ಸುಯೆಝ್ ಕಾಲುವೆಯಲ್ಲಿ ಸಿಲುಕಿಕೊಂಡಿದ್ದ ದೈತ್ಯ 'ಎವರ್ ಗಿವನ್' ಹಡಗು ಕೊನೆಗೂ ಹೊರಡಲು ಸಿದ್ಧ

Update: 2021-03-29 07:53 GMT

ಕೈರೋ : ಈಜಿಪ್ಟ್ ನ ಸುಯೆಝ್ ಕಾಲುವೆಯಲ್ಲಿ ಕಳೆದೊಂದು ವಾರದಿಂದ ಸಿಲುಕಿದ್ದ ಜಪಾನ್ ದೇಶದ ದೈತ್ಯ 'ಎವರ್ ಗಿವನ್' ಸರಕು ಹಡಗನ್ನು ಕೊನೆಗೂ ಕಾಲುವೆಯಿಂದ ಹೊರಕ್ಕೆ ತರುವ ಯತ್ನದ ಭಾಗವಾಗಿ ಅದನ್ನು ಮತ್ತೆ ಕಾರ್ಯಾಚರಿಸುವಂತೆ ಮಾಡುವಲ್ಲಿ ರಕ್ಷಣಾ ತಂಡಗಳು ಯಶಸ್ವಿಯಾಗಿವೆ ಎಂದು ಈ ಮಹತ್ತರ ಜವಾಬ್ದಾರಿ ಹೊತ್ತ ಸಂಸ್ಥೆಗಳಲ್ಲೊಂದಾದ ಇನ್‍ಶೇಪ್ ಶಿಪ್ಪಿಂಗ್ ಸರ್ವಿಸಸ್ ಸೋಮವಾರ ತಿಳಿಸಿದೆ.

ಆದರೆ ಸುಯೆಝ್ ಕಾಲುವೆಯಿಂದ ಹೊರಬರಲು ಈ ಹಡಗಿಗೆ ಎಷ್ಟು ಸಮಯ ತಗಲಬಹುದೆಂದು ಇನ್ನೂ ಸ್ಪಷ್ಟವಾಗಿಲ್ಲ. ಈ ಹಡಗು ಸುಯೆಝ್ ಕಾಲುವೆಯಲ್ಲಿ ಸಿಲುಕಿದಂದಿನಿಂದ ಎರಡೂ ಕಡೆಗಳಿಂದ ಕಾಲುವೆಯನ್ನು ದಾಟಲು ಹಲವಾರು ಹಡಗುಗಳು ಕಾದಿವೆ.

ಎವರ್ ಗಿವನ್ ಹಡಗನ್ನು ಹೊರದೂಡಲು 20,000 ಟನ್‍ಗಳಷ್ಟು ಮರಳನ್ನು ಹೊರಕ್ಕೆ ತೆಗೆಯಲಾಗಿದೆ ಹಾಗೂ ಸುಮಾರು 14 ಟಗ್ ಬೋಟುಗಳು ಹಡಗನ್ನು ನೂಕುವ ಕೆಲಸದಲ್ಲಿ ಭಾಗಿಯಾಗಿವೆ.

ಪ್ರಸಕ್ತ ಕನಿಷ್ಠ 321 ನೌಕೆಗಳು ಸುಯೆಝ್ ಕಾಲುವೆಯ ಸುತ್ತಲೂ ಇವೆಯೆನ್ನಲಾಗಿದ್ದು ಕಾಲುವೆಯನ್ನು ಹಾದು ಹೋಗಲು ಕಾದಿವೆ.

ಸುಮಾರು 400 ಮೀಟರ್ ಉದ್ದದ ಎವರ್ ಗಿವನ್,  ರೆಡ್ ಸೀ ಮುಖಾಂತರ ಕಡಿದಾದ ಕಾಲುವೆಯಲ್ಲಿ ಸಾಗುತ್ತಿದ್ದಾಗ ನಿಯಂತ್ರಣ ಕಳೆದುಕೊಂಡ  ಪರಿಣಾಮ ಜಾಗತಿಕ ಜಲಮಾರ್ಗ ವ್ಯಾಪಾರ ವಹಿವಾಟಿನ ಮೇಲೆ ತೀವ್ರ ಪರಿಣಾಮ ಬೀರಿದ್ದು ಗಂಟೆಗೆ ಸುಮಾರು 400 ಮಿಲಿಯನ್ ಡಾಲರ್ ನಷ್ಟ ಉಂಟಾಗುತ್ತಿದೆ. 

ಈ ಹಡಗು ಸುಯೆಝ್ ಕಾಲುವೆಯಲ್ಲಿ ಸಿಲುಕಿಗೊಳ್ಳಲು ಬಿರುಗಾಳಿ ಕಾರಣ ಎಂದು ಹೇಳಲಾಗಿದೆಯಾದರೂ ಇದೊಂದೇ ಕಾರಣವೇ ಅಥವಾ ಬೇರಾನಾದರೂ ಸಮಸ್ಯೆಯಿಂದ ಹೀಗಾಗಿದೆಯೇ ಎಂದು ತಿಳಿಯುವ ಯತ್ನಗಳು ಮುಂದುವರಿದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News