ಮ್ಯಾನ್ಮಾರ್‌ ನಿರಾಶ್ರಿತರಿಗೆ ಆಹಾರ, ವಸತಿ ನೀಡಬೇಡಿ: ಮಣಿಪುರ ಗೃಹ ಇಲಾಖೆ ಆದೇಶ

Update: 2021-03-29 13:06 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ಮ್ಯಾನ್ಮಾರ್‌ ನಲ್ಲಿ ಸೇನಾಡಳಿತವು ಅಲ್ಲಿನ ನಾಗರಿಕರ ಮೇಲೆ ದೌರ್ಜನ್ಯ ನಡೆಸುತ್ತಿದ್ದು, ಈಗಾಗಲೇ ನೂರಕ್ಕೂ ಹೆಚ್ಚು ಮಂದಿ ಪೊಲೀಸರ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ. ಅಮೆರಿಕಾ ದೇಶವು ಮ್ಯಾನ್ಮಾರ್‌ ನಿರಾಶ್ರಿತರು ನಮ್ಮ ದೇಶಕ್ಕೆ ಬರಲು ಅನುಮತಿ ನೀಡಿದೆ. ಆದರೆ ಇದೀಗ ಮಣಿಪುರದ ಗೃಹ ಇಲಾಖೆಯು ಹೊರಡಿಸಿದ ಆದೇಶದ ವಿರುದ್ಧ ಹಲವಾರು ಮಂದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 ಈ ಆದೇಶದಲ್ಲಿ "ನಮ್ಮ ನೆರೆಯ ದೇಶದಲ್ಲಿ ನಡೆಯುತ್ತಿರುವ ಹಲವು ಘಟನೆಗಳಿಂದಾಗಿ ಅಲ್ಲಿನ ಜನರು ಮಣಿಪುರದ ಗಡಿಯಿಂದ ಭಾರತಕ್ಕೆ ಬರುತ್ತಿದ್ದಾರೆ. ಆದ್ದರಿಂದ ಈ ಕೆಳಗಿನ ಆದೇಶಗಳನ್ನು ಪಾಲಿಸಿ. ಜಿಲ್ಲಾಡಳಿತ ಯಾವುದೇ ರೀತಿಯ ನಿರಾಶ್ರಿತ ಶಿಬಿರ ಸ್ಥಾಪಿಸಬಾರದು ಮತ್ತು ಅವರಿಗೆ ಆಹಾರ ನೀಡಬಾರದು. ಗಂಭೀರವಾದ ಅನಾರೋಗ್ಯಗಳಿದ್ದಲ್ಲಿ ಮಾನವೀಯ ನೆಲೆಯಲ್ಲಿ ಚಿಕಿತ್ಸೆ ನೀಡಬಹುದಾಗಿದೆ. 

"ಗಡಿಯೊಳಗೆ ಪ್ರವೇಶಿಸುವವರನ್ನು ತಡೆದು ಮರಳಿ ಕಳುಹಿಸಬೇಕು. ಆಧಾರ್‌ ಕಾರ್ಡ್ ನೋಂದಣಿ ಪ್ರಕ್ರಿಯೆಯನ್ನು ಕೂಡಲೇ ನಿಲ್ಲಿಸಬೇಕು" ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಈ ಕುರಿತಾದಂತೆ ಸಾಮಾಜಿಕ ತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, "ದೇಶವನ್ನು ವಿಶ್ವಗುರು ಮಾಡಲು ಹೊರಟವರಿಗೆ ಕಿಂಚಿತ್ತೂ ಮಾನವೀಯತೆ ಇಲ್ಲದಾಯಿತೇ?" ಎಂದು ಬಳಕೆದಾರರೋರ್ವರು ಕಮೆಂಟ್‌ ಮಾಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News