ಉಯ್ಘುರ್‌ ಮುಸ್ಲಿಮರ ಬಗ್ಗೆ ಕಾಳಜಿ ವ್ಯಕ್ತಪಡಿಸಿದ ನೈಕ್‌, ಎಚ್&ಎಂ ಕಂಪೆನಿ: ಚೀನಾದಲ್ಲಿ ವ್ಯಾಪಕ ಆಕ್ರೋಶ

Update: 2021-03-29 14:42 GMT

ನ್ಯೂಯಾರ್ಕ್: ಚೀನಾದ ಕ್ಸಿನ್ಜಿಯಾಂಗ್ ಪ್ರಾಂತ್ಯದಲ್ಲಿ ಉಯ್ಗುರ್  ಮುಸ್ಲಿಮರ ಮಾನವ ಹಕ್ಕುಗಳ ಉಲ್ಲಂಘನೆ ನಡೆಯುತ್ತಿರುವ ಕುರಿತು ತಮ್ಮ ಕಳವಳವನ್ನು ಖ್ಯಾತ ರಿಟೇಲ್ ಸಂಸ್ಥೆಗಳಾದ ನೈಕ್ ಹಾಗೂ ಎಚ್&ಎಂ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಈ ಎರಡು ಕಂಪೆನಿಗಳು ಚೀನಾದಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿವೆ. ಕನಿಷ್ಠ 40  ಖ್ಯಾತ ಚೀನೀ ಸೆಲೆಬ್ರಿಟಿಗಳು ಈ ಎರಡು ಬ್ರ್ಯಾಂಡ್‍ಗಳ ಜತೆಗಿನ ತಮ್ಮ ಕಾಂಟ್ರಾಕ್ಟ್ ರದ್ದುಗೊಳಿಸಿದ್ದಾರಲ್ಲದೆ ಈ ಬ್ರ್ಯಾಂಡ್‍ಗಳ ಉತ್ಪನ್ನಗಳನ್ನು ಚೀನೀ ಇ-ಕಾಮರ್ಸ್ ಸೈಟ್‍ಗಳಿಂದ ರಾತ್ರೋರಾತ್ರಿ ತೆಗೆದು ಹಾಕಲಾಗಿವೆ.

ಉಯ್ಘುರ್ ಮುಸ್ಲಿಮರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಕುರಿತಾದ ವರದಿಗಳಿಂದ ತಮಗೆ ತೀವ್ರ ಕಳವಳವಾಗಿವೆ ಎಂದು ಎರಡೂ ಕಂಪೆನಿಗಳು ಕಳೆದ ವರ್ಷ ಹೇಳಿಕೆಗಳನ್ನು ಬಿಡುಗಡೆಗೊಳಿಸಿದ್ದವು. ಈ ಅಲ್ಪಸಂಖ್ಯಾತ ಸಮುದಾಯದ ಮಂದಿಯಿಂದ ಬಲವಂತವಾಗಿ ಹತ್ತಿ ಹೆಕ್ಕುವ ಕೆಲಸ ಮಾಡಿಸಲಾಗುತ್ತಿದೆ ಎಂದು ಕೆಲ ವರದಿಗಳನ್ನು ಆಧರಿಸಿ ಕಂಪೆನಿಗಳು ಹೇಳಿಕೆ ಬಿಡುಗಡೆಗೊಳಿಸಿದ್ದವು.

ಎಚ್&ಎಂ ಹೇಳಿಕೆಗಳ ಸ್ಕ್ರೀನ್ ಶಾಟ್‍ಗಳನ್ನು ಚೀನೀ ಕಮ್ಯುನಿಸ್ಟ್ ಪಕ್ಷದ  ಕಮ್ಯುನಿಸ್ಟ್ ಯುತ್ ಲೀಗ್ ಮಂಗಳವಾರ  ಸಾಮಾಜಿಕ ಜಾಲತಾಣ ವೀಬೋದಲ್ಲಿ ಶೇರ್ ಮಾಡಿದ ನಂತರ ಮತ್ತೆ ಅವುಗಳು ಸುದ್ದಿಯಲ್ಲಿವೆ. "ಕ್ಸಿನ್ಜಿಯಾಂಗ್ ಹತ್ತಿಯನ್ನು ಬಹಿಷ್ಕರಿಸಲು ವದಂತಿಗಳನ್ನು  ಹರಡುತ್ತೀರಾ ಹಾಗೂ ಅದೇ ಸಮಯ ಚೀನಾದಲ್ಲಿ  ಹಣ ಮಾಡಲು ಬಯಸಿದ್ದೀರಾ?" ಎಂದು ಲೀಗ್ ಪೋಸ್ಟ್ ಮಾಡಿತ್ತು.

ಇದರ ಬೆನ್ನಲ್ಲೇ ಚೀನಾದ ಸರಕಾರಿ ಪ್ರಾಯೋಜಿತ ಸುದ್ದಿ ಸಂಸ್ಥೆಗಳು ಎರಡೂ ಬ್ರ್ಯಾಂಡ್‍ಗಳನ್ನು ಟೀಕಿಸಲು ಆರಂಭಿಸಿದ್ದವಲ್ಲದೆ ವಾಂಗ್ ಯಿಬೊ, ಹುವಾಂಗ್ ಕ್ಸುವಾನ್ ಹಾಗೂ ವಿಕ್ಟೋರಿಯಾ ಸಾಂಗ್ ಸಹಿತ ಹಲವು ಸೆಲೆಬ್ರಿಟಿಗಳು ಎರಡೂ ಕಂಪೆನಿಗಳ ಜತೆ ಸಂಬಂಧ ಕಡಿದುಕೊಂಡರಲ್ಲದೆ "ಐ ಸಪೋರ್ಟ್ ಕ್ಸಿನ್ಜಿಯಾಂಗ್ ಕಾಟನ್" ಚೀನಾದ ಸಾಮಾಜಿಕ ಜಾಲತಾಣ ವೀಬೋದಲ್ಲಿ ಟ್ರೆಂಡಿಂಗ್ ಆಗಿದೆ.

ಎಚ್&ಎಂ ಕಂಪೆನಿಗೆ  ಅಗತ್ಯ ವಸ್ತುಗಳನ್ನು ಪ್ರಮುಖವಾಗಿ ಚೀನಾದಿಂದ ಪೂರೈಕೆಯಾಗುತ್ತದೆಯಲ್ಲದೆ ಅದರ ಉತ್ಪನ್ನಗಳಿಗೆ ಚೀನಾದಲ್ಲಿ ದೊಡ್ಡ ಮಾರುಕಟ್ಟೆಯಿದೆ. ಈ ಕಂಪೆನಿಯ ಸ್ಟೋರ್‍ಗಳನ್ನು ಚೀನಾದಲ್ಲಿ  ಮುಚ್ಚಲಾಗಿದೆಯೆಂದೂ ವರದಿಯಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News