ಲೈಂಗಿಕ ಕಿರುಕುಳ ಸಾಬೀತು: ಸಿಆರ್‌ಪಿಎಫ್ ಡಿಐಜಿ ಅಮಾನತು

Update: 2021-04-01 04:14 GMT
ಸಾಂದರ್ಭಿಕ ಚಿತ್ರ (source: PTI)

ಹೊಸದಿಲ್ಲಿ, ಎ.1: ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪವು ಆಂತರಿಕ ವಿಚಾರಣೆ ವೇಳೆ ಸಾಬೀತಾದ ಹಿನ್ನೆಲೆಯಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಮುಖ್ಯ ಕ್ರೀಡಾಧಿಕಾರಿ ಡಿಐಜಿ ಖಜಾನ್ ಸಿಂಗ್ ಮತ್ತು ಕೋಚ್, ಇನ್‌ಸ್ಪೆಕ್ಟರ್ ಸುರ್ಜೀತ್ ಸಿಂಗ್ ಅವರನ್ನು ಅಮಾನತು ಮಾಡಲಾಗಿದೆ ಎಂದು ಅಧಿಕೃತ ಮೂಲಗಳು ಹೇಳಿವೆ.

30 ವರ್ಷ ವಯಸ್ಸಿನ ಮಹಿಳಾ ಕಾನ್‌ಸ್ಟೇಬಲ್ ನೀಡಿದ ದೂರಿನ ವಿಚಾರಣೆ ನಡೆಸಿದ ಸಿಆರ್‌ಪಿಎಫ್ ಇನ್‌ಸ್ಪೆಕ್ಟರ್ ಜನರಲ್ ಚಾರು ಸಿನ್ಹ ನೇತೃತ್ವದ ಸಮಿತಿ, ಮಹಿಳಾ ಪಿಸಿ ನೀಡಿದ ದೂರು ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ಅಭಿಪ್ರಾಯಪಟ್ಟಿದೆ. ಪ್ರಾಥಮಿಕ ತನಿಖೆಯ ವರದಿ ಆಧಾರದಲ್ಲಿ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ವಿವರಿಸಿದ್ದಾರೆ.

ದೇಶದ ಅತಿದೊಡ್ಡ ಅರೆಮಿಲಿಟರಿ ಪಡೆಯ ಮುಖ್ಯ ಕ್ರೀಡಾಧಿಕಾರಿಯಾಗಿದ್ದ ಖಜಾನ್ ಸಿಂಗ್, 1986ರ ಸಿಯೋಲ್ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ 200 ಮೀಟರ್ ಬಟರ್‌ಫ್ಲೈ ಈಜು ಸ್ಪರ್ಧೆಯಲ್ಲಿ ಬೆಳ್ಳಿಪದಕ ಗೆದ್ದಿದ್ದರು. ಇದು ಈಜಿನಲ್ಲಿ ಭಾರತಕ್ಕೆ 1951ರ ಬಳಿಕ ಬಂದ ಮೊದಲ ಪದಕವಾಗಿತ್ತು.

ಖಜಾನ್ ಸಿಂಗ್ ವಿರುದ್ಧ ಕಳೆದ ವರ್ಷದ ಡಿಸೆಂಬರ್‌ನಲ್ಲಿ ಬಾಬಾ ಹರಿದಾಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಇಬ್ಬರು ಅಧಿಕಾರಿಗಳು ತನ್ನ ಮೇಲೆ ಅತ್ಯಾಚಾರ ಎಸಗಿದ್ದಲ್ಲದೇ ಇತರ ಮಹಿಳಾ ಪಿಸಿಗಳಿಗೂ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಮಹಿಳಾ ಪಿಸಿ ದೂರು ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News