"ಸುದ್ದಿ ರೂಪದಲ್ಲಿ ಜಾಹೀರಾತು ಪ್ರಕಟಿಸಿ ಮತದಾರರ ದಿಕ್ಕು ತಪ್ಪಿಸಿದ ಬಿಜೆಪಿ"

Update: 2021-03-29 08:18 GMT

ಗುವಾಹಟಿ: ಅಸ್ಸಾಂನಲ್ಲಿ ಮೊದಲ ಹಂತದ ಚುನಾವಣೆ ನಡೆದ  ಎಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ಜಯ ಗಳಿಸಲಿದೆ ಎಂದು ಹೇಳಿಕೊಂಡ ಜಾಹೀರಾತನ್ನು ಸುದ್ದಿಯೆಂಬ ರೀತಿಯಲ್ಲಿ ಬಿಂಬಿಸಿ ಪ್ರಕಟಿಸಿದ್ದಾರೆಂದು ಆರೋಪಿಸಿ ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೋವಾಲ್, ಬಿಜೆಪಿ ಅಧ್ಯಕ್ಷ ಜೆ ಪಿ ನಡ್ಡಾ ಹಾಗೂ ಅಸ್ಸಾಂ ಬಿಜೆಪಿ ಅಧ್ಯಕ್ಷ ರಂಜೀತ್ ಕುಮಾರ್ ದಾಸ್ ಹಾಗೂ ಎಂಟು ಪ್ರಮುಖ ದೈನಿಕಗಳ ವಿರುದ್ಧ ಕಾಂಗ್ರೆಸ್ ಪೊಲೀಸ್ ದೂರು ನೀಡಿದೆ.

ರವಿವಾರ ರಾತ್ರಿ ದಿಸ್ಪುರ್ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ. ಬಿಜೆಪಿ ಹಾಗೂ ಇತರರು ಚುನಾವಣಾ ನೀತಿ ಸಂಹಿತೆಯನ್ನು ಹಾಗೂ ಜನ ಪ್ರತಿನಿಧಿತ್ವ ಕಾಯಿದೆ 1951ರ ಸೆಕ್ಷನ್ 126ಎ ಹಾಗೂ  ಮಾರ್ಚ್  26ರಂದು ಚುನಾವಣಾ ಆಯೋಗ ನೀಡಿದ ಸೂಚನೆಯನ್ನು  ಉಲ್ಲಂಘಿಸಿದ್ದಾರೆಂದು ಅಸ್ಸಾಂ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾನೂನು ಘಟಕದ ಅಧ್ಯಕ್ಷ ನಿರಾನ್ ಬೋರಾಹ್ ಹೇಳಿದ್ದಾರೆ.

ತಮ್ಮ ಸೋಲು ಖಚಿತ ಎಂದು ತಿಳಿದಿರುವ ಬಿಜೆಪಿ ನಾಯಕರು ಹತಾಶೆಯಿಂದ ಅಕ್ರಮ ಮತ್ತು ಅಸಂವಿಧಾನಿಕ ವಿಧಾನಗಳ ಮೂಲಕ ಮತದಾರರ ಮೇಲೆ ಪ್ರಭಾವ ಬೀರಲು ಹಾಗೂ  ಎರಡನೇ ಮತ್ತು ಮೂರನೇ ಹಂತದ ಚುನಾವಣೆ ವೇಳೆ ಮತದಾರರನ್ನು ವಂಚಿಸಲು ವಿವಿಧ ದಿನಪತ್ರಿಕೆಗಳ ಮುಖಪುಟದಲ್ಲಿ  ತಪ್ಪುದಾರಿಗೆಳೆಯುವಂತಹ ಶೀರ್ಷಿಕೆಯಲ್ಲಿ ಜಾಹೀರಾತನ್ನು ಸುದ್ದಿ ರೂಪದಲ್ಲಿ ಪ್ರಕಟಿಸಿದ್ದಾರೆ ಎಂದು ಬೋರಾಹ್ ಆರೋಪಿಸಿದ್ದಾರೆ.

ಕಾಂಗ್ರೆಸ್ ಪಕ್ಷ ಈ ಕುರಿತಂತೆ ಅಸ್ಸಾಂ ಮುಖ್ಯ ಚುನಾವಣಾಧಿಕಾರಿ ಹಾಗೂ  ಭಾರತದ ಚುನಾವಣಾ ಆಯೋಗಕ್ಕೂ ದೂರು ನೀಡಿದೆ ಹಾಗೂ ರವಿವಾರ ಪ್ರಕಟಗೊಂಡ ಈ ಜಾಹೀರಾತಿಗೆ ಸಂಬಂಧಿಸಿದಂತೆ ಬಿಜೆಪಿ ಹಾಗೂ ದೈನಿಕಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ.

ದೂರನ್ನು ಚುನಾವಣಾ ಆಯೋಗ ಪರಿಶೀಲಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಿಜೆಪಿಯ ಸುದ್ದಿ ರೂಪದ ಜಾಹೀರಾತು ಪ್ರಮುಖ ಅಸ್ಸಾಮಿ ಪತ್ರಿಕೆಗಳಾದ ದಿ ಅಸ್ಸಾಂ ಟ್ರಿಬ್ಯೂನ್, ಅಸೊಮಿಯಾ ಪ್ರತಿದಿನ್, ಅಮರ್ ಅಸೊಮ್, ನಿಯಮಿಯ ಬರ್ತ, ಅಸೊಮಿಯ ಖಬೊರ್, ದೈನಿಕ್ ಅಸಮ್, ದೈನಿಕ್ ಜುಗಸಂಖ ಹಾಗೂ ದೈನಿಕ್ ಪೂರ್ವೋದಯದಲ್ಲಿ ಪ್ರಕಟಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News