿಂದ ಸಫಲಿಗ ಮೊದಲಾದವರು ಯಕ್ಷಗಾನದ ಮಾತಿನ ಪರಿಚಯ ಮಾಡಿಕೊಟ್ಟರು. ಮರಾಠಿ ಪೋರ ಓರ್ವ ಅಪ್ಪಟ ಕರಾವಳಿ ಕರ್ನಾಟಕದ ಹುಡುಗನಂತೆ ಪುಂಡುವೇಷದಿಂದ ಮೊದಲ್ಗೊಂಡು ಬಣ್ಣದವೇಷದವರೆಗಿನ ರಂಗದ ನಡೆ ಯಕ್ಷಗಾನಾಸಕ್ತರ ಹುಬ್ಬೇರಿಸುವಂತೆ ಮಾಡಿತು. ಮುಂಬೈ ಕನ್ನಡಿಗರೆಂದೂ ಆ ಕಲಾವಿದನನ್ನು ಎರಡನೇ ‘ಪಂತೆ’(ಪಂಕ್ತಿ)ಗೆ ದೂಡಿದವರಲ್ಲ. ಇಂದು ಗೀತಾಂಬಿಕಾ ಮಾತ್ರವಲ್ಲದೆ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿ, ಜನಪ್ರಿಯ ಯಕ್ಷಗಾನ ಮಂಡಲಿ, ಮಹಾಗಣಪತಿ ಯಕ್ಷಗಾನ ಮಂಡಳಿ-ಪುಣೆ, ಬಂಟ ಯಕ್ಷಕಲಾ ವೇದಿಕೆ, ಗುರುನಾರಾಯಣ ಯಕ್ಷಗಾನ ಮಂಡಳಿ - ಹೀಗೆ ಮುಂಬೈ ಪುಣೆಗಳ ಯಕ್ಷಗಾನ ಮಂಡಳಿಗಳಿಗೆ ಬೇಕಾದ ಕಲಾವಿದನಾಗಿ, ಮಾತ್ರವಲ್ಲದೆ ಯಕ್ಷಗಾನದ ಬಣ್ಣಗಾರಿಕೆಯಲ್ಲೂ ನುರಿತವನಾಗಿ ವಿವಿಧೆಡೆಗಳಲ್ಲಿ ಬಣ್ಣಗಾರಿಕೆಗೆ ಆಹ್ವಾನಿಸಲ್ಪಡುವ ಕಲಾವಿದನಾಗಿಯೂ ದುಡಿಯುತ್ತಿರುವ ನಿತಿನ್ ಜಾಧವ್ ಗೀತಾಂಬಿಕಾ ದೇವಸ್ಥಾನದ ಸಮಿತಿ ಸದಸ್ಯ, ಭಜನಾ ಸಮಿತಿಯ ಕ್ರಿಯಾಶೀಲ ಸದಸ್ಯನಾಗಿಯೂ ಗುರುತಿಸಿಕೊಂಡಿದ್ದಾರೆ. ತುಳು-ಕನ್ನಡಿಗರ ಮಧ್ಯೆ ಎದ್ದು ತೋರುವ ವ್ಯಕ್ತಿತ್ವವಾಗಿ ಬೆಳೆದಿದ್ದಾರೆ. ‘ಗೀತಾಂಬಿಕಾ ಕಲಾ ವೇದಿಕೆ’ಯ ಮೂಲಕ ತುಳು ರಂಗಭೂಮಿಯಲ್ಲಿ ಕಾಣಿಸಿಕೊಂಡು ವಿಭಿನ್ನ ಪಾತ್ರಗಳಿಗೆ ನಾಟಕರಂಗದಲ್ಲಿ ಜೀವತುಂಬಿದ್ದಾರೆ.

ಮುಂಬೈಯ ಹಿರಿಯ ನಾಟಕಕಾರ, ರಂಗನಿರ್ದೇಶಕರಲ್ಲಿ ಓರ್ವರಾದ ಉಮೇಶ್ ಶೆಟ್ಟಿ ಅವರ ‘ಬದಿಕ್ ಬಲಿ’ ಎಂಬ ನಾಟಕವನ್ನು ಅವರದೇ ನಿರ್ದೇಶನದಲ್ಲಿ ರಂಗಕ್ಕೆ ತರಲು ರಂಗತಾಲೀಮು ಆರಂಭಿಸಲಾಗಿತ್ತು. ಸಾಯಿ ಬಲ್ಲಾಳ್, ಜಗದೀಶ್ ಶೆಟ್ಟಿ, ಕೆಂಚನಕೆರೆ ಸಹಿತ ಇನ್ನೂ ಹಲವಾರು ಕಲಾವಿದರು ನಾಟಕದ ವಿವಿಧ ಪಾತ್ರಗಳಿಗೆ ಜೀವ ತುಂಬಲಿದ್ದರು. ಇನ್ನೇನು ನಾಟಕಕ್ಕೆ ಕಡೆಯ 7 ದಿನಗಳ ರಂಗ ತಾಲೀಮು ಬಾಕಿ ಇರುವ ಒಂದು ಸಂಜೆ, ನಾಟಕದ ನಾಯಕ ಪಾತ್ರಧಾರಿ ‘‘ನಾನು ನಾಟಕಕ್ಕೆ ಸಿಗುವುದಿಲ್ಲ, ನನ್ನ ಬದಲಿಗೆ ಬೇರೆಯವರನ್ನು ಸೇರಿಸಿಕೊಳ್ಳಿ’’ ಎಂದು ಅಪ್ಪಣೆ ಕೊಟ್ಟ. ರಂಗಪ್ರಯೋಗಕ್ಕೆ ಉಳಿದಿರುವುದು ಒಂದು ವಾರ. ಯಾರನ್ನು ಕರೆತರಲಿ ಎಂಬ ಗೊಂದಲ. ಕೆಲ ತುಳು ರಂಗ ಕಲಾವಿದರನ್ನು ವಿಚಾರಿಸಿದ್ದಾಯಿತು. ‘‘ರಂಗ ತಾಲೀಮಿಗೆ ಸಮಯ ಸಾಕಾಗದು’’, ‘‘ನನ್ನಿಂದ ಆ ಪಾತ್ರ ಸಾಧ್ಯವಿಲ್ಲ’’ ಎಂಬ ಉತ್ತರಗಳೇ ಸಿಗುತ್ತಿದ್ದವು. ಸಂಘಟಕರು, ನಿರ್ದೇಶಕರು, ಸಹ ಕಲಾವಿದರಿಗೆ ದಿಗಿಲು. ದಿನ ನಿಗದಿಯಾಗಿತ್ತು. ಸಭಾಗೃಹ ಸಹಿತ ಎಲ್ಲ ಸಿದ್ಧತೆ ಪೂರ್ಣವಾಗಿತ್ತು. ಇನ್ನೇನು ಎಂಬ ಪ್ರಶ್ನೆ ಸಂಘಟಕರ ಮುಂದೆ. ಆಗ ಮರಾಠಿ ರಂಗಭೂಮಿಯ ಹೆಸರಾಂತ ಚಲನಚಿತ್ರ ನಟ ಶೇಖರ್ ನವುರೆ ತುಳು ರಂಗಭೂಮಿಯ ‘ಮಾನ’ ಉಳಿಸುವಲ್ಲಿ ನೆರವಿಗೆ ಬಂದರು. ತುಳು ಮಾತನಾಡಲು, ಕನ್ನಡ ಬರೆಯಲು, ಓದಲು ಬಾರದ ನವುರೆ ಎರಡು ದಿನಗಳಲ್ಲಿ ಪ್ರಯಾಸಪಟ್ಟು ಇಡೀ ನಾಟಕವನ್ನು ಓದಿಸಿ, ತನಗೆ ಬೇಕಾದಂತೆ ಮರಾಠಿ ಲಿಪಿಯಲ್ಲಿ ನಾಟಕದ ಸಂಭಾಷಣೆ ಬರೆದು ಕೊಂಡು, ಮುಂದಿನ ಐದು ದಿನಗಳಲ್ಲಿ ನಾಟಕದ ಒಟ್ಟು ಸಂಭಾಷಣೆ ಕರಗತ ಮಾಡಿಕೊಂಡು ಆ ‘ಹೀರೋ’ಗಿಂತಲೂ ಒಳ್ಳೆಯ ರೀತಿಯಲ್ಲಿ ರಂಗದ ಮೇಲೆ ಆ ಪಾತ್ರಕ್ಕೆ ಜೀವ ತುಂಬಿದ್ದು ಇತಿಹಾಸ.

ಸಾಹಿತ್ಯ ರಂಗಕ್ಕೆ ಬಂದರೆ ಇಲ್ಲಿ ಜರಗುತ್ತಾ ಬಂದಿರುವ ಸಾಹಿತ್ಯ ಚರ್ಚೆಗಳನ್ನು, ಗೋಷ್ಠಿಗಳನ್ನಲ್ಲದೆ, 1997ರಲ್ಲಿ ಅಹಮದ್ ನಗರದಲ್ಲಿ ಜರಗಿದ ಎಪ್ಪತ್ತನೇ ಅಖಿಲ ಭಾರತ ಮರಾಠಿ ಸಾಹಿತ್ಯ ಸಮ್ಮೇಳನದ ‘ಅಧ್ಯಕ್ಷ ಪೀಠ’ವನ್ನು ಕನ್ನಡ ನಾಟಕಕಾರ ಡಾ. ಗಿರೀಶ್ ಕಾರ್ನಾಡ್ ಅವರಿಗೆ ನೀಡಿರುವುದು ಅಭಿಮಾನದ; ಗಮನಿಸಲೇಬೇಕಾದ ಅಂಶ.

ಮುಂಬೈಯಲ್ಲಿನ ಕನ್ನಡ ಪತ್ರಿಕಾ ಇತಿಹಾಸವನ್ನು ಬರೆಯುವಾಗ ‘ಮರಾಠಿ ಮಾನುಸ್’ ಮುರಲೀಧರ್ ಶಿಂಗೋಟೆ ಅವರ ಹೆಸರನ್ನು ಯಾರೂ, ಯಾವ ಕಾರಣಕ್ಕೂ ಉಲ್ಲೇಖಿಸದೆ ಇರುವಂತಿಲ್ಲ. ಓರ್ವ ಪತ್ರಿಕೆಗಳ ಏಜೆಂಟ್ ಆಗಿದ್ದ ಶಿಂಗೋಟೆ ‘ಕರ್ನಾಟಕ ಮಲ್ಲ’ವನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡು ಅದನ್ನು ಮರಾಠಿ ಮಣ್ಣಿನಲ್ಲಿ ಇಂದೂ ಜೀವಂತವಾಗಿರುವಂತೆ ನೋಡಿಕೊಂಡಿದ್ದಾರೆ.

ಕಳೆದ ಶತಮಾನದ ಎಪ್ಪತ್ತು-ಎಂಭತ್ತರ ದಶಕಗಳಲ್ಲಿ ‘ಪುಂಗಿ ಬಜಾವೋ, ಲುಂಗಿ ಹಠಾವೋ’ ಎಂಬ ‘ಕೂಗು’ ಎದ್ದಿತ್ತು. ಪ್ರಾದೇಶಿಕ ರಾಜಕೀಯ ಕಾರಣಗಳನ್ನು ಮುಂದಿಟ್ಟು ‘ಮದ್ರಾಸಿ’ಗರನ್ನು (ತುಳು-ಕನ್ನಡಿಗರನ್ನೂ ‘ಮದ್ರಾಸಿ’ಗರೆಂದೇ ಆ ದಿನಗಳಲ್ಲಿ ಕರೆಯುತ್ತಿದ್ದರು) ಇಲ್ಲಿಂದ ಓಡಿಸಬೇಕು ಎಂಬ ಕೂಗು ಎದ್ದಿದ್ದು ಮಾತ್ರವಲ್ಲ, ಕನ್ನಡಿಗರ ಮೇಲೆ ಬಹಳಷ್ಟು ಹಲ್ಲೆಗಳೂ ನಡೆದದ್ದಿವೆ. ಇದರ ಮುಂಚೂಣಿಯಲ್ಲಿದ್ದವರು ಇಲ್ಲಿನ ‘ಹುಲಿ’ ಬಾಳಾ ಠಾಕ್ರೆ. ಒಂದೊಮ್ಮೆ ಫ್ರೀಪ್ರೆಸ್ ಜರ್ನಲ್ ಪತ್ರಿಕೆಯಲ್ಲಿ ವ್ಯಂಗ್ಯಚಿತ್ರಕಾರರಾಗಿದ್ದ ಬಾಳಾ ಠಾಕ್ರೆಯವರಿಗೆ ಅಂದಿನಿಂದಲೇ ಆಪ್ತರಾಗಿದ್ದ ಎಂ. ಡಿ. ಶೆಟ್ಟಿ ಅವರ ಸ್ನೇಹ ಈ ಸಂದರ್ಭದಲ್ಲಿ ಮುಂಬೈ ಕನ್ನಡಿಗರಿಗೆ ನೆರವಾಯಿತು. ಅದೇ ಹೊತ್ತಿನಲ್ಲಿ ಕೆಲವು ಹೊಟೇಲ್ ಕಾರ್ಮಿಕರು ಹಲ್ಲೆಗಳಿಗೆ ತೀವ್ರ ಪ್ರತಿರೋಧವನ್ನು ತೋರಿದರು. ಘಾಟ್‌ಕೋಪರ್ ಪರಿಸರದ ವೆಲ್‌ಕಂ ಹೊಟೇಲಿನ ಮುಂದೆ, ಕುದಿವ ಎಣ್ಣೆಯನ್ನು ಎದುರಿಗಿಟ್ಟು ‘‘ಧೈರ್ಯವಿದ್ದರೆ ಮುಂದೆ ಬನ್ನಿ’’ ಎಂದು ಕರಾವಳಿ ಕನ್ನಡಿಗರು ಸವಾಲು ಹಾಕಿದರು. ಸ್ನೇಹ ಮತ್ತು ಪ್ರತಿರೋಧ ಎರಡಕ್ಕೂ ಮಣಿದ ಠಾಕ್ರೆಯವರು ಮತ್ತೆಂದೂ ‘ಮದ್ರಾಸಿ’ಗಳೆಂದು ತುಳು ಕನ್ನಡಿಗರ ಮೇಲೆ ಸವಾರಿ ಮಾಡಲಿಲ್ಲ. ಅಂತಹ ಠಾಕ್ರೆಯವರ ಆಪ್ತ ವಲಯದತ್ತ ನಾವು ಕಣ್ಣಾಡಿಸಿದರೆ, ಠಾಕ್ರೆಯವರ ಉದ್ಯಮ ಪಾಲುದಾರಿಕೆಗಳಲ್ಲಿ ಹಲವು ತುಳು-ಕನ್ನಡಿಗರು ಸೇರಿಕೊಂಡಿರುವುದು ಕುತೂಹಲಕಾರಿ. ಬಾಳಾ ಠಾಕ್ರೆಯವರಿಗೆ ರೇಖಿ ಚಿಕಿತ್ಸೆ ನೀಡುತ್ತಿದ್ದದ್ದು ಮೂಲತಃ ಕೋಟದವರಾದ ಡಾ. ವೆಂಕಟೇಶ ಪೈ, ಅವರ ವಿಶೇಷ ಪೂಜೆಗಳನ್ನು ನೆರವೇರಿಸುತ್ತಿದ್ದವರು ಶಿರಸಿಯ ಡಾ. ಕೆ. ಗಣಪತಿ ಭಟ್, ಹಿಂದುತ್ವ ಪ್ರತಿಪಾದಕ ಠಾಕ್ರೆಯವರ ಗುರುಗಳಾಗಿದ್ದವರು ಪೇಜಾವರ ಮಠದ ವಿಶ್ವೇಶತೀರ್ಥರು, ಆತ್ಮೀಯ ವಲಯದಲ್ಲಿ ಸದಾ ಗುರುತಿಸಲ್ಪಡುತ್ತಿದ್ದ ಗಣ್ಯರಾದ ಆರ್. ಬಿ. ಶೆಟ್ಟಿ, ಸುಧಾಕರ ಹೆಗ್ಡೆ, ಶೇಖರ್ ಕೋಟ್ಯಾನ್, ನರೇಂದ್ರ ಶೇಣವ, ಜಿತೇಂದ್ರ ಶೆಣೈ, ರವಿ ಎಸ್. ದೋಡೆ ಇವರೆಲ್ಲರೂ ತುಳು-ಕನ್ನಡಿಗರು. ಠಾಕ್ರೆಯವರ ಜ್ಯೋತಿಷಿಯಾಗಿದ್ದವರು ವೇದಮೂರ್ತಿ ರಾಮಕೃಷ್ಣ ಮಂಜರು. ಅವರ ವೈದ್ಯರಾಗಿದ್ದವರು ಡಾ. ಪ್ರಕಾಶ್ ಪೈ ಇವರೂ ಕನ್ನಡಿಗರು. ಮೀನಾತಾಯಿ ಠಾಕ್ರೆ ಸ್ಮಾರಕ ಟ್ರಸ್ಟ್‌ನ ಟ್ರಸ್ಟಿಗಳಲ್ಲಿ ಅಶ್ವಿನ್ ಶೆಟ್ಟಿ ಓರ್ವರು. ನೆಲ, ಜಲ, ಗಡಿ, ಭಾಷೆ ಇವೆಲ್ಲವನ್ನು ನೆಪವಾಗಿಟ್ಟುಕೊಂಡು ನಿರಂತರ ಅಖಾಡಕ್ಕಿಳಿಯುವ ಎರಡೂ ಕಡೆಯ ರಾಜಕಾರಣಿಗಳು ಅಲ್ಲಿನ ಸಾಮಾನ್ಯ ಜನರ ಮನದಾಳಕ್ಕೆ ಹೊಕ್ಕು ನೋಡಬೇಕಾಗಿದೆ. ಎಲ್ಲ ಗಡಿಗಳನ್ನು ದಾಟಿ ಸ್ವಚ್ಛಂದವಾಗಿ ಹಾರುವ ನಿರ್ಮಲ ಮನಸ್ಸುಗಳನ್ನು ರಾಜಕಾರಣಿಗಳು ಅರಿತುಕೊಳ್ಳಬೇಕು. ರಾಜಕಾರಣಿಗಳ ರಾಜಕೀಯಗಳಿಗೆ ಸಡ್ಡು ಹೊಡೆದು ಈ ಮಹಾನಗರದಲ್ಲಿ ಬದುಕು ಕಟ್ಟಿಕೊಂಡ, ವಲಸೆ ಬಂದ ಕನ್ನಡಿಗರಾಗಲಿ, ಇಲ್ಲಿನ ಮಣ್ಣಿನ ಮಕ್ಕಳು ‘ಮರಾಠಿ ಮಾನುಸ್’ ಇವರ ನಡುವೆ ಬಾಂಧವ್ಯ ಮತ್ತಷ್ಟು ಗಟ್ಟಿಗೊಳ್ಳುತ್ತಾ ಹೋಗುತ್ತಿರುವುದು ಅಭಿನಂದನೀಯ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News